Tuesday, March 27, 2007

ಓ ಹೆಣ್ಣೆ! ಏನು ನಿನ್ನ ಜಡೆಯ ಮಾಯೆ?




ಈಗಿನ ಹೈಟೆಕ್ ಕಾಲದಲ್ಲಿ ಜಡೆಯ ಬಗ್ಗೆ ಬರೆದರೆ ತಪ್ಪಾದೀತು. ಆದರೂ ಕೂಡ ಜಡೆಯ ಮೇಲೆ ನನಗೆ ಸಣ್ಣವನಿದ್ದಾಗಿನಿಂದಲೂ ಒಂದು ವಿಶೇಷ ಅಕ್ಕರೆ. ಜಡೆ ಮೇಲೊಂದು ಹೂವು ಇದ್ದರೆ ಹೆಣ್ಣಿಗೊಂದು ಕಳೆ ಇದ್ದ ಹಾಗೆ. ಜಡೆಯಲ್ಲಿ ಕೂಡ ವಿವಿಧ ವಿಧಗಳಿವೆ. ಉದ್ದವಾಗೆ ಹೆಣೆದ ಜಡೆ, ಕುದುರೆ ಬಾಲ ( pony tail), ಬಾಬ್ ಕಟ್, ಭಟ್ಟರ ಜಡೆ ಇತ್ಯಾದಿ.

ನಾನು ಸಣ್ಣವನಿರುವಾಗ ನನಗೆ ನನ್ನ ಅಕ್ಕನ ಜಡೆ ಹಿಡಿಯುವ ಅಭ್ಯಾಸ ಇತ್ತು. ಒಂದು ವೇಳೆ ಅವಳು ತನ್ನ ಜಡೆ ಸ್ವಲ್ಪ ತುಂಡರಿಸಿದರೂ ನಾನು ಅವಳ ಜೊತೆ ಜಗಳಕ್ಕೆ ನಿಲ್ಲುತ್ತಿದ್ದೆ. ಏನು ನಿನಗೆ ಒಂದು ಚೂರು ಕೂಡ ಜಡೆಯ ಮೇಲೆ ಕನಿಕರವೇ ಇಲ್ಲ ಎಂದು ಬೈಯ್ಯುತ್ತಾ ಇದ್ದೆ. ಈಗ ಅವಳ ಮಗನಿಗೆ ಮಲಗಿ ನಿದ್ದೆ ಮಾಡಬೇಕಿದ್ದರೆ ಜಡೆ ಬೇಕೆ ಬೇಕು. ಅಂದರೆ ಜಡೆಗೆ ಮಲಗಿಸುವ ಗುಣ ಇದೆ ಎಂದಾಯಿತು.

ಈಗಲೂ ನನಗೆ ಹುಡುಗಿಯರ ಜಡೆ ನೋಡುವ ಒಂದು ಅಭ್ಯಾಸ. ಒಂದು ದಿನ ನನ್ನ ಗೆಳೆಯನ ಜೊತೆ ಹಾಳು ಹರಟೆಯಲ್ಲಿ ತೊಡಗಿದ್ದೆ. ಆಗ ಅವನು ನನಗೆ ಗೊತ್ತಿರುವ ಹುಡುಗಿ ಹೆಸರು ಹೇಳಿದ. ನನ್ನ ತಲೆಗೆ ಅದು ಹೊಳೆಯಲೇ ಇಲ್ಲ. ನನ್ನ ಪುಣ್ಯಕ್ಕೆ ಉದ್ದ ಜಡೆ ಅಂದ ನೋಡಿ! ಕೂಡಲೆ ನೆನಪಿಗೆ ಬಂತು ಹುಡುಗಿಯ ಮುಖ. ಅದರ ಅರ್ಥ ಏನಂದರೆ ಯಾರದಾದರೂ ಗುರುತು ಹಿಡಿಯಲು ಜಡೆ ತುಂಬಾನೆ ಸಹಕಾರಿ ಅಂತ.

ನೀವು ದಕ್ಷಿಣ ಕನ್ನಡದ ಮದುವೆಗಳನ್ನು ನೋಡಿದ್ದರೆ, ಆ ಮದುವೆಗಳಲ್ಲಿ ಹೆಣ್ಣಿನ ಜಡೆಯನ್ನು ಗುಲಾಬಿ, ಮಲ್ಲಿಗೆ, ದುಂಡು ಮಲ್ಲಿಗೆ, ಜಾಜಿ ಹೂವುಗಳಿಂದ ಅಲಂಕರಿಸಿರುತ್ತಾರೆ. ಆ ಜಡೆಯ ಅಂದವನ್ನೊಮ್ಮೆ ನೋಡಬೇಕು. ಫೋಟೊಗ್ರಾಫರ್ ನ ಕಾಟದಲ್ಲಿ ನೋಡುವುದು ಕೂಡ ಒಂದು ಸಾಹಸವೆ ಬಿಡಿ. ಈಗ ಜಡೆ ಪುರಾಣ ನೋಡಿ ಎಲ್ಲಾ ಥರದ ಜಡೆ ಹಿಡಿಯಲು ಓಡಿ ಬಿಡಬೇಡಿ. ಈಗಿನ ಕಾಲದಲ್ಲಿ ಹುಡುಗರು ಕೂಡ ಜಡೆ ಬಿಡುತ್ತಾರೆ ಸ್ವಾಮಿ! J.

ಈ ಜಡೆಗೆ ಮರುಳಾಗದಿರುವವರು ತುಂಬಾನೆ ಕಡಿಮೆ ಜನ ಬಿಡಿ. ನೀವು ಮೈ- ಆಟೊಗ್ರಾಫ್ ಚಿತ್ರ ನೋಡಿದ್ದರೆ ಅದರಲ್ಲಿ ಸುದೀಪ್ ಬಾಲಕನಾಗಿದ್ದಾಗ ಜಡೆ ಹಿಂದುಗಡೆ ಹೋಗುವ ಒಂದು ಕಥೆ ಇದೆ. ಕೊನೆಗೆ ಅ ಹುಡುಗಿಯನ್ನು ಬಿಡುವಾಗಲೂ ಜಡೆಯ ತುದಿಯನ್ನು ಕತ್ತರಿಸಿ ಇಟ್ಟುಕೊಳ್ಳುತ್ತಾನೆ. ಕೆಲವು ಹಿಂದಿ ಹಾಡುಗಳಲ್ಲಿಯೂ ಹುಡುಗಿಯರ ಜಡೆ ಹಿಡಿದು ಕುಣಿಯುವ ದ್ರಶ್ಯಗಳು ತುಂಬಾನೆ ಇವೆ. ಇನ್ನು ಹುಡುಗಿಯರ ಹಾಸ್ಟೆಲ್ ಗಳಲ್ಲಿ ಒಂದು ಥರ ಬ್ಲಾಕ್ ಮೇಲ್ ಮಾಡಲು ಕೂಡ ಜಡೆ ಉಪಯೋಗಿಸಲ್ಪಡುತ್ತದೆ.

ಹಿಂದಿನ ಕಾಲದ ಹುಡುಗಿಯರಿಗೆ ತುಂಬಾ ಉದ್ದವಾದ ಜಡೆ ಇರುತ್ತಿತ್ತಂತೆ. ನನಗೆ ಅನಿಸುತ್ತದೆ ಆಗ ಪೊರಕೆಯ ಅವಶ್ಯಕತೆಯೇ ಇರಲಿಲ್ಲವೇನೊ? ಅದಲ್ಲದೆ ಜಡೆಯ ಇನ್ನೊಂದು ಬಹು ಮುಖ್ಯ ಉಪಯೋಗ ಇದೆ. ನಿಮ್ಮ ಮನೆಯಲ್ಲಿ ಬೆಕ್ಕು ಮೂಡು ಕೆಟ್ಟು ಕೂತಿದೆ ಅಂತಿಟ್ಟುಕೊಳ್ಳಿ. ಅದರ ಎದುರು ಒಂದು ಸಲ ಜಡೆಯನ್ನು ಆಡಿಸಿ ನೋಡಿ. ಛಂಗನೆ ಹಾರಿ ತನ್ನ ಆಟ ಪ್ರಾರಂಭ ಮಾಡುತ್ತೆ. ಇಂಥ ಒಂದು ಉಪಯೋಗ ನಿಮಗೆ ಗೊತ್ತಿತ್ತೆ? J.

ಜಡೆಯ ಮೇಲೆ ಗಾದೆಗಳು ಕೂಡ ಇವೆ. ಕೆಲವು ಸ್ಯಾಂಪಲ್ ಗಳು ಇಲ್ಲಿವೆ :
. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು.
. ನೂರು ಜನಿವಾರ ಒಟ್ಟಿಗೆ ಇರಬಹುದು; ಮೂರು ಜಡೆ ಒಟ್ಟಿಗಿರುವುದಿಲ್ಲ.
ಹೀಗೊಂದು ವ್ಯಂಗ್ಯ:
ಹಿಂದೆ ಹೆಣ್ಣಿನ ಹಿಂದೆ ಉದ್ದವಾದ ಜಡೆ ಇರುತ್ತಿತ್ತು. ಈಗ ಹೆಣ್ಣಿನ ಮುಂದೆ ಕಂಪೆನಿಯ ಐಡಿ ಇರುತ್ತದೆ.

ಜಡೆಯ ಬಗ್ಗೆ ಕೆ. ಎಸ್. ನ. ಅವರ ಒಂದು ಕವನ :
ಅಡಿಯ ಮುಟ್ಟ ನೀಳ ಜಡೆ ಮುಡಿಯ ತುಂಬ ಹೂವ ಹೆಡೆ
ಇವಳು ಅಡಿಯನಿಟ್ಟ ಕಡೆ ಹೆಜ್ಜೆಹೆಜ್ಜೆಗೆ ಒಂದು ದೊಡ್ಡ ಮಲ್ಲಿಗೆ
ಇವಳು ಯಾರು ಬಲ್ಲೆಯೇನು ಇವಳ ಹೆಸರ ಹೇಳಲೇನು
ಇವಳ ದನಿಗೆ ತಿರುಗಲೇನು ಇವಳು ಏತಕೋ ಬಂದು ನನ್ನ ಸೆಳೆದಳು

ಜಡೆ ಪುರಾಣದ ಕೊನೆಗೆ, ನಾನೇನಾದರೂ ನನ್ನ ಹುಡುಗಿಗೆ ಗುಲಾಬಿ ಹೂವು ಕೊಟ್ಟರೆ, ಅವಳಲ್ಲಿ ಜಡೆ ಹಾಕಲು ಹೇಳುವ ಪ್ಲಾನ್ ಇದೆ. ಯಾಕೆ ಅಂದರೆ, ನಾನು ಕೊಟ್ಟ ಹೂವು ಚೆಂದವೋ ಅದ ಮುಡಿದ ನನ್ನ ಮನ ಮೆಚ್ಚಿದ ಹುಡುಗಿ ಚೆಂದವೋ ನೋಡಬಹುದಲ್ವೆ?


-- Raviprasad Sharma K.

5 comments:

Vijendra ( ವಿಜೇಂದ್ರ ರಾವ್ ) said...

nangoo neelaveniyaru ishta...

Adre enri ella bittu Jade vishyakke hogidiralla..

Irli lekhana chanda untu

Unknown said...

ಚಿಕ್ಕ ವಯಸ್ಸಿನಲ್ಲಿ ಅಕ್ಕ ಜಡೆಯಳಿತಿದ್ರೋ ಅಥ್ವ ಪಕ್ಕದ ಮನೆಯವಳ ಜಡೆಯಳಿತಿದ್ದ್ರೋ ???

Giri said...

ನಿನ್ನ ಜಡೆ ಪುರಾಣ ಕೇಳಿ ನಗು ಬ೦ತು, ಎಷ್ಟು ಜಡೆ ಎಳೆದಿದಿಯ ಇಲ್ಲಿ ತನಕ

ತಲೆ-ಹರಟೆ said...

ಬಾಸ್...
ಚೆನ್ನಾಗಿದೆ ಈ ಬ್ಲಾಗ್
ಯಾವುದಾದ್ರು ಪತ್ರಿಕೆಗೆ ಕಳ್ಸಿ

ಅಂದ ಹಾಗೆ...ಮದ್ವೆ ಆಗೊ ಮುಂಚೆ ಜಡೆ ಎಳೆದು confirm ಮಾಡ್ಕೊಳಿ..original ಅಂತ...
ಇಲ್ಲಾ ಅಂದ್ರೆ first night ಅಲ್ಲಿ ಅವ್ಳು ಜಡೆ ಬಿಚ್ಚಿ ಪಕ್ಕಕ್ಕೆ ಇಟ್ಬಿಟ್ರೆ full ಕಷ್ಟ ಆಗ್ಬಿಡತ್ತೆ...ಜಡೆ ಬಿಡೋದಾ ಹೆಂಡ್ತಿ ಬಿಡೋದಾ ಅಂತ.

Enigma said...

neevu maduev ago hudgige udda jade illade idre en madtheera?