Tuesday, March 27, 2007

ಓ ಹೆಣ್ಣೆ! ಏನು ನಿನ್ನ ಜಡೆಯ ಮಾಯೆ?




ಈಗಿನ ಹೈಟೆಕ್ ಕಾಲದಲ್ಲಿ ಜಡೆಯ ಬಗ್ಗೆ ಬರೆದರೆ ತಪ್ಪಾದೀತು. ಆದರೂ ಕೂಡ ಜಡೆಯ ಮೇಲೆ ನನಗೆ ಸಣ್ಣವನಿದ್ದಾಗಿನಿಂದಲೂ ಒಂದು ವಿಶೇಷ ಅಕ್ಕರೆ. ಜಡೆ ಮೇಲೊಂದು ಹೂವು ಇದ್ದರೆ ಹೆಣ್ಣಿಗೊಂದು ಕಳೆ ಇದ್ದ ಹಾಗೆ. ಜಡೆಯಲ್ಲಿ ಕೂಡ ವಿವಿಧ ವಿಧಗಳಿವೆ. ಉದ್ದವಾಗೆ ಹೆಣೆದ ಜಡೆ, ಕುದುರೆ ಬಾಲ ( pony tail), ಬಾಬ್ ಕಟ್, ಭಟ್ಟರ ಜಡೆ ಇತ್ಯಾದಿ.

ನಾನು ಸಣ್ಣವನಿರುವಾಗ ನನಗೆ ನನ್ನ ಅಕ್ಕನ ಜಡೆ ಹಿಡಿಯುವ ಅಭ್ಯಾಸ ಇತ್ತು. ಒಂದು ವೇಳೆ ಅವಳು ತನ್ನ ಜಡೆ ಸ್ವಲ್ಪ ತುಂಡರಿಸಿದರೂ ನಾನು ಅವಳ ಜೊತೆ ಜಗಳಕ್ಕೆ ನಿಲ್ಲುತ್ತಿದ್ದೆ. ಏನು ನಿನಗೆ ಒಂದು ಚೂರು ಕೂಡ ಜಡೆಯ ಮೇಲೆ ಕನಿಕರವೇ ಇಲ್ಲ ಎಂದು ಬೈಯ್ಯುತ್ತಾ ಇದ್ದೆ. ಈಗ ಅವಳ ಮಗನಿಗೆ ಮಲಗಿ ನಿದ್ದೆ ಮಾಡಬೇಕಿದ್ದರೆ ಜಡೆ ಬೇಕೆ ಬೇಕು. ಅಂದರೆ ಜಡೆಗೆ ಮಲಗಿಸುವ ಗುಣ ಇದೆ ಎಂದಾಯಿತು.

ಈಗಲೂ ನನಗೆ ಹುಡುಗಿಯರ ಜಡೆ ನೋಡುವ ಒಂದು ಅಭ್ಯಾಸ. ಒಂದು ದಿನ ನನ್ನ ಗೆಳೆಯನ ಜೊತೆ ಹಾಳು ಹರಟೆಯಲ್ಲಿ ತೊಡಗಿದ್ದೆ. ಆಗ ಅವನು ನನಗೆ ಗೊತ್ತಿರುವ ಹುಡುಗಿ ಹೆಸರು ಹೇಳಿದ. ನನ್ನ ತಲೆಗೆ ಅದು ಹೊಳೆಯಲೇ ಇಲ್ಲ. ನನ್ನ ಪುಣ್ಯಕ್ಕೆ ಉದ್ದ ಜಡೆ ಅಂದ ನೋಡಿ! ಕೂಡಲೆ ನೆನಪಿಗೆ ಬಂತು ಹುಡುಗಿಯ ಮುಖ. ಅದರ ಅರ್ಥ ಏನಂದರೆ ಯಾರದಾದರೂ ಗುರುತು ಹಿಡಿಯಲು ಜಡೆ ತುಂಬಾನೆ ಸಹಕಾರಿ ಅಂತ.

ನೀವು ದಕ್ಷಿಣ ಕನ್ನಡದ ಮದುವೆಗಳನ್ನು ನೋಡಿದ್ದರೆ, ಆ ಮದುವೆಗಳಲ್ಲಿ ಹೆಣ್ಣಿನ ಜಡೆಯನ್ನು ಗುಲಾಬಿ, ಮಲ್ಲಿಗೆ, ದುಂಡು ಮಲ್ಲಿಗೆ, ಜಾಜಿ ಹೂವುಗಳಿಂದ ಅಲಂಕರಿಸಿರುತ್ತಾರೆ. ಆ ಜಡೆಯ ಅಂದವನ್ನೊಮ್ಮೆ ನೋಡಬೇಕು. ಫೋಟೊಗ್ರಾಫರ್ ನ ಕಾಟದಲ್ಲಿ ನೋಡುವುದು ಕೂಡ ಒಂದು ಸಾಹಸವೆ ಬಿಡಿ. ಈಗ ಜಡೆ ಪುರಾಣ ನೋಡಿ ಎಲ್ಲಾ ಥರದ ಜಡೆ ಹಿಡಿಯಲು ಓಡಿ ಬಿಡಬೇಡಿ. ಈಗಿನ ಕಾಲದಲ್ಲಿ ಹುಡುಗರು ಕೂಡ ಜಡೆ ಬಿಡುತ್ತಾರೆ ಸ್ವಾಮಿ! J.

ಈ ಜಡೆಗೆ ಮರುಳಾಗದಿರುವವರು ತುಂಬಾನೆ ಕಡಿಮೆ ಜನ ಬಿಡಿ. ನೀವು ಮೈ- ಆಟೊಗ್ರಾಫ್ ಚಿತ್ರ ನೋಡಿದ್ದರೆ ಅದರಲ್ಲಿ ಸುದೀಪ್ ಬಾಲಕನಾಗಿದ್ದಾಗ ಜಡೆ ಹಿಂದುಗಡೆ ಹೋಗುವ ಒಂದು ಕಥೆ ಇದೆ. ಕೊನೆಗೆ ಅ ಹುಡುಗಿಯನ್ನು ಬಿಡುವಾಗಲೂ ಜಡೆಯ ತುದಿಯನ್ನು ಕತ್ತರಿಸಿ ಇಟ್ಟುಕೊಳ್ಳುತ್ತಾನೆ. ಕೆಲವು ಹಿಂದಿ ಹಾಡುಗಳಲ್ಲಿಯೂ ಹುಡುಗಿಯರ ಜಡೆ ಹಿಡಿದು ಕುಣಿಯುವ ದ್ರಶ್ಯಗಳು ತುಂಬಾನೆ ಇವೆ. ಇನ್ನು ಹುಡುಗಿಯರ ಹಾಸ್ಟೆಲ್ ಗಳಲ್ಲಿ ಒಂದು ಥರ ಬ್ಲಾಕ್ ಮೇಲ್ ಮಾಡಲು ಕೂಡ ಜಡೆ ಉಪಯೋಗಿಸಲ್ಪಡುತ್ತದೆ.

ಹಿಂದಿನ ಕಾಲದ ಹುಡುಗಿಯರಿಗೆ ತುಂಬಾ ಉದ್ದವಾದ ಜಡೆ ಇರುತ್ತಿತ್ತಂತೆ. ನನಗೆ ಅನಿಸುತ್ತದೆ ಆಗ ಪೊರಕೆಯ ಅವಶ್ಯಕತೆಯೇ ಇರಲಿಲ್ಲವೇನೊ? ಅದಲ್ಲದೆ ಜಡೆಯ ಇನ್ನೊಂದು ಬಹು ಮುಖ್ಯ ಉಪಯೋಗ ಇದೆ. ನಿಮ್ಮ ಮನೆಯಲ್ಲಿ ಬೆಕ್ಕು ಮೂಡು ಕೆಟ್ಟು ಕೂತಿದೆ ಅಂತಿಟ್ಟುಕೊಳ್ಳಿ. ಅದರ ಎದುರು ಒಂದು ಸಲ ಜಡೆಯನ್ನು ಆಡಿಸಿ ನೋಡಿ. ಛಂಗನೆ ಹಾರಿ ತನ್ನ ಆಟ ಪ್ರಾರಂಭ ಮಾಡುತ್ತೆ. ಇಂಥ ಒಂದು ಉಪಯೋಗ ನಿಮಗೆ ಗೊತ್ತಿತ್ತೆ? J.

ಜಡೆಯ ಮೇಲೆ ಗಾದೆಗಳು ಕೂಡ ಇವೆ. ಕೆಲವು ಸ್ಯಾಂಪಲ್ ಗಳು ಇಲ್ಲಿವೆ :
. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು.
. ನೂರು ಜನಿವಾರ ಒಟ್ಟಿಗೆ ಇರಬಹುದು; ಮೂರು ಜಡೆ ಒಟ್ಟಿಗಿರುವುದಿಲ್ಲ.
ಹೀಗೊಂದು ವ್ಯಂಗ್ಯ:
ಹಿಂದೆ ಹೆಣ್ಣಿನ ಹಿಂದೆ ಉದ್ದವಾದ ಜಡೆ ಇರುತ್ತಿತ್ತು. ಈಗ ಹೆಣ್ಣಿನ ಮುಂದೆ ಕಂಪೆನಿಯ ಐಡಿ ಇರುತ್ತದೆ.

ಜಡೆಯ ಬಗ್ಗೆ ಕೆ. ಎಸ್. ನ. ಅವರ ಒಂದು ಕವನ :
ಅಡಿಯ ಮುಟ್ಟ ನೀಳ ಜಡೆ ಮುಡಿಯ ತುಂಬ ಹೂವ ಹೆಡೆ
ಇವಳು ಅಡಿಯನಿಟ್ಟ ಕಡೆ ಹೆಜ್ಜೆಹೆಜ್ಜೆಗೆ ಒಂದು ದೊಡ್ಡ ಮಲ್ಲಿಗೆ
ಇವಳು ಯಾರು ಬಲ್ಲೆಯೇನು ಇವಳ ಹೆಸರ ಹೇಳಲೇನು
ಇವಳ ದನಿಗೆ ತಿರುಗಲೇನು ಇವಳು ಏತಕೋ ಬಂದು ನನ್ನ ಸೆಳೆದಳು

ಜಡೆ ಪುರಾಣದ ಕೊನೆಗೆ, ನಾನೇನಾದರೂ ನನ್ನ ಹುಡುಗಿಗೆ ಗುಲಾಬಿ ಹೂವು ಕೊಟ್ಟರೆ, ಅವಳಲ್ಲಿ ಜಡೆ ಹಾಕಲು ಹೇಳುವ ಪ್ಲಾನ್ ಇದೆ. ಯಾಕೆ ಅಂದರೆ, ನಾನು ಕೊಟ್ಟ ಹೂವು ಚೆಂದವೋ ಅದ ಮುಡಿದ ನನ್ನ ಮನ ಮೆಚ್ಚಿದ ಹುಡುಗಿ ಚೆಂದವೋ ನೋಡಬಹುದಲ್ವೆ?


-- Raviprasad Sharma K.

Monday, March 26, 2007

ಆ ಮಾತು

ನೆನಪಾಗುತ್ತಿವೆಯೆ ನನ್ನ ಅಂದಿನ ಆ ಮಾತುಗಳು
ಅವುಗಳನ್ನು ಮತ್ತೆ ಕೇಳಬೇಕೆಂಬ ಹಂಬಲವೆ ?
ಹೇಳು ಎಂದಾಗ ಮತ್ತೆ ತಿರುಗಿ ಹೇಗೆ ಹೇಳಲಿ ಹೇಳು
ನನ್ನ ಸ್ವಾಭಿಮಾನಿ ಮನಸ್ಸು ಅದಕ್ಕೆ ಒಪ್ಪಬೇಕಲ್ಲವೆ ?

Friday, March 23, 2007

ಮಗು uncle ಅಂದ ಕಥೆ...




ಸಣ್ಣ ಮಕ್ಕಳು ಅಂದಾಗ ಎಲ್ಲರಿಗು ಒಂದು ಥರಾ ಖುಷಿ. ಮಕ್ಕಳ ಆ ಮುದ್ದು ಮಾತು ಯಾವಾಗಲು ಕಿವಿಗೆ ಮತ್ತು ಮನಸ್ಸಿಗೆ ಒಂದು ಉತ್ಸಾಹವನ್ನು ಕೊಡುತ್ತದೆ. ಆದರೆ ಸಣ್ಣ ಮಕ್ಕಳ ಕೀಟಲೆ ಮಾತ್ರ ತಡೆಯೋದೆ ಕಷ್ಟ.




ಹೀಗೆ ಒಂದೆರಡು ದಿನ ಹಿಂದೆ ನಮ್ಮ ಕಂಪೆನಿಯ employee ಒಬ್ಬರು ಮಗುವಿನ ಜೊತೆ ಬಂದಿದ್ದರು. ಹಾಗೆ ಏನು ಹೆಸರು ಅಂತ ಮಾತಾಡುತ್ತಾ ಒಬ್ಬ ಹುಡುಗಿಯನ್ನು( ಮದುವೆ ಆಗಿಲ್ಲ) ಯಾರೋ ಒಬ್ಬರು ಆ ಮಗುವಿಗೆ ತೋರಿಸಿ ಕೇಳಿದರು. ಇವಳು ಅಕ್ಕನ ಥರ ಕಾಣಿಸುತ್ತಾಳಾ ಅಥವಾ aunty ಥರ ಕಾಣಿಸುತ್ತಾಳಾ ಅಂತ. ಆ ಮಗು ಸೀದಾ ಏನೂ ಯೋಚನೆ ಮಾಡದೆ aunty ಅಂತು. ಅದನ್ನು ಕೇಳಿ ನನಗೆ ನಗು ತಡೆಯೋದಕ್ಕಾಗಲಿಲ್ಲ. ಕಿಸಕ್ಕಂತ ನಕ್ಕು ಬಿಟ್ಟೆ. ನನ್ನ ನಗು ಕೇಳಿದ aunty ಗಳು ಇವನಿಗೆ ಮಾಡ್ತೇನೆ ಅಂತ ಮಗುವಿನಲ್ಲಿ ಕೇಳಿದ್ರು ಇವನು ಅಣ್ಣನ ಥರ ಕಾಣಿಸ್ತಾನ? ಅಥವ uncle ? ಅಂತ. ಮಗು uncle ಅಂದೇ ಬಿಟ್ಟಿತು. ನನ್ನ ನಗು ಕೂಡ ಅಲ್ಲಿಗೆ ನಿಂತಿತ್ತು.




ಇವತ್ತು ಮತ್ತೆ ನನ್ನ ಪಕ್ಕದ aunty ಮಗು ಜೊತೆ ಬಂದಿದ್ದಾರೆ. ಬರೋದಲ್ದೆ ಅಣ್ಣನ? uncle ಆ? ಕೇಳಲಾ ಅಂದ್ರು. ಅಯ್ಯೋ! ಒಂದು ಸರಿ ಕೇಳಿ ಅನ್ನಿಸಿಕೊಂಡಿದ್ದು ಆಯಿತು ಮತ್ತೆ ಪುನಹ ಬೇಡ ಮೇಡಮ್ ಅನ್ನೋ ಪರಿಸ್ಥಿತಿ ನ ತಂದು ಇಟ್ರು.

Superb Quote


Wednesday, March 14, 2007

Tuesday, March 13, 2007

ಇಂದಿನ ವಕ್ರ ತುಂಡು…

ನಾಗನ ಹೆಡೆಯನ್ನಾದರೂ ಹಿಡಿ ಆದರೆ
ನಾರಿಯ ಜಡೆಯನ್ನು ಹಿಡಿಯಬೇಡ !

Friday, March 9, 2007

ಮಂಗನ ಮನಕ್ಕೆ ಕನ್ನ ಹಾಕಿದಾಗ….

ನನಗೆ ಮತ್ತು ಮಂಗನಿಗೆ ಒಂದು ಥರ ಅವಿನಾಭಾವ ಸಂಬಂಧ. ನನ್ನದು ಮಂಗಳೂರಿನ ಪಕ್ಕದ ಹಳ್ಳಿಯಾಗಿರುವುದರಿಂದ ಮಂಗಗಳ ಜೊತೆಯಲ್ಲೆ ಬೆಳೆದವನು ಅನ್ನಬಹುದು. ಈ ಮಂಗನ ಮನಸ್ಸೇ ನನಗೆ ಒಂದು ಲೇಖನ ಬರೆಯುವ ಸ್ಪೂರ್ತಿಯನ್ನು ನೀಡಿದೆ.

ಮಂಗ ಅಂದ ಕೂಡಲೆ ನನಗೆ ನೆನಪು ಬರುವುದು ನಾವು ಸಣ್ಣ ಮಕ್ಕಳಿದ್ದಾಗ ಆಡುತ್ತಿದ್ದ ಮರ ಕೋತಿ ಆಟ. ಆ ಆಟದಲ್ಲಿ ಮರ ಏರಿ ಟೊಂಗೆ ಟೊಂಗೆ ಹಾರಿ ಕೈಗೆ ಸಿಗದ ಹಾಗೆ ಮರದ ತುದಿಯಲ್ಲಿ ಕುಳಿತುಕೊಳ್ಳುವಾಗ ಇದ್ದ ಉತ್ಸಾಹವೆ ಬೇರೆ ಬಿಡಿ. ಈಗ ಬೆಂಗಳೂರಿನಂಥ ಕಾಂಕ್ರೀಟ್ ಕಾಡಿನಲ್ಲಿ ಕೆಳಗೆ ನಿಂತು ನೋಡಲು ಕೂಡ ಮರಗಳೇ ಸಿಗುವುದಿಲ್ಲ. ಆದರೂ ಕೆಲವು ಮಂಗಗಳು ಈ ಕಾಂಕ್ರೀಟ್ ಕಾಡಿನಲ್ಲೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ನಮಗೆ ಅವು ಕಾಣ ಸಿಕ್ಕಾಗ ನಮಗೊಂದು ಗೆಸ್ಟ್ ವಿಸಿಟ್ ಅನ್ನಿ.

ಈ ಮಂಗಗಳು ಹೆಚ್ಚಾಗಿ ಕಾಣ ಸಿಗುವುದು ಬೆಟ್ಟ ಗುಡ್ಡಗಳಲ್ಲಿರುವ ದೇವಸ್ಥಾನಗಳಲ್ಲಿ. ನಮ್ಮ ಮನೆಯಿಂದ ಒಂದು ೫ ಕಿ.ಮಿ. ಅಂತರದಲ್ಲಿ ಒಂದು ಶಿವ ದೇವಸ್ಥಾನವಿದೆ. ತುಂಬಾ ಎತ್ತರದ ಕಲ್ಲಿನ ಮೇಲೆ ಈ ದೇವಸ್ಥಾನವನ್ನು ಕಟ್ಟಿದ್ದಾರೆ. ಅಲ್ಲಿ ಈ ಮಂಗಗಳಿಗೆ ಪ್ರತಿ ಮಧ್ಯಾಹ್ನ ಸರಿಯಾಗಿ ೧೨ಕ್ಕೆ ಊಟ ಹಾಕುತ್ತಾರೆ. ಈ ಮಂಗಗಳದು ಏನು ಸಮಯ ಪಾಲನೆ ಅಂತೀರಾ? ಸರಿಯಾಗಿ ಒಂದು ಐದು ನಿಮಿಷ ಇರಬೇಕಾದ್ರೆ ಹಾಜರ್!. ಈ ದೇವಸ್ಥಾನಕ್ಕೆ ಹೋಗಿ ಬರುವವರಿಗೆ ಇವುಗಳ ಕಾಟ ತಪ್ಪಿದ್ದಲ್ಲ. ಬಾಳೆಹಣ್ಣು, ತೆಂಗಿನಕಾಯಿ ಏನಿದ್ದರೂ ಓಡಿ ಬಂದು ಭಕ್ತರ ಕಾಲು ಹಿಡಿಯುತ್ತವೆ. ನಾನು ಕೂಡ ಕಾಲು ಹಿಡಿಸಿಕೊಂಡಿದ್ದೆ ಬಿಡಿ. :-)

ಇತ್ತೀಚೆಗೆ ಒಂದು ದಿನ ಬೆಳಿಗ್ಗೆ ಪೇಪರ್ ಓದುತ್ತಾ ಕೂತಿದ್ದೆ. ವಿಜಯ ಕರ್ನಾಟಕದ ಮುಖ ಪುಟದಲ್ಲೆ ಒಂದು ಲೇಖನ ನನ್ನ ಗೆಳೆಯ ಮಂಗನ ಬಗ್ಗೆ. ಆ ಮಂಗ ಎಮ್ಮೆ ಕಾಯೋ ಕೆಲಸ ಮಾಡುತ್ತೆ ಅಂತೆ!. ಒಂದು ಎಮ್ಮೆ ಮೇಲೆ ಕುಳಿತಿರೋ ಪೋಸ್ ನಲ್ಲಿ ಫೋಟೊ ತೆಗೆದಿದ್ದರು. “ಯಾರೇ ಕೂಗಾಡಲಿ ಊರೇ ಹೋರಾಡಲಿ” ಅನ್ನೊ ಥರ. ಅಯ್ಯೋ! ನಮ್ಮ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿರಬೇಕಾದರೆ ಇಲ್ಲೂ ಒಂದು ಕೆಲಸಕ್ಕೆ ಪೈಪೋಟಿ ಬಂತಲ್ಲ ಅಂದ್ಕೊಂಡೆ. ಇನ್ನು ಮೇಲೆ ಎಮ್ಮೆ ಕಾಯೋ ಕೆಲಸಕ್ಕೆ ಲಾಯಕ್ಕು ಅಂತ ಬೈಯ್ಯೊ ಹಾಗೂ ಇಲ್ಲ. ಆ ಕೆಲಸನೇ ಖಾಲಿಯಾದ ಮೇಲೆ ಬೈಯೋದೆಲ್ಲಿ ಬಂತು? :-)

ಈ ಮಂಗ ಎಷ್ಟೊ ಸಲ ಗೆಳೆತನಕ್ಕೆ ಒಂದು ಸಾಕ್ಷಿಯಾಗಿ ಇರುವುದನ್ನು ನೋಡಬಹುದು. ಉದಾಹರಣೆಗೆ ರಾಮಾಯಣದಲ್ಲಿ ರಾಮ ಗೆದ್ದಿದ್ದೆ ವಾನರ ಸೈನ್ಯದ ಬಲದಿಂದ. ನಾವು ನಾಯಿ ಮಂಗ, ಬೆಕ್ಕು ಮಂಗ, ಎಮ್ಮೆ ಮಂಗ ಗೆಳೆತನದ ಬಗ್ಗೆ ವಿಡಿಯೊ, ಫೋಟೊ ನೋಡುತ್ತಾ ಇರುತ್ತೇವೆ. ಹೀಗೆ ನೋಡಿದಾಗ ನನಗೆ ಅನ್ನಿಸುತ್ತದೆ ಮಂಗನ ಗೆಳೆತನವಾದರೂ ಮಾಡು ಆದರೆ ಹೆಣ್ಣಿನ ಗೆಳೆತನ ಮಾಡಬೇಡ ಅಂತ.!! :-).

ಈ ಒಂದು ಪ್ರಾಣಿ ನನ್ನ ಗಮನ ಸೆಳೆದದ್ದು ಅದರ ಶಿಸ್ತಿನಿಂದ. ಮಂಗಗಳು ಅಂದಾಗ ಹಳ್ಳಿಯ ಜನ ಗಾಬರಿ ಆಗುತ್ತಾರೆ. ಇವು ಧಾಳಿಯಿಟ್ಟಾಗ ಅವರು ತುಂಬಾ ಕಾಳಜಿಯಿಂದ ಸಾಕಿದ ತೆಂಗಿನ ಮರ, ಬಾಳೆ ಗಿಡ, ಪಪ್ಪಾಯ ಗಿಡ, ಹಲಸಿನ ಹಣ್ಣು, ಮಾವಿನ ಹಣ್ಣು ಇವುಗಳಿಗೆ ಸಂಚಕಾರ ಬಂತೆಂದೇ ಅರ್ಥ. ನಮ್ಮ ಮನೆಯ ತೆಂಗಿನ ಮರಕ್ಕೂ ಅಂಥ ಒಂದು ಸಂಚಕಾರ ಬಂದಿತ್ತು. ಆದರೆ ಒಂದು ವಿಷಯ ನಂಗೆ ತುಂಬಾನೆ ಇಂಟೆರೆಸ್ಟಿಂಗ್ ಅನ್ನಿಸಿದ್ದು ಅಂದ್ರೆ, ಈ ಮಂಗಗಳು ಒಂದು ಮರವನ್ನು ಗುರುತು ಮಾಡಿಕೊಂಡು ಬಿಟ್ಟಿರುತ್ತವೆ ಮತ್ತು ಪ್ರತಿ ಸಲ ಆ ಮರದ ಎಳನೀರನ್ನು ಮಾತ್ರ ಕುಡಿಯುತ್ತವೆ. ಬಹುಶ: ನಮ್ಮ ಊರಿನ ಮಂಗಗಳಿಗೆ ಎಟಿಕ್ವೆಟೆ ಟ್ರೈನಿಂಗ್ ಆಗಿದೆಯೇನೋ!
ಹಾಗೆ ಶಿಸ್ತಿನ ಬಗ್ಗೆ ಹೇಳಿದಾಗ ನನಗೆ ಇನ್ನೊಂದು ಘಟನೆ ನೆನಪಿಗೆ ಬರುತ್ತಾ ಇದೆ. ನಮ್ಮ ಕಂಪೆನಿಯ ಕ್ಯಾಂಟೀನು ಇರುವುದು ಆರನೆ ಅಂತಸ್ತಿನಲ್ಲಿ. ಅಲ್ಲಿ ಹೀಗೆ ಹರಟುತ್ತಿರುವಾಗ ಬಂದನಲ್ಲ ನನ್ನ ಗೆಳೆಯ. ಮೆತ್ತಗೆ ಹೆಜ್ಜೆ ಹಾಕಿಕೊಂಡು ಕ್ಲೈಂಟ್ ಗಳಿಗೆ ಅಂತ ಇಟ್ಟಿರುವ ಮೇಜಿನ ಮೇಲೆ ಕುಳಿತೇ ಬಿಟ್ಟ. ಅವನ ಆಕಾರ ತುಂಬಾ ದೊಡ್ಡದಿತ್ತು ಅದಕ್ಕೆ ಎಲ್ಲರಿಗು ಒಂಥರಾ ಹೆದರಿಕೆ. ಆಗ ನನಗೆ ಇವನು ಯಾಕೆ ಅಲ್ಲಿ ಕೂತಿರಬಹುದು ಅನ್ನೋ ಯೋಚನೆ ಬೇರೆ. ಹಾಗೆ ನೋಡಿದಾಗ ಮೆತ್ತಗೆ ಬಟ್ಟೆ ಸರಿಸಿ ಒಂದು ಸೇಬು ಎತ್ಕೊಂಡೇ ಬಿಟ್ಟ. ನಾನು ಇನ್ನೇನು ಓಡಿ ಹೋಗ್ತಾನೆ ಅಂದ್ಕೊಂಡೆ. ಇಲ್ಲ, ಅಲ್ಲೆ ಕೂತ್ಕೊಂಡು ಶುರು ತಿನ್ನೋದಕ್ಕೆ. ಹೇಗೆ ಒಂದೇ ಹಣ್ಣನ್ನು ತೆಗೊಂಡ ಅಂದ್ರೆ ಕ್ಲೈಂಟ್ ಕೂಡ ಅದನ್ನು ನೋಡಿ ಕಲಿಯಬೇಕು ಬಿಡಿ. ಅದನ್ನು ಯಾರೊ ಒಬ್ಬ ನೋಡಿ ಓಡಿ ಹೋಗಿ ಕ್ಲಿಕ್ಕಿಸಿ ಬಂದಾಯ್ತು. ಹೀಗೆ ಒಂದು ಸ್ಪೆಷಲ್ ಕ್ಲೈಂಟ್ ನಮ್ಮ ಕಂಪೆನಿಗೆ.

ಇತ್ತೀಚೆಗೆ ಈ ಕಾಂಕ್ರೀಟ್ ಕಾಡಿನಲ್ಲಿ ಮಂಗಗಳಿಗೆ ಬದುಕುವುದು ಕೂಡ ಕಷ್ಟ ಆಗ್ತಾ ಇದೆ. ಹಿಂದಿನ ಕಂಪೆನಿಯಲ್ಲಿ ಇದ್ದಾಗ, ಮಂಗ ದಿನಾ ಕಂಪೆನಿಯ ನಲ್ಲಿಯಲ್ಲಿ ನೀರು ಕುಡಿಯಲು ಬರುತ್ತಿತ್ತು. ಅಲ್ಲು ವೆರೈಟಿ ಅನ್ನಿ, ಕೆಂಪು ಮಂಗ, ಕಪ್ಪು ಮಂಗ, ಬಾಲ ಇಲ್ಲದ ಮಂಗ ( ಅಂದರೆ ತುಂಡಾಗಿದೆ :-)) ಹೀಗೆ.

ಈ ಮಂಗನ ಕೆಲಸವಾದರೂ ಎಷ್ಟು ಅಲ್ಲವೆ. ಎಲ್ಲ ಕೆಲಸಗಳೂ ನಮ್ಮ ನಿಮ್ಮಂತೆ. ತಲೆ ಕೆರೆಯುವುದು, ಮೇಕಪ್ ಮಾಡುವುದು, ಹಾರುವುದು, ಕಾಟ ಕೊಡುವುದು ಹೀಗೆ. ನಮ್ಮದಂತೂ ವಿಪರೀತ ಮಂಗ ಬುದ್ಧಿ; ಮಂಗನಿಗೆ, ನಾಯಿಗಳಿಗೆ ಕಲ್ಲು ಹೊಡೆಯಲು ಯಾವಾಗ ಕರೆದರು ರೆಡಿ. ಇಂಥ ಕಥೆಗಳನ್ನು ಓದುವಾಗಲಾದರೂ ಮಂಗನಿಂದ ಮಾನವ ಅನ್ನೊ ಮಾತು ನಿಮ್ಮ ನೆನಪಿಗೆ ಬರ ಬಹುದು. ಅದರಿಂದಲಾದರು ಅವನಿಗೆ ನ್ಯಾಯ ಸಲ್ಲಬಹುದು ಅಲ್ಲವೆ? :-)

-- ರವಿಪ್ರಸಾದ್ ಶರ್ಮಾ ಕೆ.

Thursday, March 8, 2007