Friday, March 9, 2007

ಮಂಗನ ಮನಕ್ಕೆ ಕನ್ನ ಹಾಕಿದಾಗ….

ನನಗೆ ಮತ್ತು ಮಂಗನಿಗೆ ಒಂದು ಥರ ಅವಿನಾಭಾವ ಸಂಬಂಧ. ನನ್ನದು ಮಂಗಳೂರಿನ ಪಕ್ಕದ ಹಳ್ಳಿಯಾಗಿರುವುದರಿಂದ ಮಂಗಗಳ ಜೊತೆಯಲ್ಲೆ ಬೆಳೆದವನು ಅನ್ನಬಹುದು. ಈ ಮಂಗನ ಮನಸ್ಸೇ ನನಗೆ ಒಂದು ಲೇಖನ ಬರೆಯುವ ಸ್ಪೂರ್ತಿಯನ್ನು ನೀಡಿದೆ.

ಮಂಗ ಅಂದ ಕೂಡಲೆ ನನಗೆ ನೆನಪು ಬರುವುದು ನಾವು ಸಣ್ಣ ಮಕ್ಕಳಿದ್ದಾಗ ಆಡುತ್ತಿದ್ದ ಮರ ಕೋತಿ ಆಟ. ಆ ಆಟದಲ್ಲಿ ಮರ ಏರಿ ಟೊಂಗೆ ಟೊಂಗೆ ಹಾರಿ ಕೈಗೆ ಸಿಗದ ಹಾಗೆ ಮರದ ತುದಿಯಲ್ಲಿ ಕುಳಿತುಕೊಳ್ಳುವಾಗ ಇದ್ದ ಉತ್ಸಾಹವೆ ಬೇರೆ ಬಿಡಿ. ಈಗ ಬೆಂಗಳೂರಿನಂಥ ಕಾಂಕ್ರೀಟ್ ಕಾಡಿನಲ್ಲಿ ಕೆಳಗೆ ನಿಂತು ನೋಡಲು ಕೂಡ ಮರಗಳೇ ಸಿಗುವುದಿಲ್ಲ. ಆದರೂ ಕೆಲವು ಮಂಗಗಳು ಈ ಕಾಂಕ್ರೀಟ್ ಕಾಡಿನಲ್ಲೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ನಮಗೆ ಅವು ಕಾಣ ಸಿಕ್ಕಾಗ ನಮಗೊಂದು ಗೆಸ್ಟ್ ವಿಸಿಟ್ ಅನ್ನಿ.

ಈ ಮಂಗಗಳು ಹೆಚ್ಚಾಗಿ ಕಾಣ ಸಿಗುವುದು ಬೆಟ್ಟ ಗುಡ್ಡಗಳಲ್ಲಿರುವ ದೇವಸ್ಥಾನಗಳಲ್ಲಿ. ನಮ್ಮ ಮನೆಯಿಂದ ಒಂದು ೫ ಕಿ.ಮಿ. ಅಂತರದಲ್ಲಿ ಒಂದು ಶಿವ ದೇವಸ್ಥಾನವಿದೆ. ತುಂಬಾ ಎತ್ತರದ ಕಲ್ಲಿನ ಮೇಲೆ ಈ ದೇವಸ್ಥಾನವನ್ನು ಕಟ್ಟಿದ್ದಾರೆ. ಅಲ್ಲಿ ಈ ಮಂಗಗಳಿಗೆ ಪ್ರತಿ ಮಧ್ಯಾಹ್ನ ಸರಿಯಾಗಿ ೧೨ಕ್ಕೆ ಊಟ ಹಾಕುತ್ತಾರೆ. ಈ ಮಂಗಗಳದು ಏನು ಸಮಯ ಪಾಲನೆ ಅಂತೀರಾ? ಸರಿಯಾಗಿ ಒಂದು ಐದು ನಿಮಿಷ ಇರಬೇಕಾದ್ರೆ ಹಾಜರ್!. ಈ ದೇವಸ್ಥಾನಕ್ಕೆ ಹೋಗಿ ಬರುವವರಿಗೆ ಇವುಗಳ ಕಾಟ ತಪ್ಪಿದ್ದಲ್ಲ. ಬಾಳೆಹಣ್ಣು, ತೆಂಗಿನಕಾಯಿ ಏನಿದ್ದರೂ ಓಡಿ ಬಂದು ಭಕ್ತರ ಕಾಲು ಹಿಡಿಯುತ್ತವೆ. ನಾನು ಕೂಡ ಕಾಲು ಹಿಡಿಸಿಕೊಂಡಿದ್ದೆ ಬಿಡಿ. :-)

ಇತ್ತೀಚೆಗೆ ಒಂದು ದಿನ ಬೆಳಿಗ್ಗೆ ಪೇಪರ್ ಓದುತ್ತಾ ಕೂತಿದ್ದೆ. ವಿಜಯ ಕರ್ನಾಟಕದ ಮುಖ ಪುಟದಲ್ಲೆ ಒಂದು ಲೇಖನ ನನ್ನ ಗೆಳೆಯ ಮಂಗನ ಬಗ್ಗೆ. ಆ ಮಂಗ ಎಮ್ಮೆ ಕಾಯೋ ಕೆಲಸ ಮಾಡುತ್ತೆ ಅಂತೆ!. ಒಂದು ಎಮ್ಮೆ ಮೇಲೆ ಕುಳಿತಿರೋ ಪೋಸ್ ನಲ್ಲಿ ಫೋಟೊ ತೆಗೆದಿದ್ದರು. “ಯಾರೇ ಕೂಗಾಡಲಿ ಊರೇ ಹೋರಾಡಲಿ” ಅನ್ನೊ ಥರ. ಅಯ್ಯೋ! ನಮ್ಮ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿರಬೇಕಾದರೆ ಇಲ್ಲೂ ಒಂದು ಕೆಲಸಕ್ಕೆ ಪೈಪೋಟಿ ಬಂತಲ್ಲ ಅಂದ್ಕೊಂಡೆ. ಇನ್ನು ಮೇಲೆ ಎಮ್ಮೆ ಕಾಯೋ ಕೆಲಸಕ್ಕೆ ಲಾಯಕ್ಕು ಅಂತ ಬೈಯ್ಯೊ ಹಾಗೂ ಇಲ್ಲ. ಆ ಕೆಲಸನೇ ಖಾಲಿಯಾದ ಮೇಲೆ ಬೈಯೋದೆಲ್ಲಿ ಬಂತು? :-)

ಈ ಮಂಗ ಎಷ್ಟೊ ಸಲ ಗೆಳೆತನಕ್ಕೆ ಒಂದು ಸಾಕ್ಷಿಯಾಗಿ ಇರುವುದನ್ನು ನೋಡಬಹುದು. ಉದಾಹರಣೆಗೆ ರಾಮಾಯಣದಲ್ಲಿ ರಾಮ ಗೆದ್ದಿದ್ದೆ ವಾನರ ಸೈನ್ಯದ ಬಲದಿಂದ. ನಾವು ನಾಯಿ ಮಂಗ, ಬೆಕ್ಕು ಮಂಗ, ಎಮ್ಮೆ ಮಂಗ ಗೆಳೆತನದ ಬಗ್ಗೆ ವಿಡಿಯೊ, ಫೋಟೊ ನೋಡುತ್ತಾ ಇರುತ್ತೇವೆ. ಹೀಗೆ ನೋಡಿದಾಗ ನನಗೆ ಅನ್ನಿಸುತ್ತದೆ ಮಂಗನ ಗೆಳೆತನವಾದರೂ ಮಾಡು ಆದರೆ ಹೆಣ್ಣಿನ ಗೆಳೆತನ ಮಾಡಬೇಡ ಅಂತ.!! :-).

ಈ ಒಂದು ಪ್ರಾಣಿ ನನ್ನ ಗಮನ ಸೆಳೆದದ್ದು ಅದರ ಶಿಸ್ತಿನಿಂದ. ಮಂಗಗಳು ಅಂದಾಗ ಹಳ್ಳಿಯ ಜನ ಗಾಬರಿ ಆಗುತ್ತಾರೆ. ಇವು ಧಾಳಿಯಿಟ್ಟಾಗ ಅವರು ತುಂಬಾ ಕಾಳಜಿಯಿಂದ ಸಾಕಿದ ತೆಂಗಿನ ಮರ, ಬಾಳೆ ಗಿಡ, ಪಪ್ಪಾಯ ಗಿಡ, ಹಲಸಿನ ಹಣ್ಣು, ಮಾವಿನ ಹಣ್ಣು ಇವುಗಳಿಗೆ ಸಂಚಕಾರ ಬಂತೆಂದೇ ಅರ್ಥ. ನಮ್ಮ ಮನೆಯ ತೆಂಗಿನ ಮರಕ್ಕೂ ಅಂಥ ಒಂದು ಸಂಚಕಾರ ಬಂದಿತ್ತು. ಆದರೆ ಒಂದು ವಿಷಯ ನಂಗೆ ತುಂಬಾನೆ ಇಂಟೆರೆಸ್ಟಿಂಗ್ ಅನ್ನಿಸಿದ್ದು ಅಂದ್ರೆ, ಈ ಮಂಗಗಳು ಒಂದು ಮರವನ್ನು ಗುರುತು ಮಾಡಿಕೊಂಡು ಬಿಟ್ಟಿರುತ್ತವೆ ಮತ್ತು ಪ್ರತಿ ಸಲ ಆ ಮರದ ಎಳನೀರನ್ನು ಮಾತ್ರ ಕುಡಿಯುತ್ತವೆ. ಬಹುಶ: ನಮ್ಮ ಊರಿನ ಮಂಗಗಳಿಗೆ ಎಟಿಕ್ವೆಟೆ ಟ್ರೈನಿಂಗ್ ಆಗಿದೆಯೇನೋ!
ಹಾಗೆ ಶಿಸ್ತಿನ ಬಗ್ಗೆ ಹೇಳಿದಾಗ ನನಗೆ ಇನ್ನೊಂದು ಘಟನೆ ನೆನಪಿಗೆ ಬರುತ್ತಾ ಇದೆ. ನಮ್ಮ ಕಂಪೆನಿಯ ಕ್ಯಾಂಟೀನು ಇರುವುದು ಆರನೆ ಅಂತಸ್ತಿನಲ್ಲಿ. ಅಲ್ಲಿ ಹೀಗೆ ಹರಟುತ್ತಿರುವಾಗ ಬಂದನಲ್ಲ ನನ್ನ ಗೆಳೆಯ. ಮೆತ್ತಗೆ ಹೆಜ್ಜೆ ಹಾಕಿಕೊಂಡು ಕ್ಲೈಂಟ್ ಗಳಿಗೆ ಅಂತ ಇಟ್ಟಿರುವ ಮೇಜಿನ ಮೇಲೆ ಕುಳಿತೇ ಬಿಟ್ಟ. ಅವನ ಆಕಾರ ತುಂಬಾ ದೊಡ್ಡದಿತ್ತು ಅದಕ್ಕೆ ಎಲ್ಲರಿಗು ಒಂಥರಾ ಹೆದರಿಕೆ. ಆಗ ನನಗೆ ಇವನು ಯಾಕೆ ಅಲ್ಲಿ ಕೂತಿರಬಹುದು ಅನ್ನೋ ಯೋಚನೆ ಬೇರೆ. ಹಾಗೆ ನೋಡಿದಾಗ ಮೆತ್ತಗೆ ಬಟ್ಟೆ ಸರಿಸಿ ಒಂದು ಸೇಬು ಎತ್ಕೊಂಡೇ ಬಿಟ್ಟ. ನಾನು ಇನ್ನೇನು ಓಡಿ ಹೋಗ್ತಾನೆ ಅಂದ್ಕೊಂಡೆ. ಇಲ್ಲ, ಅಲ್ಲೆ ಕೂತ್ಕೊಂಡು ಶುರು ತಿನ್ನೋದಕ್ಕೆ. ಹೇಗೆ ಒಂದೇ ಹಣ್ಣನ್ನು ತೆಗೊಂಡ ಅಂದ್ರೆ ಕ್ಲೈಂಟ್ ಕೂಡ ಅದನ್ನು ನೋಡಿ ಕಲಿಯಬೇಕು ಬಿಡಿ. ಅದನ್ನು ಯಾರೊ ಒಬ್ಬ ನೋಡಿ ಓಡಿ ಹೋಗಿ ಕ್ಲಿಕ್ಕಿಸಿ ಬಂದಾಯ್ತು. ಹೀಗೆ ಒಂದು ಸ್ಪೆಷಲ್ ಕ್ಲೈಂಟ್ ನಮ್ಮ ಕಂಪೆನಿಗೆ.

ಇತ್ತೀಚೆಗೆ ಈ ಕಾಂಕ್ರೀಟ್ ಕಾಡಿನಲ್ಲಿ ಮಂಗಗಳಿಗೆ ಬದುಕುವುದು ಕೂಡ ಕಷ್ಟ ಆಗ್ತಾ ಇದೆ. ಹಿಂದಿನ ಕಂಪೆನಿಯಲ್ಲಿ ಇದ್ದಾಗ, ಮಂಗ ದಿನಾ ಕಂಪೆನಿಯ ನಲ್ಲಿಯಲ್ಲಿ ನೀರು ಕುಡಿಯಲು ಬರುತ್ತಿತ್ತು. ಅಲ್ಲು ವೆರೈಟಿ ಅನ್ನಿ, ಕೆಂಪು ಮಂಗ, ಕಪ್ಪು ಮಂಗ, ಬಾಲ ಇಲ್ಲದ ಮಂಗ ( ಅಂದರೆ ತುಂಡಾಗಿದೆ :-)) ಹೀಗೆ.

ಈ ಮಂಗನ ಕೆಲಸವಾದರೂ ಎಷ್ಟು ಅಲ್ಲವೆ. ಎಲ್ಲ ಕೆಲಸಗಳೂ ನಮ್ಮ ನಿಮ್ಮಂತೆ. ತಲೆ ಕೆರೆಯುವುದು, ಮೇಕಪ್ ಮಾಡುವುದು, ಹಾರುವುದು, ಕಾಟ ಕೊಡುವುದು ಹೀಗೆ. ನಮ್ಮದಂತೂ ವಿಪರೀತ ಮಂಗ ಬುದ್ಧಿ; ಮಂಗನಿಗೆ, ನಾಯಿಗಳಿಗೆ ಕಲ್ಲು ಹೊಡೆಯಲು ಯಾವಾಗ ಕರೆದರು ರೆಡಿ. ಇಂಥ ಕಥೆಗಳನ್ನು ಓದುವಾಗಲಾದರೂ ಮಂಗನಿಂದ ಮಾನವ ಅನ್ನೊ ಮಾತು ನಿಮ್ಮ ನೆನಪಿಗೆ ಬರ ಬಹುದು. ಅದರಿಂದಲಾದರು ಅವನಿಗೆ ನ್ಯಾಯ ಸಲ್ಲಬಹುದು ಅಲ್ಲವೆ? :-)

-- ರವಿಪ್ರಸಾದ್ ಶರ್ಮಾ ಕೆ.

2 comments:

ತಲೆ-ಹರಟೆ said...

ಬಾಸ್..ಚೆನ್ನಾಗಿದೆ..full R&D ಮಾಡಿದ್ದೀರ ಮಂಗಗಳ ಬಗ್ಗೆ ಅನ್ಸತ್ತೆ :)

ನಾಯಿ ಹಿಡಿತಾ ಇದ್ದಾರಲ್ಲ ಇವಾಗ ಮಕ್ಕಳಿಗೆ ಕಚ್ತು ಅಂತ..
ಮಂಗ ಯಾರಿಗಾದ್ರು ಕಚ್ಚಿದ್ರೆ ಆಗ ಅವುಗಳನ್ನ ಮರ, ಬಿಲ್ಡಿಂಗ್ ಮೇಲೆ ಎಲ್ಲಾ ಹತ್ತಿ ಹಿಡಿಬೇಕಾಗೊ ರೀತಿ ನೆನಪಾಗಿ ಸಖತ್ ನಗು ಬಂತು.

Unknown said...

ಹ್ಹ ಹ್ಹ ಹ್ಹ.. ನೀವು ಸರಿ ಇದ್ದೀರ.

ಆವಾಗ ಮಾಂತ್ರಿಕರಿಗೆ ಫುಲ್ ಡಿಮಾಂಡು :-).
ಏನಂತೀರಾ?