Showing posts with label beauty. Show all posts
Showing posts with label beauty. Show all posts

Thursday, July 24, 2008

ಸೌಂದರ್ಯ

– ಸಮಸ್ಯೆಯನ್ನು ದೂರ ಮಾಡುವಲ್ಲಿ ಸಹಕಾರಿಯೆ?

ಸೌಂದರ್ಯದ ಬಗ್ಗೆ ನೀನು ಏನು ಹೇಳುತ್ತೀಯ ಅಂತ ನನಗೆ curiousity ಇದೆ ಅಂತ ನನ್ನ ಗೆಳೆಯರಲ್ಲೊಬ್ಬರು ಹೇಳಿದರು. ಹಾಗಾಗಿ ಈ ಬರಹ...

ಸೌಂದರ್ಯ ಎನ್ನುವುದು ಇರುವವನಿಗಿಂತ ನೋಡುವವನ ಮೇಲೆ ಅವಲಂಬಿತವಾದದ್ದು. ಸೌಂದರ್ಯವನ್ನು ಬಾಹ್ಯ ಮತ್ತು ಆಂತರಿಕವೆಂದು ವಿಂಗಡಿಸಬಹುದು. ಬಾಹ್ಯ ಸೌಂದರ್ಯದ ಬಗ್ಗೆ ಹೇಳುವುದಾದರೆ, ಒಬ್ಬ ಮನುಷ್ಯ ಯಾರಿಗಾದರೂ ಕುರೂಪಿಯಾಗಿ ಕಾಣಬಹುದು. ಆದರೆ ಆತನ ತಾಯಿ/ಹೆಂಡತಿಗೆ ಆತ ಸುಂದರನಾಗಿರುವ ಸಾಧ್ಯತೆಯೇ ಹೆಚ್ಚು. “ಹೆತ್ತ ತಾಯಿಗೆ ಹೆಗ್ಗಣವೂ ಮುದ್ದು” ಎನ್ನುವ ಮಾತಿದೆ. ಒಬ್ಬನ ಆಂತರಿಕ ಸೌಂದರ್ಯವನ್ನು ಅಳೆಯುವುದು ಕಷ್ಟವೆ. ಅದನ್ನು ಅಳೆಯಬೇಕೆಂದರೆ ಅದಕ್ಕೆ ಸರಿಯಾದ ಸನ್ನಿವೇಶ ಸ್ರಷ್ಟಿಯಾಗಬೇಕು. ಆಗಲೇ ಆಂತರಿಕ ಸೌಂದರ್ಯವೆನ್ನುವುದು ಪ್ರಕಟಗೊಳ್ಳುವುದು. ಹಾಗಾಗಿ ಹೆಚ್ಚಿನವರು ಬಾಹ್ಯ ಸೌಂದರ್ಯಕ್ಕೇ ಗಂಟು ಬಿದ್ದಿರುತ್ತಾರೆ. ಯಾವುದೇ ಮನುಷ್ಯ ಮತ್ತೊಬ್ಬ ಮನುಷ್ಯನ ಮನಸ್ಸಿಗೆ ಹಿಡಿಸಬೇಕೆನ್ನಿಸಿದರೆ ಮೇಲೆ ಹೇಳಿದ ಎರಡರಲ್ಲೊಂದು ಸೌಂದರ್ಯವಿರಲೇಬೇಕು. ಅವಿಲ್ಲವೆಂದರೆ ಆತ ತನ್ನ ಜೀವನವನ್ನು ಬದುಕುತ್ತಿಲ್ಲ; ಅದರ ಬದಲಾಗಿ ತನಗಿರುವ ಅಮೂಲ್ಯ ಸಮಯವನ್ನು ತಳ್ಳುತ್ತಿದ್ದಾನೆ ಎಂದೇ ಅರ್ಥ. ನನಗೆಲ್ಲೋ ಓದಿದ ನೆನಪು; ಒಬ್ಬ ಮನುಷ್ಯ ಸುಂದರವಾಗಿ ಕಾಣಬೇಕೆಂದರೆ ಅವನ ಮುಖದಲ್ಲಿ ಸ್ವಲ್ಪ ಮುಗ್ದತೆ ಇರಬೇಕಂತೆ. ನನಗೂ ಹೌದು ಅನಿಸುತ್ತದೆ. ಉದಾಹರಣೆಗೆ ಪ್ರತಿ ಮಗುವೂ ನೋಡಲು ಸುಂದರ ಅಲ್ಲವೆ?

ಬಾಹ್ಯ ಸೌಂದರ್ಯದ ಬಗ್ಗೆ ಹೇಳುವುದಾದರೆ, ಹಲವರು ತಾವು ಸುಂದರವಾಗಿ ಕಾಣಬೇಕು ಎಂದು ಯೋಚಿಸುತ್ತಾರೆ. ಬಾಹ್ಯ ಸೌಂದರ್ಯ ಎಷ್ಟೇ ಅಂದರೂ ಒಂದು ಅನಗತ್ಯವಾದ ಗುರುತನ್ನು(recognition) ಕೊಡುತ್ತದೆ. ಸ್ವಲ್ಪ ಸ್ವೇಚ್ಛಾ ಮನೋಭಾವದವರಾಗಿದ್ದರೆ ಕೇಳುವುದೇ ಬೇಡ. ತಮ್ಮ ಸೌಂದರ್ಯವನ್ನು ಬಳಸಿಕೊಂಡು ತಮಗೇನು ಬೇಕು ಅವನ್ನೆಲ್ಲ ಚಿಟಿಕೆ ಹೊಡೆಯುವಷ್ಟರಲ್ಲಿ ಮಾಡಿರುತ್ತಾರೆ. ಸಮಸ್ಯೆ ಯಾರಿಗೆಂದರೆ, ಸ್ವಲ್ಪ ಮಧ್ಯಮ ವರ್ಗದ ಧರ್ಮ, ಸಂಸ್ಕಾರವನ್ನು ಪಾಲಿಸುವ ಹೆಣ್ಣುಮಕ್ಕಳಿಗೆ. ಯಾಕೆಂದರೆ ಅವರಿಗೆ ಒಬ್ಬ ಗಂಡಿನ ಜೊತೆ ಹರಟಿದರೆ ಸಾಕು ಊರೆಲ್ಲ ಸುದ್ದಿಯಾಗುತ್ತದೆ. ಊರನ್ನೇ ಎದುರು ಹಾಕಿಕೊಳ್ಳುವ ಧೈರ್ಯ ಅಪ್ಪ ಅಮ್ಮನಿಗಿರುವುದಿಲ್ಲ. ಒಬ್ಬ ಸೌಂದರ್ಯವತಿ ಮಗಳು, ಅಂಗೈಯ ಮೇಲೆ ಇಟ್ಟಿರುವ ಕೆಂಡ ಎಂದು ಅವರಿಗೆ ಗೊತ್ತಿರುತ್ತದೆ. ಅದಕ್ಕಾಗಿಯೇ ಸಾವಿರಾರು ಕಟ್ಟುಪಾಡುಗಳೂ ಇರುತ್ತವೆ. ಅದರಲ್ಲಿ ರಾತ್ರಿಯಾಗುವುದರೊಳಗಾಗಿ ಮನೆಗೆ ಬರಬೇಕು ಎಂಬುದೂ ಒಂದು. ಯಾಕೆಂದರೆ ಬಡಪಾಯಿ ತಾಯಿ, ತಂದೆ ನಡು ರಸ್ತೆಯಲ್ಲಿ ನಿಂತು ಜಗಳವಾಡಲಾರರು. ಅವರಿಗೇನಂದರೂ ಮಾನ, ಮರ್ಯಾದೆ, ಸಂಸ್ಕಾರವಷ್ಟೇ ಮುಖ್ಯ. ಇಂತಹ ಕುಲದಲ್ಲಿ ಬೆಳೆದು ನಿಂತ ನಾರಿ ಸ್ವೇಚ್ಛೆಯಿಂದ ಬೆಳೆದ ನಾರಿ ಥರ ಗಂಡಿನ ಚುಡಾಯಿಸುವಿಕೆಯನ್ನು enjoy ಮಾಡಲಾರಳು. ಅವಳಿಗೆ ಅವೇನಿದ್ದರೂ ಒಂದು ಕಿರಿ ಕಿರಿ ಮತ್ತು ಹೆದರಿಕೆ ಅಷ್ಟೆ.

ಇಲ್ಲಿ ನನಗೆ ಹಳೆಯ ಕಾಲದ ಒಂದು ಮಾತು ನೆನಪಿಗೆ ಬರುತ್ತಿದೆ. “ಭಾರ್ಯಾ ರೂಪವತೀ ಶತ್ರು:” ಅಂತ. “ನಿಮ್ಮ ಹೆಂಡತಿ ರೂಪವತಿಯಾಗಿದ್ದರೆ ಅದಕ್ಕಿಂತ ದೊಡ್ಡ ಶತ್ರು ಬೇರೆ ಯಾರೂ ಇಲ್ಲ” ಅಂತ. ಹೆಂಡತಿ ರೂಪವತಿಯಾಗಿರುವ ಅಪಾಯವೇನೆಂದರೆ ಮೊದಲನೆಯದಾಗಿ, ನಿಮ್ಮ ಐಡೆಂಟಿಟಿಯೇ ನಾಶವಾಗಬಹುದು. ಎರಡನೆಯದಾಗಿ ನಿಮಗೆ ಆಕೆಯನ್ನು ಪಡೆಯುವ ತನಕ ಪಡೆಯುತ್ತೇನೋ ಇಲ್ಲವೋ ಎಂಬ ಅವ್ಯಕ್ತ ಹೆದರಿಕೆ ಮತ್ತು ಪಡೆದ ನಂತರವೂ ಕಳೆದುಕೊಳ್ಳುತ್ತೇನೇನೋ ಎನ್ನುವ ಭಯ. ಮೂರನೆಯಾದಾಗಿ, ನಿಮ್ಮ ಹೆಂಡತಿಯಿಂದಾಗಿ ಬೇರೆಯವರು ನಿಮ್ಮ ಜೀವವನ್ನೇ ತೆಗೆಯುವ ಸನ್ನಿವೇಶವೂ ಒದಗಬಹುದು. ಈ ಒಂದು ಮಾತು ಇವತ್ತಿಗೂ ಅನ್ವಯಿಸುತ್ತದೆ ಎಂದು ನನಗೆ ಅನಿಸುತ್ತದೆ.

ಆಂತರಿಕ ಸೌಂದರ್ಯದ ಬಗ್ಗೆ ಹೇಳುವುದಾದರೆ, ಅದನ್ನು ಗುರುತಿಸುವುದು ನಾನು ಮೊದಲೇ ಹೇಳಿದಂತೆ ಸ್ವಲ್ಪ ಕಷ್ಟದ ಕೆಲಸ. ಅದನ್ನು ಅರ್ಥ ಮಾಡಿಕೊಳ್ಳಲು ಸಲ್ಪ ಸಮಯ ಬೇಕು. ಬಾಹ್ಯ ಸೌಂದರ್ಯದ ತರಹ ಕ್ಷಣ ಮಾತ್ರದಲ್ಲಿ ನಿರ್ಧರಿಸುವಂಥದ್ದಲ್ಲ ಆಂತರಿಕ ಸೌಂದರ್ಯ. ಆದರೆ ಹೆಚ್ಚಾಗಿ ಇದು ಜನರ ನೋಟದಲ್ಲಿ, ಅವರ ಭಾವದಲ್ಲಿ, ಮಾತಿನಲ್ಲಿ ಮತ್ತು ಅವರು ಮಾಡುವ ಕಾರ್ಯದಲ್ಲಿ ನಮಗೆ ಗೊತ್ತಾಗುತ್ತಿರುತ್ತದೆ. ನಾನು ಯಶವಂತಪುರ - ಶಿವಾಜಿನಗರ ಬಸ್ ನಲ್ಲಿ ಒಬ್ಬ ಕಂಡಕ್ಟರನನ್ನು ನೋಡಿದ್ದೇನೆ. ಹೆಚ್ಚಿನ ಕಂಡಕ್ಟರುಗಳು ಗೋಗರೆದರೂ ಜನ ಬಾಗಿಲಿನಿಂದ ಮೇಲೆ ಬರಲೊಲ್ಲರು. ಆದರೆ ಆತ ಹೇಳುವ ರೀತಿ ಹೇಗಿರುತ್ತದೆಂದರೆ, ಎಂಥವನಿಗೂ ಬಾಗಿಲಿನಿಂದ ಮೇಲೆ ಬಂದು ಬದಿಯಲ್ಲಿ ನಿಲ್ಲುವ ಮನಸ್ಸಾಗುತ್ತದೆ. ಹೆಚ್ಚಾಗಿ ನಾನು ಗಮನಿಸುತ್ತಿರುತ್ತೇನೆ, ಬಾಹ್ಯ ಸೌಂದರ್ಯವನ್ನು ಗುರುತಿಸುವವರಿಗೆ ಒಂದು ಊರಿನಲ್ಲಿರುವ ಜನರು ಎಷ್ಟು ಒಳ್ಳೆಯವರು ಎನ್ನುವುದಕ್ಕಿಂತ ಅವರು ವಾಸಿಸುವ ಸ್ಥಳ ಶುಚಿಯಾಗಿಲ್ಲ ಎನ್ನುವುದೇ ಮುಖ್ಯವಾಗಿರುತ್ತದೆ. ಅವರನ್ನು ಕಂಡರೆ ಸಾಕು ವಾಂತಿ ಬರುವಂತಾಗುತ್ತದೆ ಎನ್ನುತ್ತಾರೆ. ಅಂಥವರು ಒಂದು ಹೆಜ್ಜೆ ಮುಂದೆ ಹೋಗಿ ಆಂತರಿಕ ಸೌಂದರ್ಯವನ್ನು ಗ್ರಹಿಸುವುದು ಕನಸಿನ ಮಾತು.

ಸೌಂದರ್ಯವೆಂದ ನಂತರ ಅದರಿಂದ ಒಳ್ಳೆಯದು, ಕೆಟ್ಟದು ಎರಡೂ ಇರುತ್ತದೆ. ಸುಂದರವಾಗಿರುವ ಹುಡುಗಿ ತನಗೆ ಬೇಕಾಗಿರುವ ಗಂಡು ಸಿಗುವ ತನಕ ಕಾಯಬಹುದು. ಒಬ್ಬ ಸಾಮಾನ್ಯ ಹುಡುಗಿಗೆ ಅಂತಹ ಒಂದು option ಇರುವುದಿಲ್ಲ. ಅದೇ ರೀತಿ ಸೌಂದರ್ಯವಿದ್ದರೆ ಕೊಂಕು ನುಡಿಯುವ ಮತ್ಸರದ ಮಂದಿಗೇನೂ ಕಡಿಮೆಯಿರುವುದಿಲ್ಲ. ಒಬ್ಬ ಸಾಮಾನ್ಯ ಹುಡುಗಿಗೆ ಇಂಥ ಅಡಚಣೆಗಳಿರುವುದಿಲ್ಲ. ಸೌಂದರ್ಯವಿರಲಿ ಇಲ್ಲದಿರಲಿ, ನನ್ನ ಪ್ರಕಾರ ಜೀವನದಲ್ಲಿ ಮುಖ್ಯವಾಗಿರುವುದು ಏನಂದರೆ ಮೂಲ ತತ್ವಗಳು (principles). ಗೆಲುವು, ಸೋಲು ಜೀವನದಲ್ಲಿ ಇರುವಂತಹುದೆ. ಮೂಲ ತತ್ವಗಳು ಇಲ್ಲವಾಗಿ ಬರೀ ಸ್ವೇಚ್ಛೆಯೇ ಮುಖ್ಯವಾದಲ್ಲಿ, ಮನುಷ್ಯ ಎಷ್ಟೇ ಸೌಂದರ್ಯವಿದ್ದರೂ ಮೇಲೇಳಲಾರ ಅಲ್ಲವೇ? ನಿಮಗೇನನಿಸುತ್ತದೆ?