Friday, September 5, 2008

ಗೋವಿನ ಹಾಡು


ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊ
ಳಿರುವ ಕಾಳಿಂಗನೆಂಬ ಗೊಲ್ಲನ
ಪರಿಯ ನಾನಿಂತು ಪೇಳ್ವೆನು

ಗಿರಿಗಳೆಡೆಯಲಿ ಅಡವಿ ನಡುವೆ
ತುರುವ ದೊಡ್ಡಿಯ ಮಾಡಿಕೊಂಡು
ಮೆರೆವ ಕಾಳಿಂಗನೆಂಬ ಗೊಲ್ಲನ
ಸಿರಿಯ ನಾನಿಂತು ಪೇಳ್ವೆನು

ಗೊಲ್ಲದೊಡ್ಡಿಯೊಳಿರುವ ಹಸುಗಳು
ಎಲ್ಲ ಬೆಟ್ಟದ ಮೇಲೆ ಮೇಯುತ
ಹುಲ್ಲುನೊಳ್ಳೆಯ ನೀರ ಕುಡಿಯುತ
ಅಲ್ಲಿ ಮೆರೆದುವರಣ್ಯದಿ

ಕರುಗಳನು ನೆನೆನೆನೆದು ಹಸುಗಳು
ಕೊರಳ ಘಂಟೆ ಢಣಿರು ಢಣಿರೆನೆ
ಪರಿದು ಲಂಘಿಸಿ ಚಿಮ್ಮಿ ನೆಗೆಯುತ
ಮರಳಿ ಬಂದು ದೊಡ್ಡಿಗೆ

ತಮ್ಮ ತಾಯನು ಕಂಡು ಕರುಗಳು
ಅಮ್ಮಾ ಎಂದು ಕೂಗಿ ನಲಿಯುತ
ಸುಮ್ಮಾನದೊಳು ಮೊಲೆಯನುಂಡು
ನಿರ್ಮಲದೊಳು ಇದ್ದವು

ಉದಯಕಾಲದೊಳೆದ್ದು ಗೊಲ್ಲನು
ನದಿಯ ಸ್ನಾನವ ಮಾಡಿಕೊಂಡು
ಮುದದಿ ತಿಲಕವ ಹಣೆಯೊಳಿಟ್ಟು
ಚದುರ ಶಿಖೆಯನು ಹಾಕಿದ

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೇ ಗೌರಿ ಬಾರೇ
ತುಂಗಭದ್ರೆ ತಾಯಿ ಬಾರೇ
ಕಾಮಧೇನು ನೀನು ಬಾರೆಂದು
ಪ್ರೇಮದಲಿ ಗೊಲ್ಲ ಕರೆದನು

ಗೊಲ್ಲ ಕರೆದ ಧ್ವನಿಯ ಕೇಳಿ

ಎಲ್ಲ ಹಸುಗಳು ಬಂದು ನಿಂತು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ


ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಭುದಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಸಿಡಿದು ರೋಷದಿ ಮೊರೆಯುತಾ ಹುಲಿ
ಘುಡುಘುಡಿಸಿ ಭೋರಿಡುತ ಛಂಗನೆ
ತುಡುಕಲೆರಗಿದ ರಭಸಕಂಜಿ
ಚೆದುರಿ ಹೋದವು ಹಸುಗಳು

ಪುಣ್ಯಕೋಟಿ ಎಂಬ ಗೋವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿ ಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯನಾಡುವೆ ಎಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು


ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆಯಿತ್ತು
ಕಂದ ನಿನ್ನನು ನೋಡಿ ಹೋಗುವೆನೆಂದು ಬಂದೆನು ದೊಡ್ಡಿಗೆ

ಅಮ್ಮ ನೀನು ಸಾಯಲೇಕೆ
ನಮ್ಮ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲೆನುತ್ತ
ಅಮ್ಮನಿಗೆ ಕರು ಹೇಳಲು

ಕೊಟ್ಟ ಭಾಷೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟ ಕಡೆಗಿದು ಖಂಡಿತ

ಆರ ಮೊಲೆಯನು ಕುಡಿಯಲಮ್ಮ
ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರು ನಮಗೆ ಹಿತವರು

ಅಮ್ಮಗಳಿರಾ ಅಕ್ಕಗಳಿರಾ
ನಮ್ಮ ತಾಯೊಡಹುಟ್ಟುಗಳಿರಾ
ನಿಮ್ಮ ಕಂದನೆಂದು ಕಾಣಿರಿ
ತಬ್ಬಲಿಯನೀ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ಕಟ್ಟಕಡೆಯಲಿ ಮೇಯಬೇಡ
ಬೆಟ್ಟದೊತ್ತಿಗೆ ಹೋಗಬೇಡ
ದುಷ್ಟ ವ್ಯಾಘ್ರನು ಹೊಂಚುತಿರುವನು
ನಟ್ಟ ನಡುವಿರು ಕಂದನೆ

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೋಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ


ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿ ನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿ ರಕ್ತವಿದೆಕೋ
ಚಂಡವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತ ಕೇಳಿ
ಕಣ್ಣ ನೀರನು ಸುರಿಸಿ ನೊಂದು
ಕನ್ಯೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ನಾನೇನ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು.

Thursday, August 7, 2008

ಚಾಣಕ್ಯ ಸೂತ್ರಗಳು.

ಭಾರತ ಕಂಡ ಬುದ್ದಿವಂತ ಅರ್ಥ ಶಾಸ್ತ್ರಜ್ಞ ಮತ್ತು ರಾಜ ನೀತಿಜ್ಞರಲ್ಲಿ ಚಾಣಕ್ಯ ಅಗ್ರಸ್ಥಾನದಲ್ಲಿ ನಿಲ್ಲುತ್ತಾನೆ. ಈತನನ್ನು “ಭಾರತದ ಮೆಕ್ಯಾವೆಲಿ” ಎಂದು ಕರೆಯುವುದೂ ಉಂಟು. ಈತ ತನ್ನ ಪಂಚತಂತ್ರ, “ಕೌಟಿಲ್ಯನ ಅರ್ಥಶಾಸ್ತ್ರ” ಮತ್ತು ತನ್ನ ಜೀವನ ವಿಧಾನಗಳಿಂದ ಬಹಳ ಜನಪ್ರಿಯ. ನಂದರ ವಂಶವನ್ನು ಅವಸಾನಗೊಳಿಸಿ ಚಂದ್ರಗುಪ್ತ ಮೌರ್ಯನನ್ನು ರಾಜನನ್ನಾಗಿ ಮಾಡಿದ ಈತನ ರೀತಿ ಅದ್ಬುತ. ಈತ ತನ್ನ “ಚಾಣಕ್ಯ ನೀತಿ”ಯಲ್ಲಿ ನಮ್ಮ ಸುತ್ತ ಮುತ್ತಲು ಇರುವ ಪ್ರಾಣಿಗಳಿಂದ ನಾವು ಏನನ್ನು ಕಲಿಯಬಹುದು? ಎಂಬುದನ್ನು ಸವಿವರವಾಗಿ ಉಲ್ಲೇಖಿಸಿದ್ದಾನೆ. ಅದು ಈ ಕೆಳಗಿನಂತಿದೆ.
ಸಿಂಹಾದೇಕಂ ಬಕಾದೇಕಂ ಶಿಕ್ಷೇಚ್ಚತ್ವಾರಿ ಕುಕ್ಕುಟಾತ್
ವಾಯಸಾತ್ಪಂಚ ಶಿಕ್ಷೇಚ್ಚ ಷಟ್ ಶುನಸ್ತ್ರೀಣಿ ಗಾರ್ದಭಾತ್
ಇದರ ಅರ್ಥವು ಹೀಗಿದೆ: ಸಿಂಹದಿಂದ ಮತ್ತು ಬಕ(ಕೊಕ್ಕರೆ) ಪಕ್ಷಿಯಿಂದ ನಾವು ಒಂದು ವಿಷಯವನ್ನು ಕಲಿಯಬಹುದು. ಹಾಗೆಯೇ ಕೋಳಿಯಿಂದ ನಾಲ್ಕು, ಕಾಗೆಯಿಂದ ಐದು, ನಾಯಿಯಿಂದ ಆರು ಮತ್ತು ಕತ್ತೆಯಿಂದ ಮೂರು ವಿಷಯಗಳನ್ನು ಕಲಿಯಬಹುದು.

ಈಗ ಸಿಂಹದಿಂದ ಕಲಿಯಬಹುದಾದದ್ದು ಏನಂದರೆ, ಎಷ್ಟೇ ಸಣ್ಣ ಕೆಲಸವಿದ್ದರೂ ಅದು ತನ್ನ ಕೆಲಸ ಮುಗಿಯುವ ತನಕ ತನ್ನ ಶಕ್ತಿ ಮರೆತು ವಿಶ್ರಮಿಸುವುದಿಲ್ಲ. ಅಂದರೆ, ಅದು ಯಾವುದೇ ಪ್ರಾಣಿಯನ್ನು ಹಿಡಿಯಲು ಯೋಚಿಸಿದರೆ ಅದಕ್ಕೆ ಸರಿಯಾದ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತದೆ ಮಾತ್ರವಲ್ಲ ಸಾಯಿಸುವ ತನಕ ತನ್ನ ಕೆಲಸವನ್ನು ಬಿಟ್ಟು ಬಿಡುವುದಿಲ್ಲ. ನಮ್ಮಲ್ಲಿ ಕೆಲವು ಜನರಿದ್ದಾರೆ. ಅವರಿಗೆ ಕೆಲಸ ಆರಂಭಿಸಿ ಮಾತ್ರ ಅಭ್ಯಾಸ. ಮುಗಿಸುವ ತನಕ ಆರಂಭಿಸಿದ ಹುಮ್ಮಸ್ಸು ಇರುವುದಿಲ್ಲ. ಸಿಂಹದಂತೆಯೆ ನಾವು ಕೂಡ ಏನೇ ಕೆಲಸ ಮಾಡಿದರೂ ಅಚ್ಚುಕಟ್ಟಾಗಿ ಪ್ಲಾನ್ ಮಾಡಿ, ತದೇಕ ಚಿತ್ತದಿಂದ ಕೆಲಸ ಮಾಡಿದರೆ ಆ ಕೆಲಸವು ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಬಕ(ಕೊಕ್ಕರೆ) ಪಕ್ಷಿಯು ತನ್ನ ಎಲ್ಲ ಇಂದ್ರಿಯಗಳನ್ನು ಸಂಯಮದಿಂದ ಹಿಡಿದಿಟ್ಟುಕೊಂಡು ದೇಶ, ಕಾಲ, ಬಲ ನೋಡಿಕೊಂಡು ತನ್ನ ಎಲ್ಲ ಕೆಲಸವನ್ನು ಮಾಡುತ್ತದೆ. ಅಂದರೆ, ಈ ಹಕ್ಕಿಯು ಮೀನನ್ನು ಹಿಡಿಯಬೇಕಾದರೆ ಸುಮ್ಮನೆ ನಿಂತಿದ್ದು, ಸಮಯ, ಜಾಗ ಎಲ್ಲ ನೋಡಿಕೊಂಡು ಒಂದೇ ಗುಟುಕಲ್ಲಿ ಮೀನನ್ನು ಹಿಡಿದು ಬಿಡುತ್ತದೆ. ಅದೇ ರೀತಿ ಮಾನವರು ಕೂಡ ಸಂಯಮದಿಂದ ಕಾದು, ತಮ್ಮ ಸಮಯ ಬಂದಾಗ ತಮ್ಮ ಕೆಲಸವನ್ನು ಮಾಡಿದರೆ ಯಶಸ್ಸು ಸಿದ್ದ ಎಂಬುದು ಇದರ ಅರ್ಥ.

ಕೋಳಿಯಿಂದ ನಮಗೆ ಕಲಿಯಬೇಕಾದ ನಾಲ್ಕು ಅಂಶಗಳಿವೆ. ಮೊದಲನೆಯದಾಗಿ ಕೋಳಿ ಬೇಗ ಏಳುತ್ತದೆ, ಎರಡನೆಯದಾಗಿ ಅದು ಯಾವ ಕಾಲದಲ್ಲಿಯೂ ತನ್ನನ್ನು ರಕ್ಷಿಸುಕೊಳ್ಳಲು ಅಥವಾ ತಾನೇ ಹೋರಾಡಲು ಸಿದ್ದವಾಗಿರುತ್ತದೆ. ಮೂರನೆಯದಾಗಿ ಅದು ತನ್ನಲ್ಲಿರುವ ಆಹಾರವನ್ನು ಬೇರೆಯವರಿಗೂ ಹಂಚುತ್ತದೆ ಮತ್ತು ಕೊನೆಯದಾಗಿ ಆದು ತನ್ನ ಆಹಾರವನ್ನು ತಾನೇ ಸಂಪಾದಿಸುತ್ತದೆ. ಕೋಳಿಯ ಬಗ್ಗೆ ಚಾಣಕ್ಯ ತುಂಬ ಚೆನ್ನಾಗಿ ಅಭ್ಯಸಿಸಿದ್ದಾನೆ. ಬೇಗ ಎದ್ದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಮಾತಿದೆ. ಹಾಗೆಯೇ ನಾವು ನಮ್ಮನ್ನು ರಕ್ಷಿಸಿಕೊಳ್ಳಲು ಬೇರೆಯವರ ಮೇಲೆ ಅವಲಂಬಿತರಾಗುವುದು ದಡ್ಡತನ. ನಾವು ನಮ್ಮ ಶಕ್ತಿಯಿಂದಲೇ ನಮ್ಮನ್ನು ರಕ್ಷಿಸಿಕೊಳ್ಳಲು ಕಲಿಯಬೇಕು ಮಾತ್ರವಲ್ಲ, ಅಗತ್ಯ ಬಿದ್ದರೆ ಹೋರಾಟ ಮಾಡಲು ಕೂಡ ಹಿಂಜರಿಯಬಾರದು. ಅಂತೆಯೇ ನಾವು ನಮಗೆ ಬೇಕಾದಷ್ಟು ಸಂಪಾದಿಸಿದ ಮೇಲೆ ಬೇರೆಯವರಿಗೂ ಅವರ ಪಾಲನ್ನು ಕೊಡಲು ಮರೆಯಬಾರದು. ನಮ್ಮ ಸಮಾಜದ ಬಗ್ಗೆ ನಮಗೆ ಕಳಕಳಿಯಿರಬೇಕು. ಕೊನೆಯದಾಗಿ ನಾವು ನಮ್ಮ ಕಾಲ ಮೇಲೆ ನಿಲ್ಲಲು ಕಲಿಯಬೇಕು. ಪರರ ಮೇಲೆ ಅವಲಂಬಿತರಾಗುವುದರಿಂದ ಅವಮಾನಿತರಾಗಬೇಕಾಗುತ್ತದೆ.

ಕಾಗೆಯಿಂದ ನಾವು ಐದು ವಿಷಯಗಳನ್ನು ತಿಳಿಯಬಹುದು. ಕಾಗೆಗಳು ಮೈಥುನವನ್ನು ಅತ್ಯಂತ ಗೂಢವಾಗಿ ಮಾಡುತ್ತವೆ. ಕಾಲಕ್ಕೆ ಸರಿಯಾಗಿ ಆಹಾರವನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತವೆ. ಅದಲ್ಲದೆ ಇವುಗಳದ್ದು ಯಾವುದಕ್ಕೂ ಜಗ್ಗದ ಹಟಮಾರಿ ಬುದ್ದಿ. ಪ್ರತಿ ಸಮಯದಲ್ಲೂ ಇವು ತುಂಬಾ ಎಚ್ಚರದಿಂದಿರುತ್ತವೆ ಮತ್ತು ಇವು ಯಾರನ್ನೂ ಹೆಚ್ಚು ನಂಬುವುದಿಲ್ಲ. ಪ್ರತಿ ಮನುಷ್ಯನೂ ಪ್ರೀತಿಯನ್ನು ಅತ್ಯಂತ ಗೂಢವಾಗಿ ಮಾಡಿದರೇನೆ ಚೆನ್ನ. ಅದಲ್ಲದೆ ಪ್ರತಿಯೊಬ್ಬನೂ ತನ್ನ ಕಷ್ಟಕಾಲಕ್ಕೆ ಹಣ, ಆಹಾರವನ್ನು ಕೂಡಿಡಲು ಕಲಿಯಬೇಕು. ಇಲ್ಲದಿದ್ದರೆ ವಿನಾ ಕಾರಣ ನಾಶವಾಗುವ ಸನ್ನಿವೇಶಗಳು ಬಂದೊದಗಬಹುದು. ಅದಲ್ಲದೆ ನಮಗೆ ಯಾವುದೇ ಕೆಲಸ ಮಾಡಿದಾಗಲೂ ಹಠವಿರಬೇಕು. ಆಗಲೇ ನಾವು ಯಶಸ್ಸು ಸಾಧಿಸಲು ಸಾಧ್ಯ. ಹೆಚ್ಚಿನವರು ಬೇರೆಯವರ ಬಗ್ಗೆ ಜಾಗ್ರತರಾಗಿಲ್ಲದೆ ಸೋಲುವುದುಂಟು. ಈ ಮಾತು ರೌಡಿಗಳಿಗೆ ಹೆಚ್ಚು ಅನ್ವಯಿಸುತ್ತದೆ. ನನ್ನನ್ನು ಕೊಲ್ಲುವವರು ಯಾರೂ ಇಲ್ಲ ಎಂದು ಎಚ್ಚರಿಕೆ ತಪ್ಪಿಯೇ ಸತ್ತವರು ಜಾಸ್ತಿ. ನಮ್ಮ ಒಂದು ಸಣ್ಣ ತಪ್ಪು ದೊಡ್ಡ ರಂಪಾಟವನ್ನೇ ಮಾಡಿಬಿಡಬಹುದು. ಆದುದರಿಂದ ನಾವು ಅತಿ ಎಚ್ಚರದಿಂದಿರಬೇಕು. ನಾವು ಯಾರನ್ನೂ ಅತಿಯಾದ ವಿಶ್ವಾಸದಿಂದ ನೋಡಬಾರದು. ಅತಿ ವಿಶ್ವಾಸ ವಿಷವಾಗುವ ಸಾಧ್ಯತೆಗಳೇ ಹೆಚ್ಚು.

ನಾಯಿಯಿಂದ ಕಲಿಯಬೇಕಿರುವುದೇನೆಂದರೆ, ನಾಯಿಯು ತನಗೆ ಆಹಾರ ಸಿಕ್ಕಿದಾಗ ಅತಿಯಾಗಿ ತಿನ್ನುತ್ತದೆ. ಕೆಲವು ಸಲ ಆಹಾರ ಸಿಗದೆ ಇದ್ದರೂ ಸುಮ್ಮನಿರುತ್ತದೆ. ಸುಖವಾಗಿ ನಿದ್ರಿಸುತ್ತದೆ. ಆದರೆ ತತ್ಸಮಯದಲ್ಲೆ ಸಣ್ಣ ಶಬ್ದ ಕೂಡ ಅದನ್ನು ಎಚ್ಚರವಾಗಿರುವ ಸ್ಥಿತಿಗೆ ತರುತ್ತದೆ. ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ಮತ್ತು ಇದು ಯಾವುದೇ ಕಾಲದಲ್ಲಿ ಹೊಡೆದಾಟಕ್ಕೆ ಹೆದರುವುದಿಲ್ಲ. ಮಾನವನಿಗೆ ನಾಯಿಯು ಮೇಲೆ ಹೇಳಿದಂತೆ ಆದರ್ಶವಾಗಿದೆ. ಆಧುನಿಕ ಮಾನವನಿಗೆ ಹಣ ಮಾಡುವುದರಲ್ಲೆ ಯೋಚನೆ ಇರುವುದರಿಂದ ನಿದ್ದೆ ಬರಬೇಕೆಂದರೆ ಮಾತ್ರೆಗಳನ್ನು ತಿನ್ನುವ ಸ್ಥಿತಿ ಬಂದಿದೆ. ಹಾಗೆಯೇ ಅತಿಯಾದ ನಿದ್ರೆ ಕೂಡ ಹಾನಿಕಾರಿಯೇ. ನಾವು ಯಾವ ಕಾಲದಲ್ಲಿಯೂ ಮೈ ಮರೆಯುವ ಹಾಗೇ ಇಲ್ಲ. ಮೈ ಮರೆತರೆ ಸಾವು ಶತ:ಸ್ಸಿದ್ದ. ನಾಯಿಯಂತೆ ನಾವು ಕೂಡ ನಿಯತ್ತಿನಿಂದ ಕೆಲಸ ಮಾಡಲು ಕಲಿಯಬೇಕು. ಮತ್ತು ಹೊಡೆದಾಡಲು ಅವಕಾಶ ಸಿಕ್ಕಿದಾಗ ಹೊಡೆದಾಡಬೇಕು. ಅಧೀರರಾಗಿ ಓಡಿಹೋದರೆ ಸಮಾಜದಲ್ಲಿ ಯಾರೂ ಗೌರವಿಸುವುದಿಲ್ಲ.

ಕತ್ತೆಯಿಂದಲೂ ಮನುಷ್ಯನಿಗೆ ಕಲಿಯಬೇಕಿರುವ ವಿಷಯಗಳಿವೆ. ಕತ್ತೆಯು ವಿಶ್ರಾಂತಿಯಿಲ್ಲದೆ ತನ್ನ ಯಜಮಾನನಿಗೆ ಭಾರ ಹೊತ್ತುಕೊಂಡು ಕೆಲಸ ಮಾಡುತ್ತದೆ. ಶೀತ ಮತ್ತು ಉಷ್ಣವನ್ನು ಕೂಡ ಲೆಕ್ಕಿಸದೆ ಕೆಲಸ ಮಾಡುವ ಇದು ಅತ್ಯಂತ ನಿಸ್ಪ್ರಹ ಪ್ರಾಣಿ ಮತ್ತು ಇದು ತನಗೆ ಸಿಕ್ಕಿದುದರಲ್ಲೆ ಸಂತುಷ್ಟವಾಗಿರುವ ಪ್ರಾಣಿ. ಕತ್ತೆಯಂತೆ ದುಡಿಯುವುದು ಸ್ವಲ್ಪ ಕಷ್ಟವೇ. ಆದರೆ ಕೊನೆಯಲ್ಲಿ ಹೇಳಿರುವಂತೆ ನಾವು ನಮಗೆ ಸಿಕ್ಕಿದುದರಲ್ಲಿ ಒಂದು ಶಾಂತಿ, ನೆಮ್ಮದಿ ಎನ್ನುವುದು ಇರಬೇಕು. ಏನೇ ಕೆಲಸ ಮಾಡಿದರೂ ಕೊನೆಗೆ ಅದರಲ್ಲಿ ಸಮಾಧಾನ ಇಲ್ಲದಿದ್ದರೆ ಜೀವನವೇ ನರಕವಾಗಿಬಿಡುತ್ತದೆ. ಆದುದರಿಂದ ನಮ್ಮ ಪಾಲಿಗೆ ಬಂದಿದ್ದರಲ್ಲಿ ಮೊದಲಿಗೆ ಸಂತುಷ್ಟರಾಗಲು ನಾವು ಕಲಿಯಬೇಕು.

ಮೇಲೆ ಹೇಳಿರುವ 20 ವಿಷಯಗಳನ್ನು ಯಾರು ಪಾಲಿಸುತ್ತಾನೋ ಅವನು ಜೀವನದಲ್ಲಿ ಗೆಲುವನ್ನು ಹೊಂದುತ್ತಾನೆ ಎಂದು ಚಾಣಕ್ಯನು ಹೇಳುತ್ತಾನೆ. ಸೋಲು ಅವನ ಬೆನ್ನೇರಿ ಕೂರುವುದೇ ಇಲ್ಲ. ಜೀವನವಿಡೀ ಗೆಲುವಿರುತ್ತದೆ ಎನ್ನುವುದು ಅವನ ಮಾತು. ಈ 20 ವಿಷಯಗಳು ಗೆಲುವಿನ ಸೂತ್ರಗಳಂತೆ ಕಂಡರೂ, ಹೆಚ್ಚಾಗಿ ನಮ್ಮ ಸೋಲು ಮೇಲೆ ಹೆಸರಿಸಿರುವ ವಿಷಯಗಳನ್ನು ಪಾಲಿಸದಿರುವುದರಿಂದಲೇ ಆಗಿರುತ್ತದೆ ಎನ್ನುವುದು ಕಟು ಸತ್ಯ. ಚಾಣಕ್ಯನ ಕೆಲವು ವಿಷಯಗಳು ಇಂದಿಗೆ apply ಆಗದೇ ಇರಬಹುದು. ಆದರೆ ಹೆಚ್ಚಿನ ವಿಷಯಗಳನ್ನು ನಾವು ನಮ್ಮ ಕಾಲಕ್ಕೆ ಬದಲಾಯಿಸಿಕೊಂಡು ಬಳಸಿಕೊಳ್ಳಬಹುದು. ಪ್ರತಿಯೊಬ್ಬರಿಗೂ ಯಶಸ್ವಿ ಜೀವನ ನಡೆಸಬೇಕೆಂಬ ಆಸೆ ಇರುತ್ತದೆ. ಆದುದರಿಂದ ನಾನು ಕೂಡ ಕೋಳಿಯಂತೆ ನನಗೆ ಗೊತ್ತಿರುವ ವಿಷಯವನ್ನು ನಿಮಗೆ ಹೇಳಲು ಹೊರಟೆ. ಓದಲು ಕಷ್ಟವಾದರೆ ಕ್ಷಮೆಯಿರಲಿ.