Sunday, July 4, 2010

ಬಿ.ಎಂ.ಟಿ.ಸಿ. ಕಥೆಗಳು - ಭಾಗ 2

ಎಷ್ಟೊಂದು ರೂಪಗಳು

ಕಣ್ ಎದುರಿನಲ್ಲಿ

ಎಷ್ಟೊಂದು ಭಾವಗಳು

ಮನದ ಆಳದಲ್ಲಿ !!


ಜೀವನದಲ್ಲಿ ಎಷ್ಟೊಂದು ಸಲ ಹಾಗಾಗುತ್ತದಲ್ಲವೇ. ಕುಳಿತಲ್ಲಿಯೇ ಮನ:ಪಟಲದಲ್ಲಿ ಹಲವು ಭಾವನೆಗಳು ಹಾದು ಹೋಗುತ್ತಿರುತ್ತವೆ. ಯೋಚನೆಗಳು ನಡೆದಾಗ ಕೆಲವು ಸಲ ಸಮಯವೇ ನಿಂತು ಹೋದಂತೆ ಭಾವವಾಗುತ್ತದೆ. ಆದರೆ ನಮಗೋಸ್ಕರ ಸಮಯ ನಿಲ್ಲಬೇಕಲ್ಲವೇ. ಸಮಯವೂ ನಿಲ್ಲದು.. ಹಾಗೆಯೇ ಬಿ.ಎಂ.ಟಿ.ಸಿ ಬಸ್ ಕೂಡ !!


ನನ್ನ ಆಫೀಸಿನಲ್ಲಿ ಒಬ್ಬನಿಗೆ ಆಗಷ್ಟೇ ಹುಡುಗಿ ಗೊತ್ತಾಗಿತ್ತು. ಮರುದಿನವೇ ನಿಶ್ಚಿತಾರ್ಥ. ಹುಡುಗಿ ಬನಶಂಕರಿ ಕತ್ರಿಗುಪ್ಪೆ ಬಿಗ್ ಬಜಾರ್ ಹತ್ತಿರ ಬರ ಹೇಳಿದ್ದಳು. ಆದರೇನು ಮಾಡುವುದು ಹೇಳಿ, ಹುಡುಗನಿಗೇನೋ ಹುಡುಗಿಯದೇ ಗುಂಗು. ಕೆಂಗೇರಿಯಿಂದ 500 ನಂಬರ್ ನ ಬಸ್ ಹತ್ತಿದ ಪುಣ್ಯಾತ್ಮ. ಹುಡುಗಿಯ ಕನಸಿನಲ್ಲಿ ಕುಳಿತಲ್ಲೇ ಮೈ ಮರೆತ. ಕನಸಿನಿಂದ ಹೊರ ಬಂದಾಗ ನೋಡುತ್ತಾನೆ, ಜೆ.ಪಿ. ನಗರ ಮುಟ್ಟಿದ್ದಾನೆ. ಆಮೇಲೆ ತಿಳಿಯಿತು ಅಣ್ಣಾವ್ರಿಗೆ, ತಾನು ಸುಮಾರು ದೂರ ಮುಂದೆ ಬಂದು ಬಿಟ್ಟಿದ್ದೇನೆಂದು. ಮೊದಲೇ ಆಫೀಸಿನಿಂದ ತಡವಾಗಿ ಬಿಟ್ಟಿದ್ದ. ಮೈ ಮರೆತಾಗ ಬಸ್ ಮುಂದೆ ಹೋದುದರ ಕಾರಣವಾಗಿ ಮತ್ತೆ ಪುನಃ ಒಂದು ಗಂಟೆ ತಡವಾಗಿ ತಲುಪಿದ. ಅವನಿಗಾಗಿ ಕಾದ ಹುಡುಗಿಯ ಕಥೆ ಏನಾಗಿರಬೇಕು? ನೀವೆ ಹೇಳಿ.

ಇನ್ನೊಂದು ಕಥೆ ಇದೆ ನೋಡಿ...


ಅದೊಂದು ದಿನ ಮೆಜೆಸ್ಟಿಕ್ ನಿಂದ ಕೆಂಗೇರಿ ಕಡೆಗೆ ಹೊರಟಿದ್ದೆ. ನಮ್ಮ ಬಸ್ ನಲ್ಲಿದ್ದ ಒಬ್ಬನಿಗೆ ನಾಯಂಡ ಹಳ್ಳಿಯಲ್ಲಿ ಇಳಿಯಬೇಕಾಗಿತ್ತು. ಕಷ್ಟ ಪಟ್ಟುಕೊಂಡು ಬಂದು ಮೊದಲನೆ ಸೀಟಿನಲ್ಲಿ ಕುಳಿತು ಪ್ರತಿ ನಿಲ್ದಾಣ ಬಂದಾಗಲೂ ಹೊರಗೆ ನೋಡುತ್ತಿದ್ದ. ಆದರೆ ಯಾರಲ್ಲೂ ತಾನು ಇಳಿಯುವ ಜಾಗದ ಬಗ್ಗೆ ಕೇಳಿರಲಿಲ್ಲ. ನೋಡು ನೋಡುತ್ತಿದ್ದಂತೇ ರಾಜ ರಾಜೇಶ್ವರಿ ನಗರ ಬಂದೆ ಬಿಟ್ಟಿತು.


ಪ್ರಯಾಣಿಕ: ಸಾರ್, ನಾಯಂಡ ಹಳ್ಳಿಯಲ್ಲಿ ಇಳೀಬೇಕಿತ್ತು.


ಡ್ರೈವರ್: ನಾಯಂಡ ಹಳ್ಳಿ ಹೋಯ್ತಲ್ಲಪ್ಪಾ !! ಎನ್ ಮಾಡ್ತಾ ಇದ್ದೆ?


ಪ್ರಯಾಣಿಕ: ಗೊತ್ತಗ್ಲಿಲ್ಲಣ್ಣ !!


ಈ ಮಾತು ಅಲ್ಲಿದ್ದ ಕಂಡಕ್ಟರ್ ಗೆ ಕೇಳಿಸಿಯೇ ಬಿಟ್ಟಿತು. ಇದ್ದಲ್ಲಿಂದಲೇ ಹೇಳಿದ:


"ಎನ್ ಗುರು? ಡ್ರೈವರ್ ಗುಂಡ ಗೆ ಇದ್ದಾನೆ ಅಂತ ನೋಡ್ತಾ ಕೂತ್ಕೊ ಬಿಟ್ಯಾ? ಅವ್ನು ಅವ್ನಾ ಕೆಲ್ಸಾ ಮಾಡ್ತಾನೆ ನೀನ್ ಇಳಿ"