Tuesday, October 27, 2009

ಗೀಚಿದ ಕವನ - ೧

ಸಮದರ್ಶಿ

ತಾನೊಂದು ಧರ್ಮವ ಪಾಲಿಸುತ್ತಿದ್ದು

ಗುಡಿ ಚರ್ಚ್ ಮಸೀದಿಗಳೆಲ್ಲವ ಕಂಡಾಗ

ವಿಚಲಿತನಾಗದೆ ದೇವರನ್ನು ಕಾಣುವವನೇ – ಸಮದರ್ಶಿ.


ಕರ್ಮ ಯೋಗಿ

ತನ್ನ ಕಡಿಯಲು ಕೊಡಲಿ ತಂದರೂ

ಬಿಸಿಲ ಝಳಕ್ಕೆ ನೆರಳನ್ನೀಯುತ್ತ

ಸಾಯುವ ಮರವೇ – ಕರ್ಮ ಯೋಗಿ.


ಆಸ್ಪತ್ರೆ

ಬಾಳಲ್ಲಿ ವಿಧಿಯಾಟ ನಡೆಯುವಾಗ

ಕಾಲದೊಂದಿಗೆ ಸೆಣಸಾಡುವ ಘಳಿಗೆಯಲ್ಲಿ

ಉಳ್ಳವರಿಗೆ ಮಾತ್ರ ಮೀಸಲಿಟ್ಟ ಸಂತೆ - ಆಸ್ಪತ್ರೆ

Tuesday, August 11, 2009

ಹಳ್ಳಕ್ಕೆ ಬಿದ್ದರೆ …

ಈ ವರ್ಷ ಕೊಗ್ಗನಿಗೆ ಮದುವೆಗಳಿಗೆ ಹೋಗುವುದರಲ್ಲಿ ಬಿಡುವೇ ಇರಲಿಲ್ಲ. ಆರ್ಥಿಕ ಹಿಂಜರಿತದ ಬಿಸಿ ತಟ್ಟಿರುವುದರಿಂದ ಮನಸ್ಸಿನಲ್ಲಿ ಮದುವೆಗಳಿಗೆ ಹೋಗುವುದರ ಬಗ್ಗೆ ಹಿಂಜರಿತವಿದ್ದರೂ ಹೋಗುತ್ತಾನೆ. ಮದುವೆ ಮನೆಯ ಸಡಗರ, ಸೀರೆ ಉಟ್ಟ ನೀರೆಯರು ಮಾತ್ರವಲ್ಲದೆ ಭೋಜನ ಪ್ರಿಯನಾದುದರಿಂದ ಮದುವೆ ಬಗ್ಗೆ ಅತಿ ಆಸಕ್ತಿ. ಅದೊಂದು ಮದುವೆ ಮನೆಯಲ್ಲಿ ತನ್ನ ಗೆಳೆಯ ತನಿಯನ ಜೊತೆ ಕೊಗ್ಗ ಕುಳಿತಿದ್ದ. ಅಂದ ಹಾಗೆ ಕೊಗ್ಗನದು ಹೋದಲ್ಲೆಲ್ಲ ಅತಿ ಬುದ್ಧಿವಂತಿಕೆ.


ಹರಟುತ್ತ ಕುಳಿತಿರುವಾಗ ಮದುವೆ ಮುಹೂರ್ತ ಬಂದಿತು. ಪಕ್ಕ ಇದ್ದವರೆಲ್ಲ ಅಕ್ಷಂತರಿ ಹಿಡಿದು ವಧು ವರರ ಸುತ್ತ ಮುತ್ತ ಜಮಾಯಿಸಿದರು. ಅದನ್ನು ನೋಡಿದ ಕೊಗ್ಗ ತನಿಯನಿಗಂದ:


“ಹೇಯ್ ಈ ಅಕ್ಷಂತರಿ ಹಾಕುವುದರ ಹಿಂದಿನ ಅರ್ಥ ನಿನಗೆ ಗೊತ್ತಾ?”

“ಗೊತ್ತಿಲ್ಲ” ಬಂತು ತನಿಯನ ಉತ್ತರ.

“ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಅಂತ, ದಡ್ಡ ನನ್ ಮಗನೆ”, ಎಂದ ಕೊಗ್ಗ.

Sunday, July 26, 2009

ಸ್ವರ್ಗಂ ಗಚ್ಛಂತು ...

ಕೊಗ್ಗ ತನ್ನ ಹೈಸ್ಕೂಲಿನಲ್ಲಿ ಸ್ವಲ್ಪ ಅಂಕಗಳು ಹೆಚ್ಚು ಬರುತ್ತವೆ ಎನ್ನುವ ಕಾರಣದಿಂದ ಸಂಸ್ಕೃತವನ್ನು ಆಯ್ದುಕೊಂಡಿದ್ದ. ಅದು ಕಾಲೇಜಿನಲ್ಲೂ ಮುಂದುವರಿದಿತ್ತು. ಕೊಗ್ಗನಿಗೆ ಅಮ್ಮ ಇರಲಿಲ್ಲ, ಅಪ್ಪ ಮಂಗುರನಿದ್ದ. ಕೊಗ್ಗನ ಇಂದಿನ ಸ್ಥಿತಿಗೆ ಅವನ ಅಮ್ಮ ನೀಡಿದ ಕೊಡುಗೆ ದೊಡ್ಡದಾಗಿತ್ತು. ಅದನ್ನು ಆತ ಎಂದಿಗೂ ಮರೆಯಲಾರ. ಕೊಗ್ಗ ತನ್ನ ಅಮ್ಮನ ನೆನಪಿಗೆ ಪ್ರತಿವರ್ಷ ಶ್ರಾದ್ಧ ಹಾಕುವ ಪರಿಪಾಠ ಇಟ್ಟುಕೊಂಡಿದ್ದ. ಹಾಗೆ ಅವನು ಹಾಕುತ್ತಿದ್ದ ಶ್ರಾದ್ಧದಲ್ಲಿ ನಡೆದಂತಹ ಒಂದು ಘಟನೆ.

ಕೊಗ್ಗನ ಮನೆಯಲ್ಲಿ ಶ್ರಾದ್ಧ ನಡೆಸುತ್ತಿದ್ದ ಪುರೋಹಿತರು ಸ್ವಲ್ಪ ಅನುಕೂಲ ಶಾಸ್ತ್ರದವರು. 2 ಗಂಟೆ ಎಂದರೆ ಸಮಯಕ್ಕೆ ಸರಿಯಾಗಿ ಎಲೆ ಇಟ್ಟು ಊಟಕ್ಕೆ ಕೂತು ಬಿಡಬೇಕು ಅಂಥವರು. ಶ್ರಾದ್ಧದ ಕ್ರಮಗಳು ಕೊಗ್ಗನಿಗೆ ಅರ್ಥವಾಗುವುದಿಲ್ಲವಾದರೂ ಆತ ಪುರೋಹಿತರ ಮಂತ್ರಕ್ಕೆ ಕಿವಿ ಕೊಟ್ಟು ಕೇಳುತ್ತಾನೆ. ಕೆಲವು ಸಲ ಅವನಿಗೆ ಒಂದು ದರ್ಭೆ ಇಟ್ಟು ಆಮಂತ್ರಣ ಮಾಡುವುದು ವಿಚಿತ್ರ ಎನಿಸುತ್ತದೆ. ಏನೋ ಒಂದು ಹುಲ್ಲು, ಅಡಿಕೆ ಇಟ್ಟು ಅನ್ನ ಹಾಕಿ, ದಕ್ಷಿಣೆ ಹಾಕಿ ಎಂದರೆ ಯಾವನಿಗೆ ಅಸಮಾಧಾನ ಆಗದೆ ಇರುತ್ತದೆ ಹೇಳಿ. ನಿಜವಾಗಿ ಹಿಂದೆ ಆ ಜಾಗೆಗಳಲ್ಲಿ ಬ್ರಾಹ್ಮಣರು ಕೂರುತ್ತಿದ್ದರು. ಈಗೀಗ ಪ್ರತಿ ತಲೆಗೆ 1000ರೂ. ಕೊಟ್ಟರೂ ಬರುವವರಿಲ್ಲ. ಶ್ರಾದ್ಧದ ಊಟಾನ? ಎನ್ನುತ್ತಾರೆ. ಕ್ರಮ ಪ್ರಕಾರವಾಗಿ ಮಾಡುವಾಗ ಚಾಣಕ್ಯ ನೀತಿ, ಸುಭಾಷಿತಗಳಲ್ಲಿ ಬರುವ ಸಂಸ್ಕಾರಯುಕ್ತವಾದ ಬ್ರಾಹ್ಮಣ(ವಿದ್ಯೆಯಲ್ಲಿ ಪರಿಣತಿ ಹೊಂದಿದವರು) ಪೂಜೆಯೆಲ್ಲ ಶ್ರಾದ್ಧ ಮಾಡುವಾಗ ಬರುತ್ತವೆ. ಈಗಿನ ಬ್ರಾಹ್ಮಣರಲ್ಲಿ ಹಲವರು ವೈದಿಕ ಬ್ರಾಹ್ಮಣರಲ್ಲ ಬಿಡಿ.ಅವರೆಲ್ಲ ಹುಟ್ಟು ಬ್ರಾಹ್ಮಣರು, ಆಚಾರದಲ್ಲಿ ಬ್ರಾಹ್ಮಣರಲ್ಲ.

ಆ ದಿನ ಉಂಡೆ ರೀತಿಯಲ್ಲಿ ನೈವೇದ್ಯವನ್ನು ಮಾಡಿ ಎಲ್ಲ ಕೆಲಸ ಕಾರ್ಯವನ್ನು ಮಾಡಿದ ಕೊಗ್ಗನಿಗೆ ಕೊನೆಗೆ ಪುರೋಹಿತರಿಂದ ಅಚ್ಚರಿ ಕಾದಿತ್ತು. ಎಲ್ಲ ಕೆಲಸ ಕಾರ್ಯಗಳನ್ನು ಮಾಡಿದ ನಂತರ ನೆಲದ ಮೇಲಿನ ಎಳ್ಳನ್ನು ಮೇಲೆ ಹಾರಿಸಿ, "ಸರ್ಗಂ ಗಚ್ಛಂತು ಮಾತರಃ" ಎನ್ನುವ ಪರಿಪಾಠವಿದೆ. ಪುರೋಹಿತರು "ಸ್ವರ್ಗಂ ಗಚ್ಛಂತು ಪಿತರಃ" ಎಂದು ಬಿಡೋದ? ಏನು ಭಟ್ರೆ, ಪಿತರಃ ಅಂತ ಹೇಳಿದಿರಲ್ಲ ಎಂದ ಕೊಗ್ಗ. ಭಟ್ಟರಿಗೆ ಆಶ್ಚರ್ಯ!! ಕೊಗ್ಗನಿಗೆ ಅರ್ಥವಾಗಬಹುದೆಂದು ಅವರಿಗೆ ತಿಳಿದಿರಲಿಲ್ಲ. ಥಟ್ಟನೆ ಮಂಗುರನತ್ತ ನೋಡಿದರು. ಮಂಗುರ ಪಾಪ!!, ಏನೋ ಕೆಲಸದಲ್ಲಿ ಪುರೋಹಿತರ ಮಾತು ಕೇಳಿಸಿಕೊಂಡಿರಲಿಲ್ಲ. ಖುಷಿಯಾದ ಪುರೋಹಿತರಿಂದ ಬಂತೊಂದು ಸಮರ್ಥನೆ,"ಸತ್ತ ಮೇಲೆ ಎಲ್ಲರೂ ಪಿತೃಗಳೇ.. ತಲೆ ಕೆಡಿಸಿಕೊಳ್ಳಬೇಡ" . ಆದರೂ ಬದುಕಿರುವಾಗಲೇ ಇರುವ ತಂದೆಯನ್ನು ಸ್ವರ್ಗಕ್ಕೆ ಕಳುಹಿಸಿದ ಪುರೋಹಿತರ ಕ್ರಮ ಎಷ್ಟು ಸರಿ? ಅಲ್ಲವೆ?

Saturday, July 25, 2009

ಖಾದಿಯ ಕಥೆಯೇಕೆ ಹೀಗೆ?

ಒಂದು ಕಾಲದಲ್ಲಿ ಭಾರತದ ಬಡವರ ಮಾನ ಮುಚ್ಚುವ ಕೆಲಸ ಮಾಡಿದ್ದ ಖಾದಿ ಬಟ್ಟೆಯ ಕಥೆ ಇಂದು ಏನಾಗಿದೆ? ಏನಾಗಿರಬಹುದು? ಅದನ್ನು ವರ್ಣಿಸ ಹೊರಟರೆ ಅದೇ ಒಂದು ವ್ಯಥೆಯ ಕಥೆ.

ಕಳೆದ ವಾರ ಹೀಗೆ ನನಗೆ ಹಲವು ದಿನಗಳ ಕನಸಾಗಿದ್ದ ಖಾದಿ ಬಟ್ಟೆಯನ್ನು ಕೊಂಡುಕೊಳ್ಳುವ ಮನಸ್ಸಾಯಿತು. ನಾನು ನನ್ನ ಏಳನೇ ತರಗತಿಯಲ್ಲಿರುವಾಗ ಖಾದಿ ಪಂಚೆಯನ್ನು ಬಳಸುತ್ತಿದ್ದೆ. ನನಗೆ ಉಳಿದ ಪಂಚೆಗಳು ಸುಮಾರು ಆರು ತಿಂಗಳು ಬಂದರೆ, ಈ ಪಂಚೆ ನನಗೆ ಒಂದೂವರೆ ವರ್ಷ ಬಂದಿತ್ತು. ಈಗ ನನಗೆ ಅರ್ಥವಾಗುತ್ತಿದೆ ಗಾಂಧೀಜಿಯವರ ಯೋಚನೆಯ ಮಹತ್ವ. ಒಂದು ಸಲ ತೆಗೆದುಕೊಂಡರೆ ವರ್ಷಗಟ್ಟಲೆ ಬಾಳುವ ಖಾದಿ ಬಟ್ಟೆಯ ಖದರ್ರೇ ಬೇರೆ. ಅಂತಹ ಖಾದಿ ಬಟ್ಟೆ ಯಾಕೆ ಈಗ ಹೀಗಾಗಿ ಹೋಗಿದೆ?

ನಮ್ಮ ದೇಶದಲ್ಲಿ ಗಾಂಧೀಜಿಯವರು ಸ್ವ ಉದ್ಯೋಗವನ್ನು ಪ್ರೇರೇಪಿಸುವುದಕ್ಕಾಗಿ ಆರಂಭಿಸಿದ ಖಾದಿ ಬಟ್ಟೆ ಆಂದೋಲನವನ್ನು ಸ್ವಾತಂತ್ರ್ಯ ಸಿಕ್ಕಿ 50 ವರ್ಷಗಳಲ್ಲೇ ನಮ್ಮ ಸರಕಾರ ಕಿತ್ತು ಕಸದ ಬುಟ್ಟಿಗೆ ಬಿಸಾಕಿ ಪಾಶ್ಚಾತ್ಯ ದೇಶಗಳಿಗೆ ಮಣೆ ಹಾಕಬಹುದು ಎಂದು ಬಹುಶಃ ಯಾರೂ ಭಾವಿಸಿರಲಿಕ್ಕಿಲ್ಲ. ಇಂದು ನೀವು ಖಾದಿ ಬಟ್ಟೆ ಕೊಳ್ಳಲು ಹೋದರೆ ಒಂದು ಅಂಗಿಗೆ 500 ರೂ. ಗಳಿಗಿಂತ ಕಡಿಮೆ ಇಲ್ಲ. ಇಂದು ಗಾಂಧೀಜಿ ಬಂದಿದ್ದರೆ ಖಾದಿಯನ್ನು ಬಿಸಾಕಿ ಸೂಟು ತೊಡುತ್ತಿದ್ದರೇನೋ? ಅದೇ ಇಂಗ್ಲಂಡ್ ನ ಮಳಿಗೆಗಳು 300 ರೂ.ಗೆ ಉತ್ತಮ ಮಟ್ಟದ ಬಟ್ಟೆಗಳನ್ನು ಕೊಡುತ್ತದೆ. ನಾನು ಸ್ವ-ಉದ್ಯೋಗವನ್ನು ದೂರುತ್ತಿಲ್ಲ. ನನಗೆ ಬೇಸರವಾಗುತ್ತಿರುವುದು ಸರಕಾರದ ಪಕ್ಷಪಾತ ಧೋರಣೆ. ಇಂದು ಕರ ಹಾಕಬೇಕಾದರೆ, ಯಾವ ಮಟ್ಟಿಗೆ ಇಳಿಯಲು ಸಹ ಹೇಸದ ಸರಕಾರ, ಈ ಖಾದಿ ಉದ್ಯಮದ ಬಗ್ಗೆ ಸಬ್ಸಿಡಿಯನ್ನು ಕೊಟ್ಟು ಕಾಳಜಿಯನ್ನು ವಹಿಸಬಹುದಿತ್ತು. ಕಡಿಮೆ ಬೆಲೆಯಲ್ಲಿ ಸಿಕ್ಕರೆ ಜನರು ಸಹ ಮುಂದೆ ಬಂದು ತೆಗೆದು ಕೊಳ್ಳುತ್ತಾರೆ. ಖಾದಿ ಬಟ್ಟೆ ತೆಗೆದುಕೊಳ್ಳುವ ಆಸೆಯಿಂದ ಜನ ಬಂದರೆ ಆ ಆಸೆಯ ಬಳ್ಳಿಯನ್ನೇ ಮುರುಟಿ ಹಾಕುವ ಕೆಲಸ ಇಂದು ನಡೆದಿದೆ. ಹೀಗೆ ಖಾದಿ ಬಟ್ಟೆಯ ಬೆಲೆ ಮೇಲೆ ಹೋಗುತ್ತಿದ್ದರೆ ಖಾದಿ ಸರಳತೆಯ ಸಂಕೇತ ಆಗುವುದಿಲ್ಲ; ಬದಲಿಗೆ ಆಡಂಬರವಾಗುತ್ತದೆ. ಇಂದು ಖಾದಿ ಬಟ್ಟೆ ಜನ ಸಾಮಾನ್ಯ ಉಡುವ ಬಟ್ಟೆ ಆಗಿರದೆ ಬರಿ ಶ್ರೀಮಂತರು ಕೊಳ್ಳುವ ಬಟ್ಟೆ ಆಗುವ ಕಡೆ ಹೆಜ್ಜೆ ಇಟ್ಟಿದೆ ಎಂದಾದರೆ, ಅದಕ್ಕೆ ನಮ್ಮ ಸರಕಾರವೇ ನೇರ ಹೊಣೆ. ನಂದನ್ ನೀಲಕಿಣಿಗೆ ಖಾದಿ ಹಾಕು ಎಂದು ಹೇಳುವ ಜನ, ಇಂದು ಖಾದಿಯ ಬೆಲೆ ಯಾಕೆ ತಿಳಿಯದೆ ಹೋದರೋ?


ನನಗೆ ಇನ್ನೊಂದು ತಪ್ಪು ಹೆಜ್ಜೆ ಕಾಣಿಸಿದ್ದೇನೆಂದರೆ, ನಾನು ಹೋಗಿದ್ದ ಮಲ್ಲೇಶ್ವರಂ ನ ಖಾದಿ ಭಂಡಾರ್ ನಲ್ಲಿ ಒಂದೇ ಅಳತೆಯ ಬಟ್ಟೆ ತೆಗೆದುಕೊಳ್ಳಬೇಕೆಂದರೆ 15 ನಿಮಿಷ ಕಾಯಬೇಕು. ಯಾಕೆಂದರೆ ಬಟ್ಟೆಗಳು ಸರಿಯಾಗಿ ಜೋಡಿಸಲ್ಪಟ್ಟಿಲ್ಲ. ಒಂದು ಅಂಗಿ ಒಂದು ಕಡೆ ಇದ್ದರೆ, ಇನ್ನೊಂದು ಇನ್ನೆಲ್ಲೋ. ಇದೇಕೆ ಈ ಥರ ಇಟ್ಟಿದ್ದೀರ? ಎಂದು ಕೇಳಿದರೆ, ನಮ್ಮ ಸೆಕ್ರೆಟರಿ ಹತ್ತಿರ ಹೇಳಿ ಸರಿ ಮಾಡಿಸಬೇಕು ಸರ್ ಎನ್ನುವ ಉತ್ತರ ಬರುತ್ತದೆ. ಈಗಿನ ಗ್ರಾಹಕರು ಕಾಯುವುದನ್ನು ಇಷ್ಟಪಡುವುದಿಲ್ಲ ಮತ್ತು ಗ್ರಾಹಕ ಬೇಡ ಎಂದು ಯೋಚನೆ ಮಾಡುವ ಮೊದಲು ವಸ್ತುವನ್ನು ತೋರಿಸಿದವನು ಬುದ್ದಿವಂತ. ಗ್ರಾಹಕನಿಗೆ ಸಮಯ ಕೊಟ್ಟರೆ, ಆತ ಬೇಡ ಎಂದು ನಿರ್ಧಾರ ಮಾಡಿ ಬಿಟ್ಟಾಗಿರುತ್ತದೆ. ಈ ಅವ್ಯವಸ್ಥೆ ಕೂಡ ಖಾದಿಗೆ ಒಂದು ಕಪ್ಪು ಚುಕ್ಕೆ.

ಇಷ್ಟೆಲ್ಲ ಕಷ್ಟ ನಷ್ಟಗಳನ್ನು ಅನುಭವಿಸುತ್ತಿರುವ ಖಾದಿ ಉದ್ಯಮ, ಒಂದು ಕಾಲದಲ್ಲಿ ಆನೇಕ ಆಂದೋಲನಗಳಿಗೆ ಮುನ್ನುಡಿ ಬರೆದ ಖಾದಿ ಉದ್ಯಮ ಮುಂದಿನ ದಿನಗಳಲ್ಲಿ ವಸ್ತು ಸಂಗ್ರಹಾಲಯದಲ್ಲಿ ಇಡುವಂತಹ ಸ್ಥಿತಿಗೆ ಬರುವ ಮೊದಲು ಸರಕಾರ ಎಚ್ಚೆತ್ತುಕೊಂಡರೆ, ಜನತೆಗೆ ಅದೊಂದು ಮಹದುಪಕಾರ.

Monday, June 22, 2009

ಇವಳು ಯಾರು ಬಲ್ಲೆಯೇನು - ಕೆ. ಎಸ್. ನ.

ಇವಳು ಯಾರು ಬಲ್ಲೆಯೇನು ಇವಳ ಹೆಸರು ಹೇಳಲೇನು
ಇವಳು ಯಾರು ಬಲ್ಲೆಯೇನು ಇವಳ ಹೆಸರು ಹೇಳಲೇನು
ಇವಳ ದನಿಗೆ ತಿರುಗಲೇನು ಇವಳು ಏತಕೋ ಬಂದು ನನ್ನ ಸೆಳೆದಳು
ಇವಳು ಯಾರು ಬಲ್ಲೆಯೇನು ಇವಳ ಹೆಸರು ಹೇಳಲೇನು
ಇವಳ ದನಿಗೆ ತಿರುಗಲೇನು ಇವಳು ಏತಕೋ ಬಂದು ನನ್ನ ಸೆಳೆದಳು

ಅಡಿಯ ಮುಟ್ಟ ನೀಳ ಜಡೆ
ಅಡಿಯ ಮುಟ್ಟ ನೀಳ ಜಡೆ ಮುಡಿಯ ತುoಬ ಹೂವ ಹೆಡೆ
ಇವಳು ಅಡಿಯನಿಟ್ಟ ಕಡೆ ಹೆಜ್ಜೆ ಹಜ್ಜೆಗೆ
ಆ...ಓ...
ಇವಳು ಅಡಿಯನಿಟ್ಟ ಕಡೆ ಹೆಜ್ಜೆ ಹಜ್ಜೆಗೆ
ಒಂದು ದೊಡ್ಡ ಮಲ್ಲಿಗೇ
ಇವಳು ಯಾರು ಬಲ್ಲೆಯೇನು ಇವಳ ಹೆಸರು ಹೇಳಲೇನು
ಇವಳ ದನಿಗೆ ತಿರುಗಲೇನು ಇವಳು ಏತಕೋ ಬಂದು ನನ್ನ ಸೆಳೆದಳು

ಅoಗಾಲಿನ ಸಂಜೆಗೆಂಪು ಕಾಲಂದುಗೆ ಗೆಜ್ಜೆ ಇಂಪು
ಮೋಹದ ಮಲ್ಲಿಗೆಯ ಕಂಪು ಕರೆದುವೆನ್ನನು
ಆ...ಓ...
ಮೋಹದ ಮಲ್ಲಿಗೆಯ ಕಂಪು ಕರೆದುವೆನ್ನನು
ನಾನು ಹಿಡಿಯ ಹೋದೆನು
ಇವಳು ಯಾರು ಬಲ್ಲೆಯೇನು ಇವಳ ಹೆಸರು ಹೇಳಲೇನು
ಇವಳ ದನಿಗೆ ತಿರುಗಲೇನು ಇವಳು ಏತಕೋ ಬಂದು ನನ್ನ ಸೆಳೆದಳು
ಆಆ....ಆಆ...


ಬಂಗಾರದ ಬೆಳಕಿನೊಳಗೇ ಮುಂಗಾರಿನ ಮಿoಚು ಬೆಳಗೇ
ಇಳೆಗಿಳಿದಿಹ ಮೋಡದೊಳಗೆ ಮೆರೆಯಿತಿದ್ದಳು ನನ್ನ ಕರೆಯುತಿದ್ದಳು
ಇವಳು ಯಾರು ಬಲ್ಲೆಯೇನು ಇವಳ ಹೆಸರು ಹೇಳಲೇನು
ಇವಳ ದನಿಗೆ ತಿರುಗಲೇನು ಇವಳು ಏತಕೋ ಬಂದು ನನ್ನ ಸೆಳೆದಳು

ನಿನ್ನ ಪ್ರೀತಿಗೆ ...ಕೆ.ಎಸ್. ನರಸಿಂಹ ಸ್ವಾಮಿ

ನಿನ್ನ ಪ್ರೀತಿಗೆ, ಅದರ ರೀತಿಗೆ
ಕಣ್ಣ ಹನಿಗಳೆ ಕಾಣಿಕೆ ?
ಹೊನ್ನ ಚಂದಿರ, ನೀಲಿ ತಾರಗೆ
ಹೊಂದಲಾರದ ಹೋಲಿಕೆ.

ನಿನ್ನ ಪ್ರೀತಿಗೆ, ಅದರ ರೀತಿಗೆ
ಚೆಲುವು ಕನಸಿನ ಜವನಿಕೆ ;
ಬೆಳ್ಳಿನಿದ್ದೆಯ ತುಟಿಗಳಂಚಿಗೆ
ಸುಳಿದ ಕಿರುನಗೆ ತೋರಿಕೆ.

ತುಂಬಿ ಕೊರೆದಿಹ ಹೂವಿನೆದೆಯಲಿ
ನೋವು ಗಾಳಿಗೆ ಹಾಸಿಗೆ ;
ಜೇನು ಜೀವದ ನೆಳಲ ಪೊದೆಯಲಿ
ಗೂಡುಕಟ್ಟಿದೆ ಆಸೆಗೆ.

ತಂತಿಯಾಚೆಗೆ ವೀಣೆ ಮಿಂಚಿದೆ
ಬೆಂಕಿಬೆರಳಿನ ಹಾಡಿಗೆ ;
ನಿಟ್ಟುಸಿರ ಪಲ್ಲವಿ ಬೇಲಿಯಾಗಿದೆ
ಚಿಂತೆಯಾಳುವ ಕಾಡಿಗೆ.

ನಗುವ ಮುಖಗಳ ನೋಡಿಬಂದೆನು
ಹಾದಿ ಬೀದಿಯ ಕೆಲದಲಿ ;
ನಗದ ಒಂದೇ ಮುಖವ ಕಂಡೆನು
ನನ್ನ ಮನೆಯಂಗಳದಲಿ.

ನೂರು ಕನ್ನಡಿಗಳಲಿ ಕಂಡೆನು
ನೋಡಬಾರದ ಮುಖವನು ;
ಇಳಿದ ಮುಖದಿಂಗಿತವನರಿತೆನು
ಅಸುಖ ಮುದ್ರಿತ ಸುಖವನು.

ನಗದ ಮುಖದಲಿ ನಿನ್ನ ಕಂಡೆನು
ತಿಳಿದ ಬಾನಿನ ಹರಹನು,
ಮೊದಲ ಮೋಹದ ಮಂಜು ಕದಲಲು
ಬದುಕು ತುಂಬಿದ ಹಗಲನು.

ನಿನ್ನ ಪ್ರೀತಿಗೆ, ಅದರ ರೀತಿಗೆ
ನೀಡಬಲ್ಲೆನೆ ಕಾಣಿಕೆ ?
ಕಾಲವಳಿಸದ ನೆಲದ ಚೆಲುವಿಗೆ
ನಿನ್ನ ಪ್ರೀತಿಯೆ ಹೋಲಿಕೆ.

"ಇಕ್ಕಳ" - ಕೆ. ಎಸ್. ನರಸಿಂಹ ಸ್ವಾಮಿ

ಚಿಗುರ ಚಿನ್ನದ ನಡುವೆ ಹೂವ ಬಯಸುವರು
ಹೂವುಗಳ ಕಾಲದಲ್ಲಿ ಹಣ್ಣ ಹೊಗಳುವರು
ಹಣ್ಣಿನ ಗಾತ್ರ ಪೀಚು ಎಂದಿವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು
ಬಂತಲ್ಲಾ ಬೇಸಿಗೆ ಕೆಟ್ಟ ಬಿಸಿಲೆಂಬರು
ಮಳೆ ಬಿತ್ತೋ ಬಿಡದಲ್ಲ ಶನಿ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ನಿಂತರೆ ಕೇಳುವರು ನೀನೇಕೆ ನಿಂತೆ
ಮಲಗಿದರೆ ಗೊಣಗುವರು ಇವಗಿಲ್ಲ ಚಿಂತೆ
ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ಓದಿದರೆ ಹೇಳುವರು ಮತ್ತೊಮ್ಮೆ ಬರೆಯೊ
ಬರೆದಿಡಲು ಬೆದಕುವರು ಬರವಣಿಗೆ ಸರಿಯೋ
ಇವರ ಬಯಕೆಗಳೇನೋ ಇವರದೇ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

Monday, February 16, 2009

ಕೆಲಸವಿಲ್ಲದವನು ಅಡಿಕೆ ಮರ ಹತ್ತಿದಾಗ…

“Let us rise up and be thankful, for if we didn't learn a lot today, at least we learned a little, and if we didn't learn a little, at least we didn't get sick, and if we got sick, at least we didn't die; so, let us all be thankful.” – Buddha.

ಇತ್ತೀಚೆಗೆ ನನಗೆ ಕೆಲಸ ಕಡಿಮೆಯಿದ್ದಾಗ ನನ್ನ ಕೆಲಸಕ್ಕೆ ರಜೆ ಹಾಕಿ ಮನೆ ಕಡೆ ಹೆಜ್ಜೆ ಹಾಕಿದ್ದೆ. ನಮ್ಮ ಮನೆಗೆ ಇತ್ತೀಚೆಗೆ ಕರೆಂಟ್ ಹಾಕಿಸಲಾಗಿದೆ. ಆದ್ದರಿಂದ ನೋಡಲು ಇರುವುದು ಬರಿ ಬೆಳಕು ಮಾತ್ರ. ಟಿ.ವಿ. ತನ್ನ ಅಟ್ಟಹಾಸವನ್ನು ಪ್ರಾರಂಭಿಸಬೇಕಷ್ಟೆ. ಹಾಗಾಗಿ ನಾನು ಏನಾದರೂ ನನ್ನ ಸಮಯವನ್ನು ಕೊಲ್ಲಲು ಬಳಸುವ ದಾರಿ ಎಂದರೆ ತೋಟದ ಕಡೆಗೆ ಹೋಗುವುದು. ಅಡಿಕೆ ಮರಗಳು ಹೇಗಿವೆ? ಯಾವಾಗ ನೀರು ಹಾಕಬಹುದು? ಅಡಿಕೆ ಹಣ್ಣಾಗಿದೆಯೆ? ಹುಲ್ಲು ಜಾಸ್ತಿ ಬೆಳೆದಿದ್ದರೆ ಕಡಿಸಲು ಜನ ತರಿಸಿದರೆ ಹೇಗೆ? ಎಷ್ಟು ಖರ್ಚಾಗಬಹುದು? ಬಾಳೆಗಿಡದಲ್ಲಿ ಬಾಳೆ ಕಾಯಿ ಬೆಳೆದಿದೆಯೇ? ಹೀಗೆ ಸಾಗುತ್ತಿರುತ್ತದೆ ನನ್ನ ಯೋಚನಾ ಲಹರಿ.

ಅಡಿಕೆ ಮರ ಅಂದಾಗ ನನ್ನ ಗೆಳೆಯರ ಕಿವಿ ನೆಟ್ಟಗಾಗುತ್ತದೆ. ಹೇಯ್ ಸಾಹುಕಾರ! ಎಷ್ಟು ಎಕರೆ ಇದೆ ತೋಟ? ಎನ್ನುತ್ತಾರೆ. ಆದರೆ ಹೆಚ್ಚಿನವರಿಗೆ ಗೊತ್ತಿರದ ಮತ್ತು ಅಡಿಕೆ ಬೆಳೆಗಾರರಿಗಷ್ಟೆ ಗೊತ್ತಿರುವ ಒಂದು ವಿಷಯವಿದೆ. ಅದೆಂದರೆ, ಕೆಲಸಗಾರರ ಸಮಸ್ಯೆ. ಇತ್ತೀಚೆಗೆ ಪ್ರತಿ ಯುವಕನಿಗೂ ನೀಲಿ ಕಾಲರಿನ ಕೆಲಸ ಬೇಡ. ಗಾಡಿ ದೂಡುವ ಕೆಲಸ ಇದ್ದರೂ ಸರಿ, ಸಂಬಳ ಕಡಿಮೆಯಾದರೂ ಸರಿ, ಪೇಟೆ ಸೇರಿಕೊಂಡು ಬಿಡುತ್ತಾರೆ. ಇವತ್ತು ನಮ್ಮ ಮನೆಯಲ್ಲಿರುವುದು ಕೂಡ ಮುದುಕರಾದ ಅಪ್ಪ ಮತ್ತು ದೊಡ್ಡಪ್ಪ. ನಮ್ಮ ಊರಿನ ಯಾವುದೆ ಮೂಲೆಗೆ ಹೋದರೂ ಯುವಕರಿರುವ ಒಂದೈದು ಮನೆಗಳು ಸಿಗಬಹುದು. ಉಳಿದೆಲ್ಲ ಮನೆಗಳದೂ ಅದೇ ರಾಗ. ಇದಕ್ಕೆ ಗ್ಲೋಬಲೈಸೇಷನ್ ನ ಶಾಪ ಏನಾದರೂ ಬಿದ್ದಿರಬಹುದಾ? ಎಂದು ಕೆಲವು ಸಲ ಯೋಚಿಸುತ್ತೇನೆ. ಸಾಮಾನ್ಯ ಕೆಲಸಕ್ಕೆ ಯಾರಾದರೂ ಸಿಗಬಹುದು. ಆದರೆ ಮರ ಹತ್ತುವಂತಹ ಕೆಲಸಕ್ಕೆ ಜನವೇ ಸಿಗುವುದಿಲ್ಲ. ಹಾಗಾಗಿ ಹಿಂದೊಮ್ಮೆ ಸಲ ಹೋದಾಗ ಇಡೀ ದಿನ ದೋಂಟಿ(ಬಿದಿರಿನ ದೊಡ್ಡದಾದ ಕೋಲು) ಹಿಡಿದು ಅಡಿಕೆ ಕೊಯ್ದಿದ್ದೆ. ಹೆಕ್ಕುವುದು ಮತ್ತು ಹೊರುವುದಕ್ಕೆ ಅಪ್ಪ ನೆರವಾಗಿದ್ದರು. ಆದರೆ ಈ ಸಲ ಊರಿಗೆ ಹೋದಾಗ ಹೊಸದೊಂದು ಸಾಹಸಕ್ಕೆ ಕೈ ಹಾಕಿದೆ. ಅದೇ ಅಡಿಕೆ ಮರ ಹತ್ತುವುದು !

ಅಯ್ಯೋ ಅಡಿಕೆ ಮರ ಹತ್ತುವುದೇನು ದೊಡ್ಡ ವಿಷಯ? ಎಂದು ಹಲವರು ಮೂಗು ಮುರಿಯಬಹುದು. ಆದರೆ ಹತ್ತಿದವನಿಗೆ ಮಾತ್ರ ಗೊತ್ತು ಅದರ ಕರ್ಮ !. ನೀವು ಒಂದು ಮೀಟರ್ ಹತ್ತಿದಾಗ “ಉಸ್ಸಪ್ಪಾ!” ಅನ್ನುತ್ತೀರ. ಎರಡನೇ ಮೀಟರ್ ಗೆ “ಅಯ್ಯಪ್ಪಾ!” ಆಗುತ್ತದೆ. 4 ಮೀಟರ್ ಹತ್ತುವಷ್ಟರ ವೇಳೆಗೆ “ಹರೋ ಹರ” ವಾಗುತ್ತೀರ. ಯಾಕೆಂದರೆ, ಮರ ಹಿಡಿದುಕೊಂಡ ಕೈ ನೋಯಲು ಶುರುವಾಗುತ್ತದೆ. ಹತ್ತಿದ ಕಾಲು ಶಕ್ತಿಯಿಲ್ಲದೆ ನಡುಗಲು ಶುರುವಾಗುತ್ತದೆ. ಅಲ್ಲಿಗೆ ನಿಮ್ಮದು “ತ್ರಿಶಂಕು ಸ್ವರ್ಗ”. ಆ ಕಡೆ ಮೇಲೆಯೂ ಹೋಗಲಾಗುವುದಿಲ್ಲ ಕೆಳಗೂ ಬರಲಾರಿರಿ ಅಂಥದೊಂದು ಅನುಭವ. ಇಂಥ ಅನುಭವ ನನಗೆ ಸಣ್ಣವನಿರುವಾಗಲೇ ಇತ್ತು. ಆದುದರಿಂದ ಸರಿಯಾದ ಪರಿಕರಗಳನ್ನು ಹಿಡಿದುಕೊಂಡೇ ಹೊರಟಿದ್ದೆ. ಮರ ಹತ್ತುವುದಕ್ಕೆ ಸಹಕಾರಿಯಾಗಲು ಹಗ್ಗವನ್ನು ಸಣ್ಣದಾಗಿ ಕಟ್ಟಿ ಕಾಲಿಗೆ ಹಾಕಿಕೊಳ್ಳುತ್ತೇವೆ. ಇದಕ್ಕೆ “ತಳೆ” ಎನ್ನುತ್ತಾರೆ. ಇನ್ನೊಂದು ಪರಿಕರವೆಂದರೆ ಮರದ ಮೇಲೆ ನೇತಾಡಿಕೊಂಡು ಕೂರಲು “ಮಣೆ”. ನಾನು ಅಡಿಕೆ ತೆಗೆಯಲು ಸುಮಾರು 20 ಅಡಿ ಎತ್ತರ ಹತ್ತಬೇಕಿತ್ತು. ಸರಿ, ಹತ್ತಲು ರೆಡಿಯಾದೆ. ಕಾಲಲ್ಲಿ ತಳೆ, ಎಡ ಹೆಗಲಲ್ಲಿ ಮಣೆ, ಬಲಗೈನಲ್ಲಿ ದೋಂಟಿ ಹಿಡಿದು ಹತ್ತತೊಡಗಿದೆ. ಹತ್ತುವಾಗ ನನಗೊಂದು ಗುರಿಯಿತ್ತು. ಅದೆಂದರೆ, ನಾನು ಹರೋಹರ ಅನ್ನುವಷ್ಟರ ಒಳಗೆ ಮಣೆ ಹಾಕಿ ಕೂತುಬಿಡಬೇಕು. ಹಾಗೆಯೇ ಆಯಿತು ಬಿಡಿ, ಮಣೆ ಹಾಕಿ ಕೂರೂವುದೇನೋ ಕೂತುಬಿಟ್ಟೆ. ಆದರೆ ಕಾಲು ಐದು ನಿಮಿಷವಾದರೂ ನಡುಗುವುದನ್ನು ನಿಲ್ಲಿಸಲಿಲ್ಲ. ಜೊತೆಗೆ ದೇಹ ಕೂಡ ಸಹಕರಿಸುವುದನ್ನು ಕೈ ಕೊಟ್ಟಿತು. ಸುಮ್ಮನೆ ಮರದ ಮೇಲೆಯೆ ಕುಳಿತೆ. ಅಲ್ಲಿಂದ ಸುತ್ತಲಿರುವ ಒಂದೈದು ಮರಗಳ ಅಡಿಕೆಯನ್ನೇನೋ ತೆಗೆದೆ. ಆದರೆ ಇಳಿಯುವಷ್ಟರ ಹೊತ್ತಿಗೆ ನನ್ನಲ್ಲಿದ್ದ ಅಡಿಕೆ ತೆಗೆಯಬಹುದೆನ್ನುವ ಆತ್ಮ ವಿಶ್ವಾಸ ಉಡುಗಿ ಹೋಗಿತ್ತು. ಕೊನೆಗೆ ಅಡಿಕೆ ಹೆಕ್ಕುತ್ತಿರುವಾಗ ಸ್ವಲ್ಪ ಬೇಲಿಯ ಪಕ್ಕ ಚಲನೆಯಾಯಿತು. ಅಪ್ಪ ಏನಾದರೂ ಬಂದು “ನಾನು ಹೆಕ್ಕುತ್ತೇನೆ, ನೀನು ಹತ್ತು ಅಂದರೆ ನನ್ನ ಮಾನ ಮರ್ಯಾದೆ ಹೋದಂತೆ” ಎಂದು ಯೋಚಿಸಿ ನಿಂತಲ್ಲೆ ನಿಂತೆ. ಅದು ಪಕ್ಕದ ಮನೆಯ ದನ ಆಗಿತ್ತು. ಹೆಕ್ಕುವುದನ್ನು ಮುಂದುವರಿಸಿದ ನನ್ನ ತಲೆ ಇದಕ್ಕೊಂದು ಗಾದೆ ಹುಡುಕಿದರೆ ಹೇಗೆ? ಅಂತ ಯೋಚಿಸತೊಡಗಿತು. ಬಂತು ನೋಡಿ ಒಂದು ಗಾದೆ; “ಹತ್ತುವವನಿಗಿಂತ ಹೆಕ್ಕುವವನೇ ಬುದ್ದಿವಂತ” ಅಂತ.

ಇನ್ನೇನು ಕೊನೆಯ ಅಡಿಕೆ ಹೆಕ್ಕಬೇಕು ಅನ್ನುವಷ್ಟರಲ್ಲಿ ನನ್ನಲ್ಲಿ ಮತ್ತೆ ಕುದುರಿತು ನೋಡಿ ಹುಚ್ಚು ವಿಶ್ವಾಸ. “ಭಲೇ ಮಗನೆ! ಒಂದು ಮರ ಹತ್ತಿದ್ದೀಯ ಭೇಷ್,” ಎಂದಿತು ಮನಸ್ಸಿನ ಒಂದು ಮೂಲೆ. ಸುಮ್ಮನಿದ್ದ ಇನ್ನೊಂದು ಮೂಲೆ ಈಗಷ್ಟೆ ಮೊದಲ project ಮುಗಿಸಿದವನು I am experienced ಅಂದ ಹಾಗೆ ಮಗನೆ, ಇನ್ನೊಂದಕ್ಕೆ ಹತ್ತು ಎಂದು ಪ್ರೇರಿಪಿಸತೊಡಗಿತ್ತು. ಅದಕ್ಕೆ ಹೇಳುವುದು ನಮ್ಮ ಮನಸ್ಸು ನಮಗೆ ಒಂದು ಗೆಳೆಯನಿದ್ದಂತೆ, ಅಂತ. ಪ್ರತಿ ಕ್ಷಣದಲ್ಲೂ ಒಂದು ಸಾತ್ವಿಕ ಹಠವನ್ನು ನನ್ನ ಮನಸ್ಸು ನನಗೆ ಕೊಡುತ್ತಲೇ ಇರುತ್ತದೆ. ಇನ್ನೂ ಸ್ವಲ್ಪ ಹೆಚ್ಚು ಸಿದ್ದತೆ ಮಾಡಿ ಎರಡನೆ ಮರ ಹತ್ತಿದೆ. ನಾನು ಮರದಲ್ಲಿ ಕೂತಿರುವುದನ್ನು ನೋಡಿ ಪಕ್ಕದ ಮನೆ ಹುಡುಗಿ ಕಿಸಕ್ಕೆಂದು ನಕ್ಕು ಓಡಿ ಹೋದಳು. “ಚೆಡ್ಡಿ ಹಾಕಿದ್ದೇನೆ ಗೊತ್ತಾಯ್ತಾ?” ಎಂದು ರೇಗಿಸುವ ಮನಸ್ಸಾದರೂ, ಸಮಯ, ಸಂದರ್ಭ ಸರಿ ಇಲ್ಲವೆಂದು ಸುಮ್ಮನಾದೆ. ಹಾಗೆ ಕುಳಿತಲ್ಲಿಯೇ, ನನ್ನ ಸಾಧನೆಗಳಿಗೆ ನಕ್ಕವರಲ್ಲಿ ಇವಳು ಎಷ್ಟನೆಯವಳಿರಬಹುದೆಂದು ಲೆಕ್ಕ ಹಾಕುವ ಮನಸ್ಸು ಮಾಡಿದೆ. ಲೆಕ್ಕ ಸಿಗಲಿಲ್ಲ. ಮನದ ಮೂಲೆಯಿಂದೊಂದು ಮಾತು ಬಂದಿತ್ತು, “ ನನ್ನ ಸಾಧನೆಗಳಿಗೆ ನಕ್ಕವರಲ್ಲಿ ನೀನು ಮೊದಲಿಗಳೂ ಅಲ್ಲ; ಕೊನೆಯವಳೂ ಅಲ್ಲ. ಇನ್ನು ಕೆಲವು ದಿನ ಅಷ್ಟೆ, ಮರ ಹತ್ತಲು ಕಲಿತು expert ಆಗುತ್ತೇನೆ” ಎಂದಿತು ಮನಸ್ಸು. ಕೊನೆಗೆ ಸಾಕು ಎನ್ನಿಸಿ ಅಲ್ಲಿಂದ ಕಾಲು ಕಿತ್ತ ನಾನು ಸಾಯಂಕಾಲ ಒಂದೈದು ಮರ ಹತ್ತಿ ಇಳಿದೆ.

Expert ಎಂದಾಗ ನನ್ನ ಯೋಚನಾ ಲಹರಿ ಬದಲಾಯಿತು. ಯಾವುದೇ ಕ್ಷೇತ್ರದಲ್ಲಿ ಇವನು expert ಅಂದರೆ ಆ ಕ್ಷೇತ್ರ ಹೆಚ್ಚಿನವರಿಗೆ ಗೊತ್ತಿರುತ್ತದೆ. ಜನ ಸಾಮಾನ್ಯರಿಗೆ ನಿಲುಕದ ಕ್ಷೇತ್ರ ಎಂದರೆ ಅದು “ಐಟಿ”. ನಾನು ಇಂಜಿನಿಯರಿಂಗ್ ಮಾಡುತ್ತಿರುವಾಗ ಒಬ್ಬಾತ ನನಗೆ ಹೇಳುತ್ತಿದ್ದ. “ಕಂಪ್ಯೂಟರ್ ನವರಿಗೆ ಕಾಮನ್ ಸೆನ್ಸ್ ಇಲ್ಲ” ಎಂಬುವುದು ಅವನ ವಾದ. ಆಗ ಸಿಟ್ಟಿನಿಂದ ಅವನಿಗೆ, “ಕಂಪ್ಯೂಟರ್ ಗೊತ್ತಿರುವ ನನಗೆ ಕಾಮನ್ ಸೆನ್ಸ್ ಇಲ್ಲದಿದ್ದರೆ ಏನಾಯ್ತು? ನಿನಗೆ ಇದ್ದರೆ ಸಾಕು !” ಎಂದಿದ್ದೆ. ಆದರೆ ಇತ್ತೀಚೆಗೆ ಅವನ ಮಾತು ಸತ್ಯ ಇರಬಹುದು ಎನಿಸುತ್ತದೆ. ಏಕೆಂದರೆ, ನಮ್ಮದು ಅಂತಿಂಥ ವಾದವಲ್ಲ; ನಮ್ಮಲ್ಲಿರುವುದು “ಪಲಾಯನ” ವಾದ. ನೀವು ಅಡಿಕೆ ಮರ ಹತ್ತುವವನಲ್ಲಿ ಮಾತನಾಡಿದ್ದರೆ ಅವನಿಗೆ ಅದರಲ್ಲಿ ಎಲ್ಲ ವಿಷಯಗಳೂ ತಿಳಿದಿರುತ್ತವೆ. ಅದೇ ಸಾಫ್ಟ್ ವೇರ್ ಇಂಜಿನಿಯರ್ ಗಳ ವಿಷಯಕ್ಕೆ ಬಂದರೆ, “ಏನು ಕೆಲಸ ಸಾರ್?” ಎಂದರೆ, “ಕಂಪ್ಯೂಟರ್ ಇಂಜಿನಿಯರ್” ಎನ್ನುತ್ತಾರೆ. “ಮನೆಯಲ್ಲಿ ಒಂದು ಕಂಪ್ಯೂಟರ್ ಕೆಟ್ಟಿದೆ, ರಿಪೇರಿ ಮಾಡಿಕೊಡಬಹುದಾ?” ಎಂದರೆ “ನನ್ನದು ಸಾಫ್ಟ್ ವೇರ್” ಎನ್ನುತ್ತಾರೆ. “ಸರಿ ಅದಾದರೂ ಮಾಡಪ್ಪ” ಎಂದರೆ “ನನ್ನದು ಮಿಡಲ್ ವೇರ್/user interface” ಎನ್ನುತ್ತಾರೆ. “ಅದೇ ಮಾಡು” ಎಂದರೆ “ಅದರಲ್ಲಿ ಇದನ್ನು ಮಾಡಿದ್ದೇನೆ” ಎನ್ನುವ ಮಾತು. ಅದನ್ನು ನೋಡಿದರೆ ಯಾರಾದರೂ ಮನೆ ಕಟ್ಟುತ್ತಿದ್ದಾಗ ಬಂದು ಸೊಳ್ಳೆ ಹೊಡೆದು, ಮನೆ ನನ್ನದೇ ಎನ್ನುವವರ ಹಾಗೆ ಇದು ಎಂದನಿಸದೆ ಇರದು. ನಿಜವಾಗಿಯೂ ಇದು common sense ಗೆ ನಿಲುಕುವ ವಿಷಯವೇ ಅಲ್ಲ ಬಿಡಿ.

ಅವತ್ತು ಸಾಯಂಕಾಲ ನನ್ನ ಪಕ್ಕದ ಮನೆಯ ಹಿರಿಯರೊಡನೆ ಅಡಿಕೆ ಮರ ಹತ್ತಿದ ವಿಷಯವನ್ನು ಹೆಮ್ಮೆಯಿಂದ ಹೇಳಿದೆ. “ಯಾಕೆ ಬೇಕು ನಿನಗೆ?” ಅಂತ ರೇಗಿದರು. ನೋಡಿದರೆ, ಅವರು ಕೂಡ ಇತ್ತೀಚೆಗೆ ಏಣಿ ಏರಿ ಅಡಿಕೆ ಕೊಯ್ಯಲು ಪ್ರಯತ್ನಿಸಿದ್ದರಂತೆ. ಎಳೆಯಲು ಹೋಗಿ ಬಿದ್ದಂತಾಯಿತಂತೆ. ಅದಕ್ಕೆ ಅಲ್ಲೇ ಬಿಟ್ಟು ಹೊರಟು ಬಂದರಂತೆ. ಹೀಗೆ ಸಾಗುತ್ತದೆ ಕಥೆ. ಕಂಪೆನಿಗಳಲ್ಲಿ ಕಲಿಯುವುದರ ಬಗ್ಗೆ ಭಾಷಣ ಬಿಗಿಯುವವರಿಗೆ ನನ್ನ ಹೊಸ ಕಲಿಕೆ ವಿಚಿತ್ರ ಎನಿಸಬಹುದು. ಆದರೆ ಜೀವನ ಎಂದರೆ ಒಂದು ಕಲಿಕೆ. ಇಲ್ಲಿ ಕಲಿತವನು ಗೆಲ್ಲುತ್ತಾನೆ. ಕಲಿಕೆಗೆ ಮನಸ್ಸಿದ್ದರೆ ಸಾಲದು, ಅದನ್ನು ಸಾಕಾರಗೊಳಿಸುವ ಪ್ರಾಮಾಣಿಕ ಪ್ರಯತ್ನ ಮತ್ತು ಸಾತ್ವಿಕ ಛಲ ಇರಬೇಕು. ಬಹುಶ: ನಾವು ಕಲಿಯಲು ಪ್ರಾರಂಭಿಸುವುದು ನಮ್ಮ ಬುಡ ತನಕ ನೀರು ತುಂಬಿದಾಗ ಮಾತ್ರ ಅನಿಸುತ್ತದೆ. ಎಲ್ಲ ಮುಗಿದು ನಾವು ಕಲಿಯಬೇಕೆನಿಸಿದ್ದನ್ನು ಸಾಧಿಸಿದಾಗ ನಾವು ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತೇವೆ. ನಮ್ಮನ್ನು ನೋಡಿ ನಕ್ಕಾತ ತನ್ನ ಕೆಲಸದೊಂದಿಗೆ ಅಸಹಾಯನಾಗಿ ಕೂತಿರುತ್ತಾನೆ. ಕೊನೆಗೆ, ಒಂದು ವೇಳೆ ಬರುವ ವರ್ಷ ಯಾರಾದರೂ ಹತ್ತುವವರು ಸಿಕ್ಕಿದ್ದರೆ ಹೇಗೆ? ಎನ್ನುವ ಆಸೆಯೂ ಮೊಳೆಯಿತು. ಆಗ ನನ್ನ ಮನಸ್ಸಿಗೆ ಥಟ್! ಅಂತ ಬಂದ ಯೋಚನೆ, “ಅವನಿಗೆ ಒಳ್ಳೆಯ ಅಪ್ರೈಸಲ್ಲು ಕೊಡಬೇಕು” ಅಂತ. ಹಾಗೆಯೇ ಒಂದೈದು ಮರ ಹತ್ತಲು ನೆರವಾದ ಕೈ ನೋಡಿದಾಗ, ಮರ ತಾಗಿ ತಾಗಿ ಗೀರು ಬಿದ್ದ ಕೈ ರಕ್ತ ಸಿಕ್ತವಾಗಿತ್ತು.

Tuesday, January 6, 2009

ಸಂಸ್ಥೆ ಸಮರ್ಥನಂ ಅಂತ !!!

ಯಾವಾಗಲೂ ನಮಗೆ ಜನ ಯಾರಾದರೂ ನಮ್ಮನ್ನು ನೋಡುವಂತಹ ಕೆಲಸ ಮಾಡಬೇಕು. ನಮಗೆ ಮೂಡ್ ಕೆಟ್ಟಾಗ ಹೊಸ ಹೊಸ ಜಾಗಗಳನ್ನು ನೋಡಬೇಕು, ಹೇಯ್ ಆ ಹುಡುಗಿ ಚೆನ್ನಾಗಿದ್ದಾಳೆ ನೋಡು ಹೀಗೆ ದ್ರಷ್ಟಿಗೆ ಸಂಬಂಧಪಟ್ಟ ಅನೇಕ ವಿಷಯಗಳು ನಮ್ಮ ಮನದಲ್ಲಿರುತ್ತವೆ. ಇತ್ತೀಚೆಗೆ ಮಾಂಡೂಕ್ಯೋಪನಿಷತ್ ಓದುತ್ತಿರುವಾಗ ಅಲ್ಲಿ ಒಂದು ವಿಷಯವನ್ನು ಓದಿದೆ. ನಮ್ಮ ಎಚ್ಚರದ ಸ್ಥಿತಿಯಲ್ಲಿ ನಾವು ನಮ್ಮ ಬಲಗಣ್ಣಿನಿಂದ ನೋಡುತ್ತೇವೆ ಎಂದು(ಮಾಂಡೂಕ್ಯೋಪನಿಷತ್ ಮನುಷ್ಯನ ಎಚ್ಚರ, ಸ್ವಪ್ನ ಮತ್ತು ಗಾಢ ನಿದ್ರೆ ಎಂಬ ೩ ವಿಭಾಗಗಳ ಬಗ್ಗೆ ಹೇಳುತ್ತದೆ). ಅದೊಂದು ತತ್ವಜ್ಞಾನದ ಮಾತಾಯಿತು. ಆದರೆ ಕೆಲವರಿಗೆ ಕಣ್ಣೇ ಇರುವುದಿಲ್ಲವಲ್ಲ? ಅವರ ಗತಿ ಏನು? ಅವರ ಜೀವನ ಶೈಲಿ ಹೇಗೆ? ಎಂದು ನೋಡಲು ಹೊರಟರೆ ಬೆರಗಾಗುತ್ತದೆ. ಒಬ್ಬ ಕುರುಡನ ಬದುಕು ಬೇಡವೆನಿಸುತ್ತದೆ. ನನ್ನ ಅಮ್ಮ ಕೊನೆಗಾಲದಲ್ಲಿ ನನಗೊಂದು ಅತ್ಯಂತ Shock ಆಗುವಂಥ ವಿಷಯ ಹೇಳಿದ್ದರು. ಅದೆಂದರೆ, “ರವಿ ನನ್ನ ಕಣ್ಣು ಕಾಣಿಸುತ್ತಿಲ್ಲ. ನಾನು ಬದುಕುಳಿದರೆ ನನ್ನ ಕಣ್ಣು ಆಪರೇಶನ್ ಮಾಡಿಸುತ್ತೀಯಲ್ವಾ?” ಅಂತ. ಆ ಸಮಯದಲ್ಲಿ ಭಾವುಕನಾಗಿ “ಹೌದು” ಅಂದಿದ್ದೆ.

ಅದೊಂದು ಭಾನುವಾರ, ಆಗ ನನಗೆ ವಿಪರೀತ ಕೆಲಸ. ಹಾಗಾಗಿ ಆಫೀಸಿಗೆ ಬಂದು ದೀಪಾಂಜಲಿ ನಗರದಲ್ಲಿ ಇಳಿದಿದ್ದೆ. ಒಂದು ಐದು ನಿಮಿಷಗಳ ನಂತರ ಒಬ್ಬಾತ ಬಂದು “ಸರ್, ಮೆಜೆಸ್ಟಿಕ್ ಬಸ್ ಬಂದರೆ ಹೇಳಿ” ಅಂದ ಹಾಗಾಯಿತು. ತಿರುಗಿ ನೋಡಿದೆ, ಒಬ್ಬ ಕುರುಡ ನಿಂತಿದ್ದ. ಸರಿ, ನಾನು ಕೂಡ ಮೆಜೆಸ್ಟಿಕ್ ಗೆ ಬರುವವನಿದ್ದೆ. ಅದಕ್ಕೆ ಹತ್ತಿಸಿದರಾಯಿತು ಎಂದು “ಇನ್ನೇನು ಬರತ್ತೆ, ಬಂದಾಗ ಹೇಳುತ್ತೇನೆ” ಎಂದು ಸುಮ್ಮನಾದೆ. ಬಸ್ ಬೇಗ ಬರಲಿಲ್ಲ. ಆತ ಇದ್ದವನು “ಸರ್, your good name?” ಅಂದ. ಯಾರೋ ಮುನ್ನಾ ಭಾಯಿ ಇರಬೇಕು ಅಂತ ಮನಸ್ಸಿಗೆ ಖುಷಿಯಾಗಿ ನನ್ನ ಹೆಸರು ಹೇಳಿ, ನಿಮ್ಮ ಹೆಸರೇನು? ಏನು ಮಾಡುತ್ತಿದ್ದೀರಿ ? ಎಂದು ಕೇಳಿದವನಿಗೆ ಅಚ್ಚರಿ ಕಾದಿತ್ತು. “ಸರ್, ನಾನು ಮಹೇಶ್, ಊರು ನಂಜನಗೂಡು. ಅಂತರ ರಾಷ್ಟ್ರೀಯ ಕ್ರಿಕೆಟರ್, ರಾಷ್ಟ್ರೀಯ ಚೆಸ್ ಚಾಂಪಿಯನ್. ಇಲ್ಲಿ ಜೆ.ಪಿ. ನಗರದ ಹತ್ತಿರ ಇದ್ದೇನೆ” ಎಂದು ಹೇಳಿದ. ಆಗ ನನಗೆ ಅನಿಸಿದ್ದು ಇಷ್ಟೆ! ನಾವು ಧೋನಿ, ತೆಂಡುಲ್ಕರ್ ಎಂದು ಅವರ ಹಿಂದೆ ಬೀಳುತ್ತೇವೆ. ನಮ್ಮ ರಾಜ್ಯದವನೆ ಆದಂತಹ ಒಬ್ಬ ಕುರುಡ international cricketer ಬಗ್ಗೆ ನಮಗೆ ವಿಷಯವೇ ಗೊತ್ತಿಲ್ಲ! ಆಟ ಒಂದೆ, ಆದರೆ ಅದನ್ನು ಆಡುವವರಿಗೆ ಸಿಗುವ ಸ್ಥಾನಮಾನವೇ ಬೇರೆ. ನನ್ನ ಯೋಚನೆಗಳಿಗೆ ತಡೆಯೊಡ್ಡುವಂತೆ ಅವನಿಂದ ಪ್ರಶ್ನೆ ಬಂತು. “ಸರ್, ನೀವು ಮಂಗಳೂರಿನವರಾ?” ಅಂತ. ಇಂದು ಬೆಂಗಳೂರಿಗೆ ಬಂದು, ಆ ಕಡೆ ಮಂಗಳೂರೂ ಅಲ್ಲ ಈ ಕಡೆ ಬೆಂಗಳೂರೂ ಅಲ್ಲ ಎಂಬಂತೆ ಇರುವವನ ಮೂಲವನ್ನು ಸರಿಯಾಗಿ ಹೇಳಿದ ವ್ಯಕ್ತಿಯ ಬಗ್ಗೆ ನನಗೆ ಕೂಡಲೆ ಮೆಚ್ಚುಗೆ ಮೂಡಿತು. ಒಬ್ಬ ಅಂತರ್ ರಾಷ್ಟ್ರೀಯ ಆಟಗಾರನನ್ನು ಮಾತನಾಡಿಸುವ ಹುಮ್ಮಸ್ಸು ಮೂಡಿತು.

ನನಗೆ ಅಂತರ ರಾಷ್ಟ್ರೀಯ ಆಟಗಾರರನ್ನು ಕ್ರಿಕೆಟ್ ನಲ್ಲಿ ಹೇಗೆ ಆಯ್ಕೆ ಮಾಡುತ್ತಾರೆ? ಎನ್ನುವ ಬಗ್ಗೆ ಒಂದು ಕೆಟ್ಟ ಕುತೂಹಲವಿತ್ತು. ಅದನ್ನು ಆತನಲ್ಲಿ ಕೇಳಿದೆ. ಆತನೆ ಹೇಳಿದ ಪ್ರಕಾರ, ಒಂದು ತಂಡವನ್ನು ರಚಿಸುವಾಗ 40 ಜನ ಆಟಗಾರರನ್ನು ತೆಗೆದುಕೊಂಡು 15 ದಿನಗಳ ಟ್ರೈನಿಂಗ್ ನಲ್ಲಿ 20 ಜನರ ಒಂದು ತಂಡವನ್ನು ಸಿದ್ದಪಡಿಸುತ್ತಾರಂತೆ. ಆಮೇಲೆ ನಡೆಯುವುದು ಹಿಂದೆ ಯಾರು ಆಡಿದ್ದರು? ಯಾರನ್ನು ತೆಗೆದುಕೊಳ್ಳಬೇಕು ಎಂಬ ಆಟ ಮೇಲಾಟಗಳು. ಈ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಕುರುಡರ ವಿಶ್ವಕಪ್ ನಡೆಯಲಿದೆಯಂತೆ. ಅದಕ್ಕೊಂದು “ಬೆಸ್ಟ್ ಆಫ್ ಲಕ್” ಹೇಳಿದೆ.

ಅಲ್ಲಿಂದ ನನ್ನ ಗಮನ ಚೆಸ್ ಆಟದತ್ತ ಹೊರಳಿತು. ನಿಮಗೆ ನೋಡಲು ಆಗುವುದಿಲ್ಲ ಚೆಸ್ ಆಟ ಆಡುವುದು ಕಷ್ಟ ಅಲ್ಲವೆ? ಎಂದು ನನ್ನ ಕುತೂಹಲದ ಇನ್ನೊಂದು ಬತ್ತಳಿಕೆಯನ್ನು ಬಿಟ್ಟೆ. ಅದಕ್ಕವನಿತ್ತ ಉತ್ತರ, ಬಿಳಿ ಕಾಯಿಗಳ ತಲೆಯ ಮೇಲೆ ಸಣ್ಣದೊಂದು dot ಇರುತ್ತದೆಯಂತೆ.ಕಾಯಿಗಳನ್ನು ಹೇಗೆ ಗುರುತಿಸುತ್ತೀರಿ? ಎಂದರೆ, ಆತ ತನ್ನ ಕೈ ಬೆರಳುಗಳನ್ನು ಅಗಲಿಸಿ ಹೇಳಿದ. “ಸರ್, ನೋಡಿ, ಇವು ಕೈ ಬೆರಳುಗಳು. ಆದರೆ ಎತ್ತರದಲ್ಲಿ ಬೇರೆ ಬೇರೆ ಬೆರಳುಗಳನ್ನು ಗುರುತಿಸಬಹುದಲ್ವ? ಅದೇ ರೀತಿ ಚೆಸ್ ಆಡುವಾಗ ಕಾಯಿಗಳನ್ನು ನೆನಪಿನಲ್ಲಿಡುತ್ತೇವೆ” ಎಂದ.ಆದರೂ ಆತನಿಗೆ ನೆನಪಿನ ಶಕ್ತಿ ಚೆನ್ನಾಗಿರಬೇಕು ಎಂದು ನನಗನಿಸಿತು.

ಈ ಕುರುಡರ ಬಗ್ಗೆ ನಾನು ಗಮನಿಸಿರುವ ಅಂಶ ಎಂದರೆ, ಅವರ ಹ್ರದಯ ವೈಶಾಲ್ಯತೆ. ನಿಮಗೆ ಇಷ್ಟವಾಗುವ ಹಾಗೆ ಮಾತನಾಡುತ್ತಾರೆ. ಒಂದು ಪುಟ್ಟ ಮಗು ಸಿಕ್ಕರೆ ಹೊರಗೆ ಮರ ನೋಡು ಎಂದು ತಮಗೆ ನೋಡುವ ಶಕ್ತಿಯಿಲ್ಲದಿದ್ದರೂ ಪರರ ಸಂತೋಷದಲ್ಲಿ ಸಂತ್ರಪ್ತಿಯನ್ನು ಕಾಣುತ್ತಾರೆ. ಒಂದು ದಿನ ಬೆಂಗಳೂರಿನ ಬಸ್ ನಲ್ಲಿ ಕುರುಡನಾಗಿದ್ದ ಅಪ್ಪ ತನ್ನ ಮಗನಲ್ಲಿ ಬೆಂಗಳೂರಿನ ಮರ, ಅಂಗಡಿ, ಟ್ರಾಫಿಕ್ ಎಂಜಾಯ್ ಮಾಡ್ತಾ ಇದ್ದೀಯ? ಎಂದು ಪ್ರಶ್ನಿಸುವುದನ್ನು ನೋಡಿದ್ದೆ. ಈತ ಕೂಡ ಬಸ್ ನಲ್ಲಿ ಸೀಟು ಸಿಕ್ಕಿದ ಕೂಡಲೆ ಪಕ್ಕ ಇದ್ದ ಮಗುವೊಂದನ್ನು ಎದೆಗವಚಿಕೊಂಡು ಮಾತನಾಡಿಸುತ್ತಿದ್ದ. ನನ್ನ ಪಕ್ಕದವನಲ್ಲಿ ಹೇಳಿದೆ. ಅವನು international cricketer ಅಂತ. ಆತ ಇದ್ದವನು “ನೋಡ್ರಿ ದೇವರು ಎಂಥವರಿಗೆ ಎಂಥ ಶಿಕ್ಷೆ ಕೊಟ್ಟಿರುತ್ತಾನೆ?” ಅಂತ. ನನಗೆ ಅಂಥ ಮಾತುಗಳು ಇಷ್ಟವಾಗುವುದಿಲ್ಲ. ನಮ್ಮ ಎದುರು ಇರುವವರು ಹೇಗಿದ್ದಾರೆ? ಅದನ್ನು ಒಪ್ಪಿಕೊಳ್ಳಲು ನಾವು ಕಲಿಯಬೇಕು. ಅದು ಬಿಟ್ಟು ದೇವರ ಮೇಲೆ ಸಲ್ಲದ ಆರೋಪ ಹೊರಿಸಲು ಹೋಗಬಾರದು.

ಮನುಷ್ಯರಲ್ಲಿರುವ ವ್ಯತ್ಯಾಸಗಳಿಷ್ಟೆ, ಕೆಲವರು ಕುರುಡರಾದರೆ ಬೀದಿ ಬದಿಯ ಭಿಕ್ಷುಕರಾಗುತ್ತಾರೆ. ಇನ್ನು ಕೆಲವರು ತಮಗಿರುವ ಅಡೆ ತಡೆಗಳನ್ನು ಮೀರಿ ಸಂಗೀತಗಾರರು, ನಾಟ್ಯಗಾರರು, ಆಟಗಾರರು, ಅಂಗಡಿ ಇಟ್ಟವರಾಗಿ ಬೆಳೆದು ನಮ್ಮಂತವರಿಗೆ ಆದರ್ಶವಾಗಿ ನಿಲ್ಲುತ್ತಾರೆ. ನಾವು ಕೂಡ ಅಷ್ಟೆ ಎಷ್ಟೋ ಸಲ ನಾವೆಷ್ಟು ಅದ್ರಷ್ಟಶಾಲಿಗಳು ಎಂಬುದನ್ನು ಮರೆತು ಜಡತ್ವದಿಂದಲೇ ನಮ್ಮ ಸಮಯವನ್ನು ವ್ಯರ್ಥ ಮಾಡಿ ಬಿಟ್ಟಿರುತ್ತೇವೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ನಮಗೆ ಬಾಹ್ಯ ಪ್ರಪಂಚವನ್ನು ತೋರಿಸುವ ದೇಹದೊಳಿರುವ ಕಣ್ಣು ತೆರೆದಿದ್ದರೆ ಇಂತಹ ವ್ಯಕ್ತಿಗಳ ಒಳ ಕಣ್ಣು, ಅಂದರೆ, ಅಂತ:ಕರಣ ತೆರೆದಿರುತ್ತದೆ. ಕೊನೆಗೆ ಅವನಲ್ಲಿ ಕೇಳಿದೆ, “ಯಾವ ಸಂಸ್ಥೆಯಲ್ಲಿದ್ದೀರಿ?” ಅಂತ. ಆತನಿಂದ ಬಂದ ಉತ್ತರ “ಸಮರ್ಥನಂ” ಅಂತ.