Sunday, August 8, 2010

ಅಮ್ಮ ನಾನು ದೇವರಾಣೆ... ಬೆಣ್ಣೆ ಕದ್ದಿಲ್ಲಮ್ಮ ...

ಅವತ್ತೊಂದು ದಿನ ಮಲ್ಲೇಶ್ವರಂ ನ ಮೈದಾನದಲ್ಲಿರುವ ಕಲ್ಲು ಮೆಟ್ಟಿಲಿನಲ್ಲಿ ಕುಳಿತಿದ್ದೆ. ಅವತ್ತಿನ ದಿನ ಸಣ್ಣ ಹುಡುಗರಿಗೆ ಬಾಸ್ಕೆಟ್ ಬಾಲ್ ತರಬೇತಿ ನಡೆಯುತ್ತಿತ್ತು. ಹಾಗಾಗಿ ಪ್ರಾಕ್ಟೀಸ್ ನಡೆಯುತ್ತಿತ್ತು. ಮೊದಲು ಕೈ ಕಾಲು ಎಲ್ಲ ಸರಿಯಾಗಿ ಹಗುರವಾಗಲು exercise ಮಾಡುತ್ತಿದ್ದರು. ಆಗ ನನಗೆ ಒಬ್ಬ ನೀಲಿ ಬಣ್ಣದ ಬಟ್ಟೆ ತೊಟ್ಟಿದ್ದ ಹುಡುಗನ ಕಡೆಗೆ ದೃಷ್ಟಿ ಹೊರಳಿತು. ಸಣ್ಣ ಹುಡುಗ ಸ್ವಲ್ಪ ಪೋಲಿ :-P. ಏನೂ ಗೊತ್ತಿಲ್ಲದವರ ತರ ಕೈ ಕಾಲು ತಿರುಗಿಸುತ್ತಿದ್ದ. ಕಾಟಾಚಾರಕ್ಕೆ ಮಾಡುತ್ತಾರಲ್ಲ ಹಾಗೆ. ಬಹುಶಃ ಹೊಸಬ ಇರಬೇಕು ಎಂದು ಯೋಚಿಸುವಷ್ಟರಲ್ಲಿ ಅವನ ಮಾಸ್ಟರ್ ಅವನತ್ತ ನೋಡಿದಾಗ ಹುಡುಗ ಸರಿಯಾಗಿ ಅಟೆನ್ಷನ್ !. ಓಹ್ ಇದು ಮನಸ್ಸಿಲ್ಲದ ಮನಸ್ಸಿನಿಂದ ಹುಡುಗ ಮಾಡುತ್ತಿರುವುದೆಂದು ನನಗೆ ಅರಿವಾಯಿತು. ಅವನಿಗೆ ಆಡುವುದು ಬೇಕಾಗಿತ್ತು. ಕೈ ಕಾಲು, ಕುತ್ತಿಗೆ ತಿರುಗಿಸುವುದರಲ್ಲಿ ಇಷ್ಟವಿರಲಿಲ್ಲ. ಇವನ ನಾಟಕ ಅರಿಯಲು ಅವನ ಗುರುವಿಗೆ ಹೆಚ್ಚು ಹೊತ್ತು ಹಿಡಿಯಲಿಲ್ಲ. ಹಿಡಿದು ತಂದು ಎಲ್ಲರ ಮಧ್ಯೆ ನಿಲ್ಲಿಸಿಬಿಟ್ಟ. (ಫೋಟೋದಲ್ಲಿ ಮಧ್ಯದಲ್ಲಿರುವವನೇ ಆ ಹುಡುಗ)



ಈಗ ಹುಡುಗನಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಮಧ್ಯದಲ್ಲಿರುವ ಇವನನ್ನು ನೋಡಿಯೇ ಎಲ್ಲರೂ ಮಾಡಬೇಕು. ಅದು ನಿಯಮ. ಹುಡುಗ ಸರಿಯಾಗಿ exercise ಮಾಡುವತ್ತ ಗಮನ ಹರಿಸಲಿಕ್ಕೆ ಪ್ರಾರಂಭ ಮಾಡಿದ. ಅವನ ಗುರುವಿನ ಮೇಲೊಂದು ನನ್ಗೆ ಮೆಚ್ಚುಗೆಯೂ ಬಂದಿತು. ಅದೇ ಕಾಲಕ್ಕೆ ನಾನು ನನ್ನ ಹಿಂದಿನ ಕಥೆಯತ್ತ ಹೊರಳಿದೆ. ಹಲವರು ಹೇಳುತ್ತಿರುತ್ತಾರೆ, ಭೂತಕಾಲವನ್ನು ಮರೆತವನು ಎಂದಿಗೂ ಯಶಸ್ಸು ಗಳಿಸಲು ಸಾಧ್ಯವಿಲ್ಲ ಅಂತ.


ನಾನು ಸಣ್ಣವನಿರುವಾಗ ದೈಹಿಕ ಶಿಕ್ಷಕರು ಅಟೆನ್ಷನ್, ರೈಟ್, ಲೆಫ್ಟ್ ಎನ್ನುವ ವಿಷಯದಲ್ಲಿ ತುಂಬಾ ಆಸಕ್ತಿಯಿತ್ತು ನನಗೆ. ಆಗ ನಾನೊಬ್ಬ ಶಿಸ್ತಿನ ಸಿಪಾಯಿ. ಮೂಗಿನ ಮೇಲೆ ಮುಂಗೋಪ ಇರುವ ಭಂಡ. ಹಾಗಾಗಿ ಹೆಚ್ಚಾಗಿ ಯಾವುದಾದರೊಂದು ತಂಡಕ್ಕೆ ನಾಯಕ. ನಾಯಕನಾಗಲು ನನ್ನ ಶಿಕ್ಷಕರ ಕೈ ಕೂಡ ಇತ್ತು ಎನ್ನುವುದು ಸುಳ್ಳಲ್ಲ. ಯಾಕೋ ಏನೋ ಶಿಕ್ಷಕರ ಹತ್ತಿರವೇ ಬೆಳೆದು ಬಂದಿದ್ದೆ. ಕೆಲವು ಶಿಕ್ಷಕರು ಅವರು ಇನ್ ಚಾರ್ಜ್ ಇದ್ದ ಕ್ಲಾಸ್ ಗೆ ನನ್ನನ್ನು ಹಾಕಿಸಿಕೊಂಡು ನಾಯಕನನ್ನಾಗಿ ಮಾಡಿದ ಉದಾಹರಣೆಗಳುಂಟು. ನನಗೆ ನನ್ನ ಶಿಕ್ಷಕರಲ್ಲಿ ಇಷ್ಟವಾದ ವಿಷಯವೆಂದರೆ, ನನಗೆ ಹತ್ತಿರವಿದ್ದ ಹಲವು ಶಿಕ್ಷಕರು ನನ್ನ ಪ್ರಶ್ನೆಗಳಿಗೆ "ಸುಮ್ಮನಿರು" ಎನ್ನುವುದನ್ನು ಬಿಟ್ಟು ಅವರಿಗೆ ತಿಳಿದಿದ್ದನ್ನು ಹೇಳುವವರಾಗಿದ್ದರು. ಹಾಗಾಗಿ ಎಷ್ಟೋ ಸಲ ಎದುರು ನಿಂತು ಲೆಫ್ಟ್, ರೈಟ್ ಅಂದಿದ್ದೆ. ಇವತ್ತಿಗೂ ಹಲವು ಆಂಟಿಗಳಿಗೆ ಮಗನಾಗಿಯೇ ಇದ್ದೇನೆ. ಆದರೆ ಸಮ ವಯಸ್ಕ ಹುಡುಗಿಯರಿಗೇನೋ ಸರಿ ಬರುವುದಿಲ್ಲ :-P. ಬಹುಶಃ ನನ್ನನ್ನು ನೋಡಿದಾಗ ಹಾರ್ಟ್ ಬೀಟ್ ಜಾಸ್ತಿಯಾಗುವುದು ಕಾರಣವಿರಬಹುದು. ಸ್ವಲ್ಪ height of optimism ಆಯಿತು ಅಂತೀರಾ?

 ನಾವು ಬೆಣ್ಣೆ ಕದ್ದಿಲ್ಲಮ್ಮ ಅನ್ನುವ ದಿನಗಳೆಷ್ಟೋ. ಈ ಹುಡುಗ ಅದಕ್ಕೊಂದು ಉದಾಹರಣೆಯಷ್ಟೆ. ಸಣ್ಣವನಿರುವಾಗ ಮಾಡಿದ ಹಲವು ಸಣ್ಣ ಸಣ್ಣ ಅಭ್ಯಾಸಗಳೇ ಇಂದು ನನ್ನನ್ನು ರೂಪಿಸಿವೆ ಎಣಿಸಿಕೊಳ್ಳುತ್ತಿರುತ್ತೇನೆ. ಇನ್ನು ಕೆಲವು ವರ್ಷ ಕಳೆದರೆ ಮತ್ತೆ ರೈಟ್, ಲೆಫ್ಟ್ ಎನ್ನಬೇಕಾಗುತ್ತದೆ. ಆಗ ಆಡುವುದಕ್ಕಲ್ಲ, ಬದುಕುವುದಕ್ಕೆ. ಅಲ್ವೇ ?? :)