Showing posts with label humour. Show all posts
Showing posts with label humour. Show all posts

Friday, July 12, 2013

ಅವಸರವೇ ಅಪಘಾತಕ್ಕೆ ಕಾರಣ !!! ...

    ಹಲವು ಸಲ ನಮಗೆ ನಮ್ಮ ಮೇಲೆ ಅತಿಯಾದ ವಿಶ್ವಾಸ ಇರುತ್ತದೆ. ಯಾರು ಏನೇ ಹೇಳಲಿ ನಮ್ಮಲ್ಲಿ ಸಿದ್ಧ ಉತ್ತರ ಬರುತ್ತದೆ. ಏನು? ಅಷ್ಟು ಗೊತ್ತಿಲ್ವಾ ನಮಗೆ? ಅವನಿಂದ ಕಲೀಬೇಕಾ? ಎಂಬುದು. ಬಹುಶಃ ನಾವು ಸ್ವಲ್ಪ ಜಾಗರೂಕತೆಯಿಂದ ವಾಸ್ತವತೆಯತ್ತ ಗಮನ ಹರಿಸಿದರೆ ಎಷ್ಟೋ ವಿಷಯಗಳ ಸಮಾಧಾನ ದೊರೆಯಬಹುದು. ಉದಾಹರಣೆಗೆ ಕೆಲವು ದಿನಗಳ ಹಿಂದೆ ಓದಿದ ಕಾಲಮ್ ನೆನಪಿಗೆ ಬರುತ್ತದೆನಮ್ಮ ಬಿ. ಎಂ. ಟಿ. ಸಿ. ಬಸ್ ಹಲವು ಅಪಘಾತಗಳನ್ನು ಗಮನಿಸಿದವರು ಒಂದು ಉತ್ತಮವಾದ ಕಾರಣವನ್ನು ನೀಡಿದ್ದಾರೆ. ಅದೆಂದರೆ, ಹಲವು ಅಪಘಾತಗಳಿಗೆ ಡ್ರೈವರ್ ಜವಾಬ್ದಾರನೇ ಆಗಿರುವುದಿಲ್ಲ ಎಂಬುದು. ಅಪಘಾತಗಳಲ್ಲಿ ಹೆಚ್ಚಾಗಿ ಬೇರೆ ವಾಹನಗಳ ಸವಾರರು ಬಸ್ ನಿಂದ ತಪ್ಪಿಸಿಕೊಳ್ಳಲು ಹೋಗಿ, ಡಿವೈಡರ್ ಗೆ ಗುದ್ದಿ ಬಸ್ ಚಕ್ರದಡಿಗೆ ಬಿದ್ದಿರುತ್ತಾರೆ. ಹಾಗಾಗಿ ಡಿವೈಡರ್ ಹತ್ತಿರ ಬಂದಾಗ ಪ್ರತಿಯೊಬ್ಬರೂ ಜಾಗರೂಕತೆಯಿಂದ ಇರುವುದು ಅಗತ್ಯ.

     ಕೆಲವು
ಸಲ ನಮಗೆ ನಮಗೆ ಅಕ್ಕಪಕ್ಕದವರ ಆಕ್ಸಿಡೆಂಟ್ ಕಥೆ ಕೇಳಿದಾಗ ನಗು ಬರುವುದು  ಉಂಟು; ಬೇಸರವಾಗುವುದು ಉಂಟು. ಹೀಗಾಗಿ ಸರ್ವ ಜನ ಹಿತಕ್ಕಾಗಿ ಕೆಲವು ಅಪಘಾತಗಳ ಬಗ್ಗೆ ಹೇಳೋಣ ಅನಿಸಿದೆ ನನಗೆ. ಇತ್ತೀಚೆಗೆ ನನ್ನ ಕೊಲೀಗ್ ಇದ್ದವಳು ಹೇಳುತ್ತ ಇದ್ದ ಮಾತು ನೆನಪಿಗೆ ಬರುತ್ತಿದೆ. ಹೈವೇಯಲ್ಲಿ ಆರಾಮದಲ್ಲಿ ಎಂಬತ್ತರ ಮೇಲಿನ ವೇಗದಲ್ಲಿ ಹೋಗಬಹುದು ಎನ್ನುವುದು ಅವಳ ವಾದ. ಆಗ ನಗೆ ಗೊತ್ತಿರುವವರಿಗೇ ನಡೆದ ಒಂದು ಘಟನೆಯ ಬಗ್ಗೆ  ಹೇಳಬೇಕೆನಿಸಿತು. ನನಗೆ ಗೊತ್ತಿರುವವರೊಬ್ಬರು, ಕುಣಿಗಲ್ ಹತ್ತಿರ ಬೈಕ್ ನಲ್ಲಿ ಎಂಬತ್ತರ ಮೇಲಿನ ವೇಗದಲ್ಲಿ ಹೋಗುವಾಗ ದನ ಅಡ್ಡ ಬಂದು ಕಾಲಿಗೆ ಸ್ಟೀಲ್ ರಾಡ್ ಹಾಕಿಸಿಕೊಂಡು ಮೂರು ತಿಂಗಳು ಮನೆಯಲ್ಲೇ ಮಲಗಿದ್ದರು. ಹಾಗಾಗಿ ಹೈವೇಯಲ್ಲಿ ಹೋಗುವಾಗ ದನ ಮತ್ತು ಅಡ್ಡ ದಾರಿಗಳ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.

     ಬೆಂಗಳೂರಿನಲ್ಲಿ
ಸಣ್ಣ ಗಲ್ಲಿಗಳಿಗೇನು ಕಡಿಮೆ ಇಲ್ಲ ಬಿಡಿ. ಬೆಂಗಳೂರಿನಲ್ಲಿ ವೇಗಕ್ಕಿಂತ ಹೆಚ್ಕ್ಚಾಗಿ ಯಾವುದಾದರೂ ವಾಹನ ಬರಬಹುದೋ ಏನೋ ಎನ್ನುವ ನಿರೀಕ್ಷೆ ಬಹಳ ಮುಖ್ಯ. ಹಲವು ಸಲ ನನ್ನ ಗೆಳೆಯರು ಕಡಿಮೆ ವೇಗದಲ್ಲಿಯೇ ಹೋಗಿ ಬಿದ್ದು ಎದ್ದದ್ದಿದ್ದೆ :). ಜೀವನದಲ್ಲಿ ಬಿದ್ದವನಿಗಿಂತ ಬೈಕಿನಿಂದ ಬೀಳುವುದು ಒಳಿತು ಎನ್ನುವ ವೇದಾಂತ ಬಿಟ್ಟಿದ್ದು ಇದೆ. ಬೆಂಗಳೂರಿನಲ್ಲಿ ರಾತ್ರಿ ಸವಾರರದು ಅಪಘಾತ ಕೇಳಲು ಮಜ ಇರುತ್ತದೆ. ಮಾರ್ಗ ಬಹಳ ಅಗಲವಿದೆ ಎನ್ನುವ ಖುಶಿಯಲ್ಲಿ ಗಾಡಿ ಓಡಿಸುವಾಗ ಲಗಾಮಿಲ್ಲದೆ ದಡಾರ್ ಅಂತ ಬಿದ್ದು  ಸ್ಟೀಲ್ ರಾಡ್ ಹಾಕಿಸಿಕೊಂಡವರಿಗೇನು ಕಡಿಮೆ ಇಲ್ಲ. ಲಗಾಮಿಲ್ಲದ ಕುದುರೆ ಯಾವಾಗಲು ಡೆಂಜರ್!!. ಅಪಘಾತವಾಗಲು ಕೇವಲ ನಾವು ಕಾರಣೀಭೂತರಾಗಬೇಕಿಲ್ಲ. ನಮ್ಮ ಎದುರಲ್ಲಿ ಬರುವವನಿಂದಲೂ ಆಗಬಹುದು. ಹಾಗಾಗಿ ಗಾಡಿಯ ಲಗಾಮು ಹಿಡಿದವನು ಎಚ್ಚರದಿಂದಿರುವುದು ಅಗತ್ಯ.

      ಬಹುಶಃ ನಾವು ಕಲಿಯುವಾಗಲೇ ಇಂತಹ ವಿಷಯಗಳ ಬಗ್ಗೆ ಜಾಗ್ರತೆ ವಹಿಸಿದರೆ ಒಳಿತು ಎನ್ನುವುದು ನನ್ನ ಭಾವನೆ. ನನ್ನ ಪತ್ನಿಗೆ ವಾಹನ ಬಿಡಲು ಕಲಿಸುವಾಗ ನಾನು "ಡಿವೈಡರ್" ಅಂತ ಜೋರಾಗಿ ಕಿರುಚುತ್ತಿದ್ದೆ. ಈಗಲೂ ಅವಳಿಗೆ ಡಿವೈಡರ್ ಹತ್ತಿರ ಹೋಗುವಾಗ ನನ್ನ ಮಾತು ನೆನಪು ಬರುತ್ತಿರುತ್ತದೆ ಎನ್ನುತ್ತಿರುತ್ತಾಳೆ :). ಹಾಗಾದರೂ ನೆನಪಿದೆಯಲ್ಲ! ಎನ್ನುವುದೇ ನನಗಿರುವ ನೆಮ್ಮದಿ.

     ನಾನು ಅಪಘಾತಗಳ ಬಗ್ಗೆ ಬರೆದೆನೆಂದು ಕೆಲವರ ಮನ ನೊಂದಿರಬಹುದು. ಓದುವವರಿಗೆ ಎಚ್ಚರ ಮೂಡಿಸುವುದಷ್ಟೇ ನನ್ನ ಲೇಖನದ ಗುರಿ. ಓದುಗರಿಗೆ ವಾಹನ ತೆಗೆದುಕೊಳ್ಳದಂತೆ ಮಾಡಿ ಬೆಂಗಳೂರಿನ ಟ್ರಾಫಿಕ್ ಕಡಿಮೆ ಮಾಡುವ ಉದ್ದೇಶ ಕಂಡಿತಾ ನನ್ನಲ್ಲಿಲ್ಲಹಾಗೆ ಹೇಳುವುದಾದರೆನಾವು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುವಾಗಲೂ ಅಪಘಾತವಾಗಬಹುದು.
ಆದರೆ ಅದೇ ನಮಗೆ ರಸ್ತೆಗೇ ಇಳಿಯದಂತೆ ಮಾಡಬಾರದಲ್ಲವೇ?

     ಹೀಗೆ ಹಗುರವಾಗಿ ಹೇಳುವುದಾದರೆ ಮತ್ತೊಂದು ಮಾತು ನೆನಪಿಗೆ ಬರುತ್ತಿದೆ. ನನ್ನ ಕೊಲೀಗ್ ಇದ್ದವಳು ಹೇಳುತ್ತಿದ್ದಳು: ಸಪೂರವಾಗಿ ಇರುವವರಿಗೆ ಅಪಘಾತವಾದಾಗ ಅವರಿಗೆ ಜಾಸ್ತಿ ನೋವಾಗುವುದಂತೆಅದಕ್ಕೆ ನಾನು ಹೇಳಿದೆಹಾಗಾದರೆ ದಪ್ಪ ಇರುವುವರಿಗೆ ಅಪಘಾತವಾದರೆ ರಸ್ತೆಗೆ ನೋವಾಗುತ್ತಾ? ಅಂತ. !!!

Sunday, July 4, 2010

ಬಿ.ಎಂ.ಟಿ.ಸಿ. ಕಥೆಗಳು - ಭಾಗ 2

ಎಷ್ಟೊಂದು ರೂಪಗಳು

ಕಣ್ ಎದುರಿನಲ್ಲಿ

ಎಷ್ಟೊಂದು ಭಾವಗಳು

ಮನದ ಆಳದಲ್ಲಿ !!


ಜೀವನದಲ್ಲಿ ಎಷ್ಟೊಂದು ಸಲ ಹಾಗಾಗುತ್ತದಲ್ಲವೇ. ಕುಳಿತಲ್ಲಿಯೇ ಮನ:ಪಟಲದಲ್ಲಿ ಹಲವು ಭಾವನೆಗಳು ಹಾದು ಹೋಗುತ್ತಿರುತ್ತವೆ. ಯೋಚನೆಗಳು ನಡೆದಾಗ ಕೆಲವು ಸಲ ಸಮಯವೇ ನಿಂತು ಹೋದಂತೆ ಭಾವವಾಗುತ್ತದೆ. ಆದರೆ ನಮಗೋಸ್ಕರ ಸಮಯ ನಿಲ್ಲಬೇಕಲ್ಲವೇ. ಸಮಯವೂ ನಿಲ್ಲದು.. ಹಾಗೆಯೇ ಬಿ.ಎಂ.ಟಿ.ಸಿ ಬಸ್ ಕೂಡ !!


ನನ್ನ ಆಫೀಸಿನಲ್ಲಿ ಒಬ್ಬನಿಗೆ ಆಗಷ್ಟೇ ಹುಡುಗಿ ಗೊತ್ತಾಗಿತ್ತು. ಮರುದಿನವೇ ನಿಶ್ಚಿತಾರ್ಥ. ಹುಡುಗಿ ಬನಶಂಕರಿ ಕತ್ರಿಗುಪ್ಪೆ ಬಿಗ್ ಬಜಾರ್ ಹತ್ತಿರ ಬರ ಹೇಳಿದ್ದಳು. ಆದರೇನು ಮಾಡುವುದು ಹೇಳಿ, ಹುಡುಗನಿಗೇನೋ ಹುಡುಗಿಯದೇ ಗುಂಗು. ಕೆಂಗೇರಿಯಿಂದ 500 ನಂಬರ್ ನ ಬಸ್ ಹತ್ತಿದ ಪುಣ್ಯಾತ್ಮ. ಹುಡುಗಿಯ ಕನಸಿನಲ್ಲಿ ಕುಳಿತಲ್ಲೇ ಮೈ ಮರೆತ. ಕನಸಿನಿಂದ ಹೊರ ಬಂದಾಗ ನೋಡುತ್ತಾನೆ, ಜೆ.ಪಿ. ನಗರ ಮುಟ್ಟಿದ್ದಾನೆ. ಆಮೇಲೆ ತಿಳಿಯಿತು ಅಣ್ಣಾವ್ರಿಗೆ, ತಾನು ಸುಮಾರು ದೂರ ಮುಂದೆ ಬಂದು ಬಿಟ್ಟಿದ್ದೇನೆಂದು. ಮೊದಲೇ ಆಫೀಸಿನಿಂದ ತಡವಾಗಿ ಬಿಟ್ಟಿದ್ದ. ಮೈ ಮರೆತಾಗ ಬಸ್ ಮುಂದೆ ಹೋದುದರ ಕಾರಣವಾಗಿ ಮತ್ತೆ ಪುನಃ ಒಂದು ಗಂಟೆ ತಡವಾಗಿ ತಲುಪಿದ. ಅವನಿಗಾಗಿ ಕಾದ ಹುಡುಗಿಯ ಕಥೆ ಏನಾಗಿರಬೇಕು? ನೀವೆ ಹೇಳಿ.

ಇನ್ನೊಂದು ಕಥೆ ಇದೆ ನೋಡಿ...


ಅದೊಂದು ದಿನ ಮೆಜೆಸ್ಟಿಕ್ ನಿಂದ ಕೆಂಗೇರಿ ಕಡೆಗೆ ಹೊರಟಿದ್ದೆ. ನಮ್ಮ ಬಸ್ ನಲ್ಲಿದ್ದ ಒಬ್ಬನಿಗೆ ನಾಯಂಡ ಹಳ್ಳಿಯಲ್ಲಿ ಇಳಿಯಬೇಕಾಗಿತ್ತು. ಕಷ್ಟ ಪಟ್ಟುಕೊಂಡು ಬಂದು ಮೊದಲನೆ ಸೀಟಿನಲ್ಲಿ ಕುಳಿತು ಪ್ರತಿ ನಿಲ್ದಾಣ ಬಂದಾಗಲೂ ಹೊರಗೆ ನೋಡುತ್ತಿದ್ದ. ಆದರೆ ಯಾರಲ್ಲೂ ತಾನು ಇಳಿಯುವ ಜಾಗದ ಬಗ್ಗೆ ಕೇಳಿರಲಿಲ್ಲ. ನೋಡು ನೋಡುತ್ತಿದ್ದಂತೇ ರಾಜ ರಾಜೇಶ್ವರಿ ನಗರ ಬಂದೆ ಬಿಟ್ಟಿತು.


ಪ್ರಯಾಣಿಕ: ಸಾರ್, ನಾಯಂಡ ಹಳ್ಳಿಯಲ್ಲಿ ಇಳೀಬೇಕಿತ್ತು.


ಡ್ರೈವರ್: ನಾಯಂಡ ಹಳ್ಳಿ ಹೋಯ್ತಲ್ಲಪ್ಪಾ !! ಎನ್ ಮಾಡ್ತಾ ಇದ್ದೆ?


ಪ್ರಯಾಣಿಕ: ಗೊತ್ತಗ್ಲಿಲ್ಲಣ್ಣ !!


ಈ ಮಾತು ಅಲ್ಲಿದ್ದ ಕಂಡಕ್ಟರ್ ಗೆ ಕೇಳಿಸಿಯೇ ಬಿಟ್ಟಿತು. ಇದ್ದಲ್ಲಿಂದಲೇ ಹೇಳಿದ:


"ಎನ್ ಗುರು? ಡ್ರೈವರ್ ಗುಂಡ ಗೆ ಇದ್ದಾನೆ ಅಂತ ನೋಡ್ತಾ ಕೂತ್ಕೊ ಬಿಟ್ಯಾ? ಅವ್ನು ಅವ್ನಾ ಕೆಲ್ಸಾ ಮಾಡ್ತಾನೆ ನೀನ್ ಇಳಿ"

Tuesday, March 2, 2010

ಬಿ. ಎಂ.ಟಿ. ಸಿ. ಕಥೆಗಳು ... ಭಾಗ ೧

ಬಸ್ಸು ಸಾರ್ವಜನಿಕ ಸಾರಿಗೆಯಾಗಿರುವುದರಿಂದ ಹಲವು ಕಥೆಗಳ ಆಗರ. ಮೈ ಮುರಿದು ಹೋಗುವಷ್ಟು ಜನವಿದ್ದಾಗಲೂ ನಮಗೆ ಇಂತಹ ಕಥೆಗಳು ನಗು ತರಿಸುತ್ತವೆ. ಹಾಗಾಗಿ ಬಸ್ ಅನುಭವವನ್ನು ಬ್ಲಾಗ್ ಲೋಕಕ್ಕೆ ತರುವ ಒಂದು ಸಣ್ಣ ಪ್ರಯತ್ನ.

ಅವತ್ತೊಂದು ದಿನ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್. ಬಸ್ ಡ್ರೈವರ್ ಕೂಡ ಆ ಜಾಮ್ ನಲ್ಲಿ ಸೇರಿಕೊಂಡ. ಆಗ ಒಂದು ಕಾರು ಸುಂಯ್ ಅಂತ ಬಂದು ಪಕ್ಕದಲ್ಲಿ ನಿಂತಿತು.


ಬಸ್ ಬಿಡುತ್ತಿದ್ದ ಡ್ರೈವರ್ ಗೆ ರೇಗಿ ಹೋಯಿತು. ಕಾರ್ ನವನಿಗೆ ಕೇಳಿದ...

"ಕಾರ್ ನಲ್ಲಿ ಎಷ್ಟು ಜನ ಇದ್ದಾರೆ?"

ಆತನಿಗೆ ಅರ್ಥ ಆಗಿಲ್ಲ. "6" ಎಂದ.

"ನನ್ನ ಬಸ್ ನಲ್ಲಿ ಎಷ್ಟು ಜನ ಇದ್ದಾರೆ? " ಆ ಕಡೆಯಿಂದ "50" ಎನ್ನುವ ಉತ್ತರ ಬಂತು.

"50 ಜನ ಹಾಕಿಕೊಂಡು ನಾನು ಸ್ಟ್ರೇಟ್ ಆಗಿ ಬರ್ತಾ ಇದೀನಿ, ಆರು ಜನ ಇರುವ ನಿನ್ನ ಕಾರು ಯಾಕೆ ಅಡ್ಡಾದಿಡ್ಡಿ ಬರ್ತಾ ಇದೆ? ಬಸ್ ಅಡಿಗೆ ಬಿದ್ರೆ ನಿನ್ನ ಅಡ್ರೆಸ್ ಇರಲ್ಲ"

ನಿನ್ನ ಬಸ್ಸೆ ಅಡ್ಡಾ ದಿಡ್ಡಿ ಬರ್ತಾ ಇರೋದು. ನಾನು ಹಾಗೇ ಕರೆಕ್ಟಾಗಿ ಬರ್ತಾ ಇದೀನಿ.

ಏನ್ ಕರೆಕ್ಟಾಗಿ ಬರ್ತಾ ಇದೀಯ? ಮಗನೆ, ಎ.ಸಿ. ಹಾಕ್ಕೊಂಡು ಅಲ್ಲಾಡಿಸ್ಕೊಂಡು ಬಂದು ಬಿಡ್ತೀರ. ಬಸ್ ಅಡಿಗೆ ಬಿದ್ದು ನಮ್ಮನ್ನ ಜೈಲ್ ಗೆ ಹಾಕ್ತೀರ. ಬಂದ್ ಬಿಟ್ಟ ಹೇಳಕ್ಕೆ.

ಕಾರ್ ನವನು ಅಲ್ಲಿಗೆ ಚುಪ್... ಬಸ್ ಹಾಗೆ ಮುಂದಿನ ಸಿಗ್ನಲ್ ಕಡೆಗೆ ಚಲಿಸಿತು.

Friday, February 26, 2010

ಕೂತಲ್ಲೇ ...

ಹೀಗೆ ಹೊರಗಡೆ ನಡೆಯುತ್ತಿರುವಾಗ ಭಿಕ್ಷುಕನೊಬ್ಬ ಸಿಕ್ಕಿದ. ಭಿಕ್ಷೆ ಬೇಡುವವರು ಹಿಂದೆ "ಧರ್ಮ ಕೊಡಿ" ಅಂತ ಹೇಳುತ್ತಿದ್ದರು. ಯಾಕೆ ಅಂದರೆ ಅವರವರ  ಧರ್ಮವನ್ನು ಕಾಪಾಡುವುದು ಅವರವರ ಕರ್ತವ್ಯ. ನಿಮ್ಮ ಕರ್ತವ್ಯ ಮಾಡಿ ಎನ್ನುವುದಕ್ಕಾಗಿ ಧರ್ಮ ಎನ್ನುವ ಪರಿಪಾಟವಿತ್ತು. ಈಗ ಕೊಡಣ್ಣ ಎನ್ನುವವರೆಗೆ ಬಂದಿದೆ. ಮುಂದೇನೋ ಗೊತ್ತಿಲ್ಲ. ಹಾಗೆ ಕೆಲವು ಪ್ರಶ್ನೆಗಳು ನನ್ನ ಮನಃ ಪಟಲ ದಲ್ಲಿ ಹಾಡು ಹೋದವು ನೋಡಿ. ಅದಕ್ಕೊಂದು ತರಲೆ ಉತ್ತರವೂ ಹೊಳೆದು ಬಿಡುವುದೇ !!


ಕೂತಲ್ಲೇ ಹಣ ಬರಬೇಕಿದ್ದರೆ ಏನು ಮಾಡಬೇಕು?


ಕೂತಲ್ಲೇ ಕೈ ಚಾಚಿ ಭಿಕ್ಷೆ ಬೇಡಬೇಕು.

ಲೋನಿಗು ಭಿಕ್ಷೆಗೂ ಏನು ವ್ಯತ್ಯಾಸ?


ಲೋನು ಕೊಟ್ಟವರು ಕೆಲವೇ ದಿನಗಳಲ್ಲಿ ಅಟ್ಟಿಸಿಕೊಂಡು ಬರುತ್ತಾರೆ. ಒಮ್ಮೆ ಭಿಕ್ಷೆ ಕೊಟ್ಟವರು ಮತ್ತೊಮ್ಮೆ ತಿರುಗಿಯೂ ನೋಡುವುದಿಲ್ಲ

ಛತ್ರದಲ್ಲಿ ಬಿಟ್ಟಿ ಊಟ ಮಾಡುವುದಕ್ಕೂ ಭಿಕ್ಷೆ ಊಟಕ್ಕೂ ಏನು ವ್ಯತ್ಯಾಸ?


ಬಿಟ್ಟಿ ಊಟ ಮಾಡಿದವನಿಗೆ ಹಾಲು ಅನ್ನ; ಭಿಕ್ಷೆ ಎತ್ತಿದವನಿಗೆ ತಂಗಳನ್ನ.

Tuesday, May 15, 2007

ಪೆದ್ದು ಪ್ರಸಂಗ .. !!

ನನ್ನ ರೂಮ್ ನ ಪಕ್ಕ ಒಬ್ಬ ಹೋಟೆಲ್ ನವನು ಇದ್ದಾನೆ. ಆ ಹೋಟೆಲ್ ಗೆ “ತಾಜ್” ಎಂದು ನಾಮಕರಣ ಮಾಡಿದ್ದೇನೆ. ಏನೇ ತಿಂಡಿ ಮಾಡಲಿ ಆ ತಿಂಡಿ ರುಚಿಸದ ಹಾಗೆ ಹೇಗೆ ಮಾಡುವುದು ಎನ್ನ್ನುವ ವಿಷಯದಲ್ಲಿ ಅವನು ಪಿ ಹೆಚ್ ಡಿ ಮಾಡಿದ್ದಾನೆ. ಕಳೆದ ಮೂರು ವರ್ಷಗಳಿಂದ ನಾನು ಇದರ ಪ್ರತಿ ದಿನದ ಗಿರಾಕಿ. ಆದ್ದರಿಂದ ನಾನು ಅಲ್ಲಿಗೆ ಹೋದಾಗ ಸ್ವಲ್ಪ ಮಾತು ಉಚಿತ J. ನಾನು ತಿಂಡಿ, ಊಟ ಮಾಡುತ್ತಿರುವಾಗ ತಲೆ ತಿನ್ನುತ್ತಿರುತ್ತಾನೆ. ಅವನಿಗೆ ಇಬ್ಬರು ಮಕ್ಕಳು. ಮಗ ಒಂದು 4 ಅಡಿ ಉದ್ದವಾದರೆ ಮಗಳು ಒಂದು 3 ಅಡಿ ಉದ್ದ ಇದ್ದಾಳೆ.

ನಿನ್ನೆ ನಾನು ಅವನಲ್ಲಿಗೆ ಹೋದಾಗ ಏನೋ ತಮಿಳಿನಲ್ಲಿ ಒಬ್ಬ ಗಿರಾಕಿ ಜೊತೆ ಎಂ. ಇ. ಎಸ್. ಕಾಲೇಜಿನ ಬಗ್ಗೆ ಮಾತಾಡುತ್ತಿದ್ದ. ನಾನು ಅವನ ಮುಖ ನೋಡಿದ್ದನ್ನು ನೋಡಿ ನನ್ನಲ್ಲಿ ಮಾತಿಗೆ ಶುರು. “ಆ ಕಾಲೇಜ್ ಇದೆಯಲ್ಲ ಸಾರ್ ಬೆಂಗಳೂರಿಗೆ ನಂಬರ್ ವನ್. 95% ಮಿನಿಮಮ್ ಸರ್. ಯಾವ influence ಕೂಡ ಇಲ್ಲ. ಚೆನ್ನಾಗಿ ಓದಿದ್ದೀಯಾ? ಬಾ , ಇಲ್ಲ ಅಂದರೆ ಹೋಯ್ತಾ ಇರು ಇಷ್ಟೆ ಸರ್ ಅಲ್ಲಿ. ಅಂಗವಿಕಲರಿಗೆ ಇಡೀ ಕಾಲೇಜಿಗೆ ಬರೀ 4 ಸೀಟು ಸರ್. ಅಂಗವಿಕಲ ಆಗಿರುವುದರಿಂದ ಸೀಟು ಸಿಕ್ಕಿದೆ. ಬಹಳ ದೊಡ್ಡ ಕಾಲೇಜ್ ಸರ್ ಅದು” ಅಂದ. ನಾನು ಯಾರೋ ಸಂಬಂಧಿಕರಿಗೆ ಸೀಟು ಸಿಕ್ಕಿದೆ ಅಂತ ಸರಿ ಸರಿ ಅಂದೆ. ಹಾಗೆ ಮಾತಾಡುತ್ತ fee ಕಟ್ಟಿರುವುದನ್ನು ತಂದು ತೋರಿಸಿದ. ಅದರಲ್ಲಿ ಅವನ ಮಗಳ ಹೆಸರು ಇತ್ತು. ಅದನ್ನು ನೋಡಿ ಕೇಳಿಯೇ ಬಿಟ್ಟೆ. ಇದ್ಯಾರಿಗೆ ಸೀಟು ನಿಮ್ಮ ಸಂಬಂಧಿಕರಿಗಾ? ಅಂತ. ಅದಕ್ಕೆ ಅವನು “ಇಲ್ಲ ಸರ್ ನನ್ನ ಮಗಳಿಗೆ; ಇಲ್ಲಾಂದರೆ ನಾನು ಯಾಕೆ fee ಕಟ್ಟಲಿ” ಅಂದ. ಅದನ್ನು ಕೇಳಿದ ನಾನು ಗಾಬರಿ ಬಿದ್ದೆ. ಇಷ್ಟು ಸಣ್ಣಗೆ ಕಾಣಿಸುವ 3 ಅಡಿ ಉದ್ದದ ಹುಡುಗಿ ಪಿ. ಯು. ಸಿ. ಎಂದು ನಂಬಲಿಕ್ಕಾಗಲಿಲ್ಲ. ನನ್ನ ಮಾನ ಹರಾಜು ಬಿದ್ದ ಹಾಗಾಗಿತ್ತು. “ಬೇರೆ ಕಾಲೇಜು ಇತ್ತು ಸರ್ ಆದರೆ ಇದು ಚೆನ್ನಾಗಿದೆ ಅಂತ ಇಲ್ಲಿ ಸೇರಿಸಿದೆ” ಅಂದ. ಬಿಲ್ ಒಂದು ರೂಪಾಯಿ ಕಡಿಮೆ ತೆಗೆದುಕೊಂಡ. ನನ್ನ ಮಾನ ಒಂದು ರೂಪಾಯಿಗೆ ಹರಾಜು ಹಾಕಿದ ಹಣವನ್ನು ಹಿಂದೆ ಕೊಟ್ಟನೆ? ಗೊತ್ತಿಲ್ಲ. J

ನಾನು ಪೆದ್ದ ಆಗಿದ್ದು ಆಯಿತು. ಇನ್ನೊಬ್ಬನನ್ನು ಯಾರನ್ನಾದರು ಪೆದ್ದನನ್ನಾಗಿ ಮಾಡೋಣ ಎಂದುಕೊಂಡು ನನ್ನ ರೂಮಿನ ಪಕ್ಕ ಬಂದೆ. ಅಲ್ಲೊಬ್ಬ ಮಂಗಳೂರಿನ ಗೆಳೆಯನಿದ್ದಾನೆ. ಇವನಲ್ಲೆ ನನ್ನ ಜಾಣತನ ತೋರಿಸೋಣ ಅನ್ನಿಸಿತು. ಹೋಗಿ ಕೇಳಿದೆ “ ತಾಜ್ ಹೋಟೆಲ್ ನವನ ಮಗಳು ಯಾವ ಕ್ಲಾಸ್ ಹೇಳು” ಅಂತ. ಕೂಡಲೆ ಅವನು PUC ಅಂದ. ನನಗೆ ಇನ್ನೊಂದು ಅದ್ದೂರಿ ಶಾಕ್. ನನ್ನ ಕಣ್ಣೇ ನನಗೆ ಸುಳ್ಳು ಹೇಳುವಂತಾಯಿತೆ ? ಅಂದುಕೊಂಡು ಚಿಂತಿಸಿದೆ. ಕೊನೆಗೆ ಅವನಲ್ಲಿ ಹೇಳಿದೆ “ ನಾನು ಅವಳು 5 ನೇ ಕ್ಲಾಸ್ ಅಂದುಕೊಂಡೆ” ಅಂತ. ಅದಕ್ಕೆ ಅವನು “ನೋಡೋದಕ್ಕೆ 3 ನೆ ಕ್ಲಾಸ್ ನವಳ ಥರ ಕಾಣಿಸುತ್ತಾಳೆ. ನನಗೆ ಅವಳ ಕ್ಲಾಸ್ ಹೇಗೆ ಗೊತ್ತಾಯಿತು ಎಂದರೆ” ಅಂತ ಇನ್ನೊಂದು ಕಥೆ ಪ್ರಾರಂಭ ಮಾಡಿದ.

ಒಂದು ವರ್ಷ ಹಿಂದೆ ಇವನು ಮತ್ತು ಇವನ ಗೆಳೆಯ ಇದೆ ತಾಜ್ ಗೆ ಹೋಗಿದ್ದಾಗ ಆ ಹುಡುಗಿ ಹೋಟೆಲ್ ನಲ್ಲಿ ಇದ್ದಳಂತೆ. ಆಗ ಇವನ ಗೆಳೆಯ ಇದ್ದವನು ಆ ಹುಡುಗಿಯ ಮುಖ ಹಿಡಿದುಕೊಂಡು “ ನೀನು ಯಾವ ಕ್ಲಾಸು?” ಎಂದನಂತೆ. ಅದಕ್ಕೆ ಅವಳು “ಒಂಬತ್ತನೆ ಕ್ಲಾಸು” ಅಂದಳಂತೆ. ನನಗೆ ಅವನು ಹೇಳಿದ್ದನ್ನು ಕೇಳಿ ನಗು ತಡೆಯಲಿಕ್ಕಾಗಲಿಲ್ಲ. ನಾನೆ ಸರಿ, ಸಂಬಂಧಿಕರಾ ಅಂದೆ. ಪಾಪ ಆ ಹುಡುಗನ ಗತಿ ಏನಾಗಿರಬೇಡ? ಅದಕ್ಕೆ ನಾನು ಹೆಚ್ಚೆಂದರೆ ಹುಡುಗಿಯರ ತಲೆ ಮೇಲೆ ಕೈ ಇಡುತ್ತೇನೆ. ಇಂಥ ವಿಪರೀತಕ್ಕೆ ಹೋಗುವುದಿಲ್ಲ ಅಂದುಕೊಂಡೆ. ಇನ್ನೊಂದು ಕಡೆಯಿಂದ “ ಅಬ್ಬ! ಇಂಥ ಕೆಲಸ ಆಗಲಿಲ್ಲ. ಬಚಾವ್ ! “ ಅಂತ ಯೋಚನೆ ಬೇರೆ. ಆದರೂ ನನ್ನ ಈ ಚಿಂತನೆಯನ್ನು ನೋಡಿಯೆ ಇರಬೇಕು ಹಿಂದಿನವರು ಹೇಳಿದ್ದು. “ ಬಿದ್ದರೂ ಮೀಸೆ ಮಣ್ಣಾಗಲಿಲ್ಲ” ಅಂದನಂತೆ ಅಂತ .!! J.