Saturday, January 30, 2010

ರಿಸಲ್ಟ್ ಎಂಬ ಟೆನ್ಷನ್ …

ಇತ್ತೀಚೆಗೆ ನನ್ನ ಹುಡುಗನೊಬ್ಬ ಬಂದು, ಸರ್ ನಮ್ಮ ರಿಸಲ್ಟ್ ಬಂತು. ಪಾಸ್ ಆದೆ ಎಂದಾಗ ನಾನು ನನ್ನ ಹಳೆಯ ಪುಟಗಳನ್ನು ತಿರುಗಿಸಿ ಹಾಕುವ ಅವಕಾಶ ಒದಗಿ ಬಂತು. ನನಗಾಗ ಅನಿಸಿದ್ದು, ಎಷ್ಟೋ ತಲೆನೋವುಗಳನ್ನು ಮರೆತೇ ಬಿಟ್ಟಿದ್ದೇನಲ್ವಾ? ಅಂತ. ಬಹುಶಃ ಅವುಗಳಿಗೂ ಒಂದು ಟ್ರಿಗರ್ ಇಲ್ಲದೆ ಅವು ಕೂಡ ನಮ್ಮ ಮನಃ ಪಟಲದಲ್ಲಿ ಹಾದು ಹೋಗುವುದಿಲ್ಲವೇನೋ. ಅಥವಾ ಅಂದಿನ ಜಾಗೃತ ಸ್ಥಿತಿ ಇಂದಿನ ಸ್ವಪ್ನ ಸ್ಥಿತಿಗೆ ಬಂದು ಮುಟ್ಟಿದೆಯೇನೋ ಎಂದು ಯೋಚಿಸುತ್ತಿರುತ್ತೇನೆ. ಇಂದಿಗಿರುವ ಸವಾಲೇ ಬೇರೆ. ಅಂದು ನದಿಯ ತೆರೆಗೆ ಹೆದರುತ್ತಿದ್ದವನು ಇಂದು ಸಾಗರದ ಅಲೆಗಳಿಗೆ ಎದೆಯೊಡ್ಡಿ ನಿಂತಿದ್ದೇನೆ. ಹಲವು ಟೆನ್ಷನ್ ಗಳಿಗೆ ಪ್ರತಿದಿನವೂ ಮುನ್ನುಡಿ ಬರೆಯುತ್ತಿದ್ದೇನೆ.


ಅದೊಂದು ಕಾಲವಿತ್ತು, ನಾವು ಇಂಜಿನಿಯರಿಂಗ್ ಓದುತ್ತಿದ್ದ ಕಾಲದ ಹಾಸ್ಟೆಲ್ ಜೀವನ. ಅಲ್ಲಿರುವ ಒಬ್ಬೊಬ್ಬನ ಮೂಢ ನಂಬಿಕೆಗಳು ಇಂದಿಗೂ ನಗು ತರಿಸುತ್ತವೆ. ಒಬ್ಬೊಬ್ಬನ ಬಾಯಿಯಿಂದ ಬರುತ್ತಿದ್ದ ಮುತ್ತಿನ ಹನಿ(ಬೈಗುಳ)ಗಳು ಇಂದಿಗೂ ನಮಗೆ ಹಿಂದಿನ ದಿನಗಳನ್ನು ಮೆಲುಕು ಹಾಕುವಂತೆ ಮಾಡುತ್ತವೆ. ಜಗಳ, ಒಳ ಜಗಳಗಳ ಒಗಟು ಬಿಡಿಸಲಾಗದಂತಹ ಜಾಗ ಅದು. ಅದೊಂದು ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಂಕರ, ಭೀಭತ್ಸ, ಅದ್ಭುತ ಮತ್ತು ಶಾಂತ ಇವುಗಳಿಂದ ಕೂಡಿದ ನವರಸಗಳ ಬೀಡು.

ಹೀಗಿರುವಾಗ ಎಲ್ಲರಿಗೂ ತಲೆನೋವು ತರಿಸುತ್ತಿದ್ದುದು ರಿಸಲ್ಟ್. ಪರೀಕ್ಷೆಯಲ್ಲಿ ಬರೆದ ಉತ್ತರ ಪತ್ರಿಕೆಗಳಿಗೆ ಬ್ರಹ್ಮ ಬರೆದ ಹಣೆ ಬರಹ. ಅದನ್ನು ತಿದ್ದಲು ಸಾಧ್ಯವಿಲ್ಲ ಎನ್ನುವವನು ಮನಸ್ಸಿಗೆ ನೋವಾದಾಗಲೂ ಮುಂದೆ ಮುಂದೆ ಹೋಗುತ್ತಾನೆ. ಬದಲಿಸಲು ಹೋದವನು ನೇಣಿಗೆ ಶರಣು. ಬಹುಶಃ ಪರೀಕ್ಷೆಗಿಂತಲೂ ರಿಸಲ್ಟ್ ಒಂದು ಬಿಸಿ ಬಿಸಿ ವಿಷಯ. ಯಾಕೆಂದರೆ ಯಾರೋ ಒಬ್ಬ ಗಾಳಿಯಲ್ಲಿ ರಿಸಲ್ಟ್ ಅಂತೆ ಎಂದು ಸುದ್ದಿ ಬಿಟ್ಟಿರುತ್ತಾನೆ. ಅಲ್ಲಿಗೆ ಟೆನ್ಶನ್ ಆರಂಭ. ಕೈಯಲ್ಲಿದ್ದ ಉಗುರು ಚೂರು ಚೂರು. ತಲೆಯಲ್ಲಿದ್ದ ಕೂದಲು ಚೆಲ್ಲಾಪಿಲ್ಲಿ. ಕೆಲವು ವೀಕ್ ಹೃದಯದವರ ಕಷ್ಟ ನೋಡಲಾಗುವುದಿಲ್ಲ. ಅವರು ರೋಲ್ ನಂಬರ್ ಅನ್ನು ಬೇರಯವರಿಗೆ ಹೇಳಿ ಕಣ್ಣೀರಿಗೆ ಶರಣಾಗಿರುತ್ತಾರೆ. ಮೊದಲ ಸೆಮ್ ನಲ್ಲಿ ಫೇಲ್ ಆದವನ ಕಡೆ ನೋಡದಿರುವುದೇ ಲೇಸು. ಆತನಿಗದು ಮೊದಲ ಬಾರಿಗೆ ಸೋತ ಅನುಭವ. ಆದರೆ ಅವನಿಗೆ ವೇದಾಂತ ಹೇಳಲು ಬೇರೆ ಸೋತು ಗೆದ್ದವರು ಇರುತ್ತಾರೆ ಬಿಡಿ. ಅದೊಂದೇ ಸಮಾಧಾನ.

ಈಗಿನದು ಎಲ್ಲಾ ಬ್ರಾಡ್ ಬ್ಯಾಂಡ್ ಯುಗ. ಆಗ ನಮಗೆ ಇದ್ದುದ್ದು ಅತಿ ಕಡಿಮೆ ವೇಗದ ನೆಟ್ ವರ್ಕ್. ಎಲ್ಲರೂ ಬಂದು ರಿಸಲ್ಟ್ ನೋಡಿದಾಗ ವಿ ಟಿ. ಯು. ವೆಬ್ ಸೈಟ್ ಢಮಾರ್!. ಮತ್ತೆ ಟೆನ್ಶನ್. ಆ ಕಾಲದಲ್ಲಿ ಹೆಚ್ಚಿನವರಲ್ಲಿ ಇಂಟರ್ನೆಟ್ ಕನೆಕ್ಷನ್ ಇರಲಿಲ್ಲ. ಎಲ್ಲದಕ್ಕೂ ಇದ್ದದ್ದು ಬ್ರೌಸಿಂಗ್ ಸೆಂಟರ್. ಆತನಿಗೆ ಖುಷಿಯೋ ಖುಷಿ. ತಲೆಗೆ 20 ರಂತೆ ರಿಸಲ್ಟ್ ಚಾರ್ಜ್ ಮಾಡಿ ಬಿಡುತ್ತಿದ್ದ. ಮರುದಿನ ರಿಸಲ್ಟ್ ಬರುವ ಖಾತರಿಯಿದ್ದರೂ ಐದು ನಿಮಿಷದ ಕೆಲಸಕ್ಕೆ 20 ರೂ. ಕೊಟ್ಟಾದರೂ ಕೂಡಲೆ ನೋಡುವವರ ಸಂಖ್ಯೆಯೇನೂ ಕಡಿಮೆ ಇರಲಿಲ್ಲ ಬಿಡಿ. ಮಧ್ಯ ರಾತ್ರಿಯಲ್ಲಿ ಎದ್ದು ಬ್ರೌಸಿಂಗ್ ಸೆಂಟರ್ ಗೆ ನುಗ್ಗಿದ ಘಟನೆಗಳಿವೆ. ಕೊನೆಗೆ ಬಂದು ಮಗಾ ಡಿಸ್ಟಿ, ಮಗಾ ಒಂದು ಹೋಯ್ತು, ಮಗಾ ಗೋಲ್ಡ್ (35) ಎಂದು ಬೇವು ಬೆಲ್ಲ ಸವಿಯುವ ಸಮಯ ಇಂದಿಗೂ ಮನಸ್ಸಿನಲ್ಲಿ ಹಾದು ಹೋಗುತ್ತದೆ.

ಹತ್ತರಲ್ಲಿ ಹನ್ನೊಂದು ಎಂಬಂತೆ ಹಲವು ತಲೆನೋವುಗಳ ನಡುವೆ ರಿಸಲ್ಟ್ ನ ಟೆನ್ಷನ್ ಕೂಡ ನಮಗೆ ಆಗ ಅನಿವಾರ್ಯ. ಇಂದು ಅದೊಂದು ನಗು ತರಿಸುವ ಸಮಯ. ಒಳ್ಳೆಯದಾಗಿರಲಿ ಕೆಟ್ಟದಿರಲಿ ನಾವಿಂದು ನಗಲೇ ಬೇಕು. ಯಾಕೆಂದರೆ ನಾವಿಂದು ಆ ಗಡಿ ದಾಟಿದ್ದೇವೆ. ನಾವಿಂದು ಸಸಿ ದಾಟಿ ಮರವಾಗಿದ್ದೇವೆ. ಮರದ ತುಂಬೆಲ್ಲ ಹಸಿದವನಿಗೆ ಹಣ್ಣುಗಳು, ದಣಿದವನಿಗೆ ನೆರಳು, ಕಡಿದವನಿಗೆ ಕ್ಷಮೆ ಎಲ್ಲವೂ ನಮ್ಮಲ್ಲಿದೆ. ಹಣ್ಣಿಗಾಗಿ ಎಸೆದ ಕಲ್ಲು ನಮಗೂ ತಾಕಿದೆ. ಮನಸ್ಸು ಕ್ಷುಬ್ಧಗೊಂಡರೂ ಸಾವರಿಸಿಕೊಂಡು ಎದ್ದು ನಿಂತಿದ್ದೇವೆ. ಒಳ್ಳೆಯದಿರಲಿ ಕೆಟ್ಟದಿರಲಿ ನಮ್ಮಲ್ಲಿ ದಯೆ ಇರಬೇಕು. ದಯೆಯೇ ಧರ್ಮದ ಮೂಲವಯ್ಯ ಎಂದವರು ಬಸವಣ್ಣ. ಕ್ಷಮೆ ಇಲ್ಲದವರು ಯಾರು ದೊಡ್ಡದವರಾಗಿದ್ದಾರೆ ಹೇಳಿ? ಕ್ಷಮೆ ಇರಲಿ ಆದರೆ ಪರಿಸ್ಥಿತಿಗಳ ಮರೆವು ಖಂಡಿತ ಸಲ್ಲ. ಮರೆವು ನಮ್ಮನ್ನು ಬಿದ್ದ ಹೊಂಡಕ್ಕೆ ಮತ್ತೆ ತಳ್ಳುತ್ತದೆ.

No comments: