Monday, February 16, 2009

ಕೆಲಸವಿಲ್ಲದವನು ಅಡಿಕೆ ಮರ ಹತ್ತಿದಾಗ…

“Let us rise up and be thankful, for if we didn't learn a lot today, at least we learned a little, and if we didn't learn a little, at least we didn't get sick, and if we got sick, at least we didn't die; so, let us all be thankful.” – Buddha.

ಇತ್ತೀಚೆಗೆ ನನಗೆ ಕೆಲಸ ಕಡಿಮೆಯಿದ್ದಾಗ ನನ್ನ ಕೆಲಸಕ್ಕೆ ರಜೆ ಹಾಕಿ ಮನೆ ಕಡೆ ಹೆಜ್ಜೆ ಹಾಕಿದ್ದೆ. ನಮ್ಮ ಮನೆಗೆ ಇತ್ತೀಚೆಗೆ ಕರೆಂಟ್ ಹಾಕಿಸಲಾಗಿದೆ. ಆದ್ದರಿಂದ ನೋಡಲು ಇರುವುದು ಬರಿ ಬೆಳಕು ಮಾತ್ರ. ಟಿ.ವಿ. ತನ್ನ ಅಟ್ಟಹಾಸವನ್ನು ಪ್ರಾರಂಭಿಸಬೇಕಷ್ಟೆ. ಹಾಗಾಗಿ ನಾನು ಏನಾದರೂ ನನ್ನ ಸಮಯವನ್ನು ಕೊಲ್ಲಲು ಬಳಸುವ ದಾರಿ ಎಂದರೆ ತೋಟದ ಕಡೆಗೆ ಹೋಗುವುದು. ಅಡಿಕೆ ಮರಗಳು ಹೇಗಿವೆ? ಯಾವಾಗ ನೀರು ಹಾಕಬಹುದು? ಅಡಿಕೆ ಹಣ್ಣಾಗಿದೆಯೆ? ಹುಲ್ಲು ಜಾಸ್ತಿ ಬೆಳೆದಿದ್ದರೆ ಕಡಿಸಲು ಜನ ತರಿಸಿದರೆ ಹೇಗೆ? ಎಷ್ಟು ಖರ್ಚಾಗಬಹುದು? ಬಾಳೆಗಿಡದಲ್ಲಿ ಬಾಳೆ ಕಾಯಿ ಬೆಳೆದಿದೆಯೇ? ಹೀಗೆ ಸಾಗುತ್ತಿರುತ್ತದೆ ನನ್ನ ಯೋಚನಾ ಲಹರಿ.

ಅಡಿಕೆ ಮರ ಅಂದಾಗ ನನ್ನ ಗೆಳೆಯರ ಕಿವಿ ನೆಟ್ಟಗಾಗುತ್ತದೆ. ಹೇಯ್ ಸಾಹುಕಾರ! ಎಷ್ಟು ಎಕರೆ ಇದೆ ತೋಟ? ಎನ್ನುತ್ತಾರೆ. ಆದರೆ ಹೆಚ್ಚಿನವರಿಗೆ ಗೊತ್ತಿರದ ಮತ್ತು ಅಡಿಕೆ ಬೆಳೆಗಾರರಿಗಷ್ಟೆ ಗೊತ್ತಿರುವ ಒಂದು ವಿಷಯವಿದೆ. ಅದೆಂದರೆ, ಕೆಲಸಗಾರರ ಸಮಸ್ಯೆ. ಇತ್ತೀಚೆಗೆ ಪ್ರತಿ ಯುವಕನಿಗೂ ನೀಲಿ ಕಾಲರಿನ ಕೆಲಸ ಬೇಡ. ಗಾಡಿ ದೂಡುವ ಕೆಲಸ ಇದ್ದರೂ ಸರಿ, ಸಂಬಳ ಕಡಿಮೆಯಾದರೂ ಸರಿ, ಪೇಟೆ ಸೇರಿಕೊಂಡು ಬಿಡುತ್ತಾರೆ. ಇವತ್ತು ನಮ್ಮ ಮನೆಯಲ್ಲಿರುವುದು ಕೂಡ ಮುದುಕರಾದ ಅಪ್ಪ ಮತ್ತು ದೊಡ್ಡಪ್ಪ. ನಮ್ಮ ಊರಿನ ಯಾವುದೆ ಮೂಲೆಗೆ ಹೋದರೂ ಯುವಕರಿರುವ ಒಂದೈದು ಮನೆಗಳು ಸಿಗಬಹುದು. ಉಳಿದೆಲ್ಲ ಮನೆಗಳದೂ ಅದೇ ರಾಗ. ಇದಕ್ಕೆ ಗ್ಲೋಬಲೈಸೇಷನ್ ನ ಶಾಪ ಏನಾದರೂ ಬಿದ್ದಿರಬಹುದಾ? ಎಂದು ಕೆಲವು ಸಲ ಯೋಚಿಸುತ್ತೇನೆ. ಸಾಮಾನ್ಯ ಕೆಲಸಕ್ಕೆ ಯಾರಾದರೂ ಸಿಗಬಹುದು. ಆದರೆ ಮರ ಹತ್ತುವಂತಹ ಕೆಲಸಕ್ಕೆ ಜನವೇ ಸಿಗುವುದಿಲ್ಲ. ಹಾಗಾಗಿ ಹಿಂದೊಮ್ಮೆ ಸಲ ಹೋದಾಗ ಇಡೀ ದಿನ ದೋಂಟಿ(ಬಿದಿರಿನ ದೊಡ್ಡದಾದ ಕೋಲು) ಹಿಡಿದು ಅಡಿಕೆ ಕೊಯ್ದಿದ್ದೆ. ಹೆಕ್ಕುವುದು ಮತ್ತು ಹೊರುವುದಕ್ಕೆ ಅಪ್ಪ ನೆರವಾಗಿದ್ದರು. ಆದರೆ ಈ ಸಲ ಊರಿಗೆ ಹೋದಾಗ ಹೊಸದೊಂದು ಸಾಹಸಕ್ಕೆ ಕೈ ಹಾಕಿದೆ. ಅದೇ ಅಡಿಕೆ ಮರ ಹತ್ತುವುದು !

ಅಯ್ಯೋ ಅಡಿಕೆ ಮರ ಹತ್ತುವುದೇನು ದೊಡ್ಡ ವಿಷಯ? ಎಂದು ಹಲವರು ಮೂಗು ಮುರಿಯಬಹುದು. ಆದರೆ ಹತ್ತಿದವನಿಗೆ ಮಾತ್ರ ಗೊತ್ತು ಅದರ ಕರ್ಮ !. ನೀವು ಒಂದು ಮೀಟರ್ ಹತ್ತಿದಾಗ “ಉಸ್ಸಪ್ಪಾ!” ಅನ್ನುತ್ತೀರ. ಎರಡನೇ ಮೀಟರ್ ಗೆ “ಅಯ್ಯಪ್ಪಾ!” ಆಗುತ್ತದೆ. 4 ಮೀಟರ್ ಹತ್ತುವಷ್ಟರ ವೇಳೆಗೆ “ಹರೋ ಹರ” ವಾಗುತ್ತೀರ. ಯಾಕೆಂದರೆ, ಮರ ಹಿಡಿದುಕೊಂಡ ಕೈ ನೋಯಲು ಶುರುವಾಗುತ್ತದೆ. ಹತ್ತಿದ ಕಾಲು ಶಕ್ತಿಯಿಲ್ಲದೆ ನಡುಗಲು ಶುರುವಾಗುತ್ತದೆ. ಅಲ್ಲಿಗೆ ನಿಮ್ಮದು “ತ್ರಿಶಂಕು ಸ್ವರ್ಗ”. ಆ ಕಡೆ ಮೇಲೆಯೂ ಹೋಗಲಾಗುವುದಿಲ್ಲ ಕೆಳಗೂ ಬರಲಾರಿರಿ ಅಂಥದೊಂದು ಅನುಭವ. ಇಂಥ ಅನುಭವ ನನಗೆ ಸಣ್ಣವನಿರುವಾಗಲೇ ಇತ್ತು. ಆದುದರಿಂದ ಸರಿಯಾದ ಪರಿಕರಗಳನ್ನು ಹಿಡಿದುಕೊಂಡೇ ಹೊರಟಿದ್ದೆ. ಮರ ಹತ್ತುವುದಕ್ಕೆ ಸಹಕಾರಿಯಾಗಲು ಹಗ್ಗವನ್ನು ಸಣ್ಣದಾಗಿ ಕಟ್ಟಿ ಕಾಲಿಗೆ ಹಾಕಿಕೊಳ್ಳುತ್ತೇವೆ. ಇದಕ್ಕೆ “ತಳೆ” ಎನ್ನುತ್ತಾರೆ. ಇನ್ನೊಂದು ಪರಿಕರವೆಂದರೆ ಮರದ ಮೇಲೆ ನೇತಾಡಿಕೊಂಡು ಕೂರಲು “ಮಣೆ”. ನಾನು ಅಡಿಕೆ ತೆಗೆಯಲು ಸುಮಾರು 20 ಅಡಿ ಎತ್ತರ ಹತ್ತಬೇಕಿತ್ತು. ಸರಿ, ಹತ್ತಲು ರೆಡಿಯಾದೆ. ಕಾಲಲ್ಲಿ ತಳೆ, ಎಡ ಹೆಗಲಲ್ಲಿ ಮಣೆ, ಬಲಗೈನಲ್ಲಿ ದೋಂಟಿ ಹಿಡಿದು ಹತ್ತತೊಡಗಿದೆ. ಹತ್ತುವಾಗ ನನಗೊಂದು ಗುರಿಯಿತ್ತು. ಅದೆಂದರೆ, ನಾನು ಹರೋಹರ ಅನ್ನುವಷ್ಟರ ಒಳಗೆ ಮಣೆ ಹಾಕಿ ಕೂತುಬಿಡಬೇಕು. ಹಾಗೆಯೇ ಆಯಿತು ಬಿಡಿ, ಮಣೆ ಹಾಕಿ ಕೂರೂವುದೇನೋ ಕೂತುಬಿಟ್ಟೆ. ಆದರೆ ಕಾಲು ಐದು ನಿಮಿಷವಾದರೂ ನಡುಗುವುದನ್ನು ನಿಲ್ಲಿಸಲಿಲ್ಲ. ಜೊತೆಗೆ ದೇಹ ಕೂಡ ಸಹಕರಿಸುವುದನ್ನು ಕೈ ಕೊಟ್ಟಿತು. ಸುಮ್ಮನೆ ಮರದ ಮೇಲೆಯೆ ಕುಳಿತೆ. ಅಲ್ಲಿಂದ ಸುತ್ತಲಿರುವ ಒಂದೈದು ಮರಗಳ ಅಡಿಕೆಯನ್ನೇನೋ ತೆಗೆದೆ. ಆದರೆ ಇಳಿಯುವಷ್ಟರ ಹೊತ್ತಿಗೆ ನನ್ನಲ್ಲಿದ್ದ ಅಡಿಕೆ ತೆಗೆಯಬಹುದೆನ್ನುವ ಆತ್ಮ ವಿಶ್ವಾಸ ಉಡುಗಿ ಹೋಗಿತ್ತು. ಕೊನೆಗೆ ಅಡಿಕೆ ಹೆಕ್ಕುತ್ತಿರುವಾಗ ಸ್ವಲ್ಪ ಬೇಲಿಯ ಪಕ್ಕ ಚಲನೆಯಾಯಿತು. ಅಪ್ಪ ಏನಾದರೂ ಬಂದು “ನಾನು ಹೆಕ್ಕುತ್ತೇನೆ, ನೀನು ಹತ್ತು ಅಂದರೆ ನನ್ನ ಮಾನ ಮರ್ಯಾದೆ ಹೋದಂತೆ” ಎಂದು ಯೋಚಿಸಿ ನಿಂತಲ್ಲೆ ನಿಂತೆ. ಅದು ಪಕ್ಕದ ಮನೆಯ ದನ ಆಗಿತ್ತು. ಹೆಕ್ಕುವುದನ್ನು ಮುಂದುವರಿಸಿದ ನನ್ನ ತಲೆ ಇದಕ್ಕೊಂದು ಗಾದೆ ಹುಡುಕಿದರೆ ಹೇಗೆ? ಅಂತ ಯೋಚಿಸತೊಡಗಿತು. ಬಂತು ನೋಡಿ ಒಂದು ಗಾದೆ; “ಹತ್ತುವವನಿಗಿಂತ ಹೆಕ್ಕುವವನೇ ಬುದ್ದಿವಂತ” ಅಂತ.

ಇನ್ನೇನು ಕೊನೆಯ ಅಡಿಕೆ ಹೆಕ್ಕಬೇಕು ಅನ್ನುವಷ್ಟರಲ್ಲಿ ನನ್ನಲ್ಲಿ ಮತ್ತೆ ಕುದುರಿತು ನೋಡಿ ಹುಚ್ಚು ವಿಶ್ವಾಸ. “ಭಲೇ ಮಗನೆ! ಒಂದು ಮರ ಹತ್ತಿದ್ದೀಯ ಭೇಷ್,” ಎಂದಿತು ಮನಸ್ಸಿನ ಒಂದು ಮೂಲೆ. ಸುಮ್ಮನಿದ್ದ ಇನ್ನೊಂದು ಮೂಲೆ ಈಗಷ್ಟೆ ಮೊದಲ project ಮುಗಿಸಿದವನು I am experienced ಅಂದ ಹಾಗೆ ಮಗನೆ, ಇನ್ನೊಂದಕ್ಕೆ ಹತ್ತು ಎಂದು ಪ್ರೇರಿಪಿಸತೊಡಗಿತ್ತು. ಅದಕ್ಕೆ ಹೇಳುವುದು ನಮ್ಮ ಮನಸ್ಸು ನಮಗೆ ಒಂದು ಗೆಳೆಯನಿದ್ದಂತೆ, ಅಂತ. ಪ್ರತಿ ಕ್ಷಣದಲ್ಲೂ ಒಂದು ಸಾತ್ವಿಕ ಹಠವನ್ನು ನನ್ನ ಮನಸ್ಸು ನನಗೆ ಕೊಡುತ್ತಲೇ ಇರುತ್ತದೆ. ಇನ್ನೂ ಸ್ವಲ್ಪ ಹೆಚ್ಚು ಸಿದ್ದತೆ ಮಾಡಿ ಎರಡನೆ ಮರ ಹತ್ತಿದೆ. ನಾನು ಮರದಲ್ಲಿ ಕೂತಿರುವುದನ್ನು ನೋಡಿ ಪಕ್ಕದ ಮನೆ ಹುಡುಗಿ ಕಿಸಕ್ಕೆಂದು ನಕ್ಕು ಓಡಿ ಹೋದಳು. “ಚೆಡ್ಡಿ ಹಾಕಿದ್ದೇನೆ ಗೊತ್ತಾಯ್ತಾ?” ಎಂದು ರೇಗಿಸುವ ಮನಸ್ಸಾದರೂ, ಸಮಯ, ಸಂದರ್ಭ ಸರಿ ಇಲ್ಲವೆಂದು ಸುಮ್ಮನಾದೆ. ಹಾಗೆ ಕುಳಿತಲ್ಲಿಯೇ, ನನ್ನ ಸಾಧನೆಗಳಿಗೆ ನಕ್ಕವರಲ್ಲಿ ಇವಳು ಎಷ್ಟನೆಯವಳಿರಬಹುದೆಂದು ಲೆಕ್ಕ ಹಾಕುವ ಮನಸ್ಸು ಮಾಡಿದೆ. ಲೆಕ್ಕ ಸಿಗಲಿಲ್ಲ. ಮನದ ಮೂಲೆಯಿಂದೊಂದು ಮಾತು ಬಂದಿತ್ತು, “ ನನ್ನ ಸಾಧನೆಗಳಿಗೆ ನಕ್ಕವರಲ್ಲಿ ನೀನು ಮೊದಲಿಗಳೂ ಅಲ್ಲ; ಕೊನೆಯವಳೂ ಅಲ್ಲ. ಇನ್ನು ಕೆಲವು ದಿನ ಅಷ್ಟೆ, ಮರ ಹತ್ತಲು ಕಲಿತು expert ಆಗುತ್ತೇನೆ” ಎಂದಿತು ಮನಸ್ಸು. ಕೊನೆಗೆ ಸಾಕು ಎನ್ನಿಸಿ ಅಲ್ಲಿಂದ ಕಾಲು ಕಿತ್ತ ನಾನು ಸಾಯಂಕಾಲ ಒಂದೈದು ಮರ ಹತ್ತಿ ಇಳಿದೆ.

Expert ಎಂದಾಗ ನನ್ನ ಯೋಚನಾ ಲಹರಿ ಬದಲಾಯಿತು. ಯಾವುದೇ ಕ್ಷೇತ್ರದಲ್ಲಿ ಇವನು expert ಅಂದರೆ ಆ ಕ್ಷೇತ್ರ ಹೆಚ್ಚಿನವರಿಗೆ ಗೊತ್ತಿರುತ್ತದೆ. ಜನ ಸಾಮಾನ್ಯರಿಗೆ ನಿಲುಕದ ಕ್ಷೇತ್ರ ಎಂದರೆ ಅದು “ಐಟಿ”. ನಾನು ಇಂಜಿನಿಯರಿಂಗ್ ಮಾಡುತ್ತಿರುವಾಗ ಒಬ್ಬಾತ ನನಗೆ ಹೇಳುತ್ತಿದ್ದ. “ಕಂಪ್ಯೂಟರ್ ನವರಿಗೆ ಕಾಮನ್ ಸೆನ್ಸ್ ಇಲ್ಲ” ಎಂಬುವುದು ಅವನ ವಾದ. ಆಗ ಸಿಟ್ಟಿನಿಂದ ಅವನಿಗೆ, “ಕಂಪ್ಯೂಟರ್ ಗೊತ್ತಿರುವ ನನಗೆ ಕಾಮನ್ ಸೆನ್ಸ್ ಇಲ್ಲದಿದ್ದರೆ ಏನಾಯ್ತು? ನಿನಗೆ ಇದ್ದರೆ ಸಾಕು !” ಎಂದಿದ್ದೆ. ಆದರೆ ಇತ್ತೀಚೆಗೆ ಅವನ ಮಾತು ಸತ್ಯ ಇರಬಹುದು ಎನಿಸುತ್ತದೆ. ಏಕೆಂದರೆ, ನಮ್ಮದು ಅಂತಿಂಥ ವಾದವಲ್ಲ; ನಮ್ಮಲ್ಲಿರುವುದು “ಪಲಾಯನ” ವಾದ. ನೀವು ಅಡಿಕೆ ಮರ ಹತ್ತುವವನಲ್ಲಿ ಮಾತನಾಡಿದ್ದರೆ ಅವನಿಗೆ ಅದರಲ್ಲಿ ಎಲ್ಲ ವಿಷಯಗಳೂ ತಿಳಿದಿರುತ್ತವೆ. ಅದೇ ಸಾಫ್ಟ್ ವೇರ್ ಇಂಜಿನಿಯರ್ ಗಳ ವಿಷಯಕ್ಕೆ ಬಂದರೆ, “ಏನು ಕೆಲಸ ಸಾರ್?” ಎಂದರೆ, “ಕಂಪ್ಯೂಟರ್ ಇಂಜಿನಿಯರ್” ಎನ್ನುತ್ತಾರೆ. “ಮನೆಯಲ್ಲಿ ಒಂದು ಕಂಪ್ಯೂಟರ್ ಕೆಟ್ಟಿದೆ, ರಿಪೇರಿ ಮಾಡಿಕೊಡಬಹುದಾ?” ಎಂದರೆ “ನನ್ನದು ಸಾಫ್ಟ್ ವೇರ್” ಎನ್ನುತ್ತಾರೆ. “ಸರಿ ಅದಾದರೂ ಮಾಡಪ್ಪ” ಎಂದರೆ “ನನ್ನದು ಮಿಡಲ್ ವೇರ್/user interface” ಎನ್ನುತ್ತಾರೆ. “ಅದೇ ಮಾಡು” ಎಂದರೆ “ಅದರಲ್ಲಿ ಇದನ್ನು ಮಾಡಿದ್ದೇನೆ” ಎನ್ನುವ ಮಾತು. ಅದನ್ನು ನೋಡಿದರೆ ಯಾರಾದರೂ ಮನೆ ಕಟ್ಟುತ್ತಿದ್ದಾಗ ಬಂದು ಸೊಳ್ಳೆ ಹೊಡೆದು, ಮನೆ ನನ್ನದೇ ಎನ್ನುವವರ ಹಾಗೆ ಇದು ಎಂದನಿಸದೆ ಇರದು. ನಿಜವಾಗಿಯೂ ಇದು common sense ಗೆ ನಿಲುಕುವ ವಿಷಯವೇ ಅಲ್ಲ ಬಿಡಿ.

ಅವತ್ತು ಸಾಯಂಕಾಲ ನನ್ನ ಪಕ್ಕದ ಮನೆಯ ಹಿರಿಯರೊಡನೆ ಅಡಿಕೆ ಮರ ಹತ್ತಿದ ವಿಷಯವನ್ನು ಹೆಮ್ಮೆಯಿಂದ ಹೇಳಿದೆ. “ಯಾಕೆ ಬೇಕು ನಿನಗೆ?” ಅಂತ ರೇಗಿದರು. ನೋಡಿದರೆ, ಅವರು ಕೂಡ ಇತ್ತೀಚೆಗೆ ಏಣಿ ಏರಿ ಅಡಿಕೆ ಕೊಯ್ಯಲು ಪ್ರಯತ್ನಿಸಿದ್ದರಂತೆ. ಎಳೆಯಲು ಹೋಗಿ ಬಿದ್ದಂತಾಯಿತಂತೆ. ಅದಕ್ಕೆ ಅಲ್ಲೇ ಬಿಟ್ಟು ಹೊರಟು ಬಂದರಂತೆ. ಹೀಗೆ ಸಾಗುತ್ತದೆ ಕಥೆ. ಕಂಪೆನಿಗಳಲ್ಲಿ ಕಲಿಯುವುದರ ಬಗ್ಗೆ ಭಾಷಣ ಬಿಗಿಯುವವರಿಗೆ ನನ್ನ ಹೊಸ ಕಲಿಕೆ ವಿಚಿತ್ರ ಎನಿಸಬಹುದು. ಆದರೆ ಜೀವನ ಎಂದರೆ ಒಂದು ಕಲಿಕೆ. ಇಲ್ಲಿ ಕಲಿತವನು ಗೆಲ್ಲುತ್ತಾನೆ. ಕಲಿಕೆಗೆ ಮನಸ್ಸಿದ್ದರೆ ಸಾಲದು, ಅದನ್ನು ಸಾಕಾರಗೊಳಿಸುವ ಪ್ರಾಮಾಣಿಕ ಪ್ರಯತ್ನ ಮತ್ತು ಸಾತ್ವಿಕ ಛಲ ಇರಬೇಕು. ಬಹುಶ: ನಾವು ಕಲಿಯಲು ಪ್ರಾರಂಭಿಸುವುದು ನಮ್ಮ ಬುಡ ತನಕ ನೀರು ತುಂಬಿದಾಗ ಮಾತ್ರ ಅನಿಸುತ್ತದೆ. ಎಲ್ಲ ಮುಗಿದು ನಾವು ಕಲಿಯಬೇಕೆನಿಸಿದ್ದನ್ನು ಸಾಧಿಸಿದಾಗ ನಾವು ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತೇವೆ. ನಮ್ಮನ್ನು ನೋಡಿ ನಕ್ಕಾತ ತನ್ನ ಕೆಲಸದೊಂದಿಗೆ ಅಸಹಾಯನಾಗಿ ಕೂತಿರುತ್ತಾನೆ. ಕೊನೆಗೆ, ಒಂದು ವೇಳೆ ಬರುವ ವರ್ಷ ಯಾರಾದರೂ ಹತ್ತುವವರು ಸಿಕ್ಕಿದ್ದರೆ ಹೇಗೆ? ಎನ್ನುವ ಆಸೆಯೂ ಮೊಳೆಯಿತು. ಆಗ ನನ್ನ ಮನಸ್ಸಿಗೆ ಥಟ್! ಅಂತ ಬಂದ ಯೋಚನೆ, “ಅವನಿಗೆ ಒಳ್ಳೆಯ ಅಪ್ರೈಸಲ್ಲು ಕೊಡಬೇಕು” ಅಂತ. ಹಾಗೆಯೇ ಒಂದೈದು ಮರ ಹತ್ತಲು ನೆರವಾದ ಕೈ ನೋಡಿದಾಗ, ಮರ ತಾಗಿ ತಾಗಿ ಗೀರು ಬಿದ್ದ ಕೈ ರಕ್ತ ಸಿಕ್ತವಾಗಿತ್ತು.