Saturday, June 26, 2010

ಅವನೊಬ್ಬನಿದ್ದ ಅಲ್ ಬ್ರೆಕ್ಟ್ ಡ್ಯೂರರ್

"The next time you see a copy of that touching creation, take a second look. Let it be your reminder, if you still need one, that no one - no one - - ever makes it alone!"

    ಅವನೊಬ್ಬನಿದ್ದ ಅಲ್ ಬ್ರೆಕ್ಟ್ ಡ್ಯೂರರ್. ವಿಶ್ವದಲ್ಲೇ ತನ್ನ ಚಿತ್ರ ಕಲೆಗೆ ಹೆಸರು ವಾಸಿಯಾಗಿದ್ದ. ಅವನು ಗತಿಸಿ ಹೋಗಿ ಸುಮಾರು ಐನೂರು ವರ್ಷಗಳಾದರೂ ಇಂದಿಗೂ ಅವನ ಕೆಲವು ಕಲೆಗಳು ಮನುಷ್ಯನಿಗೆ ಹತ್ತಿರವಾಗಿವೆ. ಅವನು ರಚಿಸಿರುವ ಹಲವು ಕಲೆಗಳಲ್ಲಿ "Praying Hands" ಹೆಸರುವಾಸಿ.

    ನೂರೆಂಬರ್ಗ್ ಪಕ್ಕದ ಹಳ್ಳಿಯೊಂದರಲ್ಲಿ ಜನಿಸಿದ ಆಲ್ಬ್ರೆಕ್ಟ್ ಆವನ ಹೆತ್ತವರ ಹದಿನೆಂಟು ಮಕ್ಕಳಲ್ಲಿ ಒಬ್ಬ. ಅದೊಂದು ದಿನ ಆಲ್ಬ್ರೆಕ್ಟ್ ಮತ್ತು ಅವನ ತಮ್ಮನಿಗೆ ಚಿತ್ರಕಾರರಾಗಬೇಕೆಂಬ ಆಸೆಯಾಯಿತು. ಆದರೆ ಅವರ ಆಸೆಯನ್ನು ಕೈಗೂಡಿಸಲು ಅವರ ಅಪ್ಪನಿಗೆ ಸಾಧ್ಯವಿರಲಿಲ್ಲ. ಇಬ್ಬರಲ್ಲಿ ಒಬ್ಬರು ಪಕ್ಕದಲ್ಲಿಯೇ ಇರುವ ಮೈನಿಂಗ್ ಕಂಪೆನಿಗೆ ಹೋಗಿ ಕೆಲಸ ನಿರ್ವಹಿಸಿ ಮತ್ತೊಬ್ಬನಿಗೆ ಕಲಿಸಲು ಸಹಾಯ ಮಾಡಬೇಕಾಗಿತ್ತು. ಒಬ್ಬ ಕಲಿತ ನಂತರ ಆತ ಇನ್ನೊಬ್ಬನಿಗೆ ಕಲಿಸುವ ಮಾತು ಕೊಟ್ಟಾಗಿತ್ತು. ಇಂತಹ ಸಮಯದಲ್ಲಿ ಯಾರು ಮೊದಲೆಂದು ನಿರ್ಧರಿಸಲು ಅವರಿಬ್ಬರು ಆಯ್ದುಕೊಂಡ ಹಾದಿ "ನಾಣ್ಯ ಚಿಮ್ಮುಗೆ". ವಿಧಿ ಆಲ್ಬ್ರೆಕ್ಟ್ ನಿಗೆ ಚಿತ್ರಕಾರನಾಗುವ ಅವಕಾಶ ನೀಡಿತ್ತು.


    ಮುಂದಿನ ನಾಲ್ಕು ವರ್ಷಗಳಲ್ಲಿ ಆಲ್ಬ್ರೆಕ್ಟ್ ತನ್ನ ಚಿತ್ರ ಕಲಿಕೆ ಯನ್ನು ನಡೆಸಿದರೆ, ತಮ್ಮ ಮೈನಿಂಗ್ ಕಂಪೆನಿಯಲ್ಲಿ ಕೆಲಸ ಮಾಡಿ ಅಣ್ಣನಿಗೆ ಓದಿಸುತ್ತಿದ್ದ. ಆಲ್ಬ್ರೆಕ್ಟ್ ನ ಕಲೆಗಳು ಜನ ಜನಿತ ವಾಗುತ್ತಿದ್ದವು. ಕೊನೆಗೊಂದು ದಿನ ಆಲ್ಬ್ರೆಕ್ಟ್ ತಮ್ಮನಿಗೆ ಹೇಳುತ್ತಾನೆ. "ನೀನು ನನ್ನ ದೇವರಂತಹ ತಮ್ಮ. ಈಗ ಕಲಾಕಾರನಾಗುವ ಸರದಿ ನಿನ್ನದು. ಅದಕ್ಕೆ ತಗಲುವ ಎಲ್ಲಾ ಖರ್ಚು ವೆಚ್ಛಗಳನ್ನು ಭರಿಸಲು ನಾನು ಸಿದ್ಧ" ಎಂದು.


    ಈ ಮಾತನ್ನು ಕೇಳಿದ ಆಲ್ಬ್ರೆಕ್ಟ್ ನ ತಮ್ಮನಿಗೆ ಅಳು ತಡೆಯದಾಯಿತು. ಉಕ್ಕಿ ಹರಿಯುತ್ತಿದ್ದ ಕಣ್ಣೀರನ್ನು ತಡೆದುಕೊಂಡು ಹೇಳುತ್ತಾನೆ " ಅಣ್ಣ, ಇದು ನನ್ನಿಂದ ಆಗದ ಕೆಲಸ. ನನ್ನ ಸಮಯ ಆಗಿ ಬಿಟ್ಟಿದೆ. ನನ್ನ ಕೈಗಳನ್ನೊಮ್ಮೆ ನೋಡು. ಪ್ರತಿ ಬೆರಳಿನ ಮೂಳೆಗೂ ಒಂದಲ್ಲ ಒಂದು ಏಟು ಬಿದ್ದಿದೆ. ಕೈಯ ಚರ್ಮ ಕಿತ್ತು ಹರಿದಿದೆ. ನನ್ನಿಂದ ಒಂದು ಲೋಟವನ್ನು ಸರಿಯಾಗಿ ಅಲುಗಾಡದಂತೆ ಹಿಡಿಯಲಾಗುವುದಿಲ್ಲ. ಕ್ಯಾನ್ವಾಸ್ ನ ಮೇಲೆ ಹೇಗೆ ನಾಜೂಕಿನಿಂದ ಕೆಲಸ ಮಾಡಲಿ ಹೇಳು?. For me it is too late" ಎಂದು.

    ಆಲ್ಬ್ರೆಕ್ಟ್ ನ portraits, ಪೆನ್, ಚಿತ್ರಗಳು, ಬೆಳ್ಳಿಯ ಚಿತ್ರಗಳು, ತಾಮ್ರದ ಚಿತ್ರಗಳು, ವಾಟರ್ ಕಲರ್, ಮಸಿ, ಮರದ ತುಂಡುಗಳು ಇತ್ಯಾದಿ ಸುಮಾರು ಐನೂರು ವರುಷಗಳು ಕಳೆದರೂ ಇಂದಿಗೂ ವಿಶ್ವದ ಹಲವು ಸಂಗ್ರಹಾಲಯಗಳಲ್ಲಿವೆ. ಹಲವು ಮಂದಿ ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮ ರವಿ ವರ್ಮನ ಚಿತ್ರಗಳ ಹಾಗೆ ಮನೆ, ಆಫೀಸಿನ ಕೋಣೆಯಲ್ಲಿ ಈತನ ಕಲೆಗಳನ್ನು ನೇತು ಹಾಕಿದ್ದಾರೆ. ಒಂದು ದಿನ ತನ್ನ ತಮ್ಮ ಮಾಡಿದ ತ್ಯಾಗ ಮತ್ತು ತೋರಿಸಿದ ಪ್ರೀತಿಗಾಗಿ ತನ್ನ ತಮ್ಮನ ಕೈಗಳನ್ನು ಪ್ರಾರ್ಥಿಸುವ ರೂಪದಲ್ಲಿ ಬರೆದು "Hands" ಎನ್ನುವ ಹೆಸರಿಡುತ್ತಾನೆ ಆಲ್ಬ್ರೆಕ್ಟ್. ಆ ಕೈ ಮತ್ತು ಅದರ ಹಿಂದಿನ ಕಥೆಯನ್ನು ಕೇಳಿದ ಜನ "Praying Hands" ಎನ್ನುವ ಹೆಸರಿಡುತ್ತಾರೆ.


   ಆಲ್ಬ್ರೆಕ್ಟ್ ನ ತಮ್ಮ ನಮಗೆ ನಿಮಗೆಲ್ಲರಿಗೂ ತ್ಯಾಗ ಮತ್ತು ಪ್ರೀತಿಗೊಂದು ಆದರ್ಶ. ಇಂದು ಅವನ ತಮ್ಮನ ಹೆಸರು ತಿಳಿದವರು ಕಡಿಮೆ. ಕೆಲವರು ಆಲ್ಬರ್ಟ್ ಎನ್ನುತ್ತಾರೆ. ಇನ್ನು ಕೆಲವರು ಇನ್ನೇನೋ ಹೇಳುತ್ತಾರೆ. ಆದರೆ ಅವನು ಮಾಡಿದ ತ್ಯಾಗ ಮತ್ತು ನೀಡಿದ ಪ್ರೀತಿ "Praying Hands" ಆಗಿ ಇಂದಿಗೂ ವಿಶ್ವದ ಮುಂದಿದೆ.