
ಕೆಲವು ಸಲ ನಮಗೆ ನಮಗೆ ಅಕ್ಕಪಕ್ಕದವರ ಆಕ್ಸಿಡೆಂಟ್ ಕಥೆ ಕೇಳಿದಾಗ ನಗು ಬರುವುದು ಉಂಟು; ಬೇಸರವಾಗುವುದು ಉಂಟು. ಹೀಗಾಗಿ ಸರ್ವ ಜನ ಹಿತಕ್ಕಾಗಿ ಕೆಲವು ಅಪಘಾತಗಳ ಬಗ್ಗೆ ಹೇಳೋಣ ಅನಿಸಿದೆ ನನಗೆ. ಇತ್ತೀಚೆಗೆ ನನ್ನ ಕೊಲೀಗ್ ಇದ್ದವಳು ಹೇಳುತ್ತ ಇದ್ದ ಮಾತು ನೆನಪಿಗೆ ಬರುತ್ತಿದೆ. ಹೈವೇಯಲ್ಲಿ ಆರಾಮದಲ್ಲಿ ಎಂಬತ್ತರ ಮೇಲಿನ ವೇಗದಲ್ಲಿ ಹೋಗಬಹುದು ಎನ್ನುವುದು ಅವಳ ವಾದ. ಆಗ ನನಗೆ ಗೊತ್ತಿರುವವರಿಗೇ ನಡೆದ ಒಂದು ಘಟನೆಯ ಬಗ್ಗೆ ಹೇಳಬೇಕೆನಿಸಿತು. ನನಗೆ ಗೊತ್ತಿರುವವರೊಬ್ಬರು, ಕುಣಿಗಲ್ ಹತ್ತಿರ ಬೈಕ್ ನಲ್ಲಿ ಎಂಬತ್ತರ ಮೇಲಿನ ವೇಗದಲ್ಲಿ ಹೋಗುವಾಗ ದನ ಅಡ್ಡ ಬಂದು ಕಾಲಿಗೆ ಸ್ಟೀಲ್ ರಾಡ್ ಹಾಕಿಸಿಕೊಂಡು ಮೂರು ತಿಂಗಳು ಮನೆಯಲ್ಲೇ ಮಲಗಿದ್ದರು. ಹಾಗಾಗಿ ಹೈವೇಯಲ್ಲಿ ಹೋಗುವಾಗ ದನ ಮತ್ತು ಅಡ್ಡ ದಾರಿಗಳ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.
ಬೆಂಗಳೂರಿನಲ್ಲಿ ಸಣ್ಣ ಗಲ್ಲಿಗಳಿಗೇನು ಕಡಿಮೆ ಇಲ್ಲ ಬಿಡಿ. ಬೆಂಗಳೂರಿನಲ್ಲಿ ವೇಗಕ್ಕಿಂತ ಹೆಚ್ಕ್ಚಾಗಿ ಯಾವುದಾದರೂ ವಾಹನ ಬರಬಹುದೋ ಏನೋ ಎನ್ನುವ ನಿರೀಕ್ಷೆ ಬಹಳ ಮುಖ್ಯ. ಹಲವು ಸಲ ನನ್ನ ಗೆಳೆಯರು ಕಡಿಮೆ ವೇಗದಲ್ಲಿಯೇ ಹೋಗಿ ಬಿದ್ದು ಎದ್ದದ್ದಿದ್ದೆ :). ಜೀವನದಲ್ಲಿ ಬಿದ್ದವನಿಗಿಂತ ಬೈಕಿನಿಂದ ಬೀಳುವುದು ಒಳಿತು ಎನ್ನುವ ವೇದಾಂತ ಬಿಟ್ಟಿದ್ದು ಇದೆ. ಬೆಂಗಳೂರಿನಲ್ಲಿ ರಾತ್ರಿ ಸವಾರರದು ಅಪಘಾತ ಕೇಳಲು ಮಜ ಇರುತ್ತದೆ. ಮಾರ್ಗ ಬಹಳ ಅಗಲವಿದೆ ಎನ್ನುವ ಖುಶಿಯಲ್ಲಿ ಗಾಡಿ ಓಡಿಸುವಾಗ ಲಗಾಮಿಲ್ಲದೆ ದಡಾರ್ ಅಂತ ಬಿದ್ದು ಸ್ಟೀಲ್ ರಾಡ್ ಹಾಕಿಸಿಕೊಂಡವರಿಗೇನು ಕಡಿಮೆ ಇಲ್ಲ. ಲಗಾಮಿಲ್ಲದ ಕುದುರೆ ಯಾವಾಗಲು ಡೆಂಜರ್!!. ಅಪಘಾತವಾಗಲು ಕೇವಲ ನಾವು ಕಾರಣೀಭೂತರಾಗಬೇಕಿಲ್ಲ. ನಮ್ಮ ಎದುರಲ್ಲಿ ಬರುವವನಿಂದಲೂ ಆಗಬಹುದು. ಹಾಗಾಗಿ ಗಾಡಿಯ ಲಗಾಮು ಹಿಡಿದವನು ಎಚ್ಚರದಿಂದಿರುವುದು ಅಗತ್ಯ.
ಬಹುಶಃ ನಾವು ಕಲಿಯುವಾಗಲೇ ಇಂತಹ ವಿಷಯಗಳ ಬಗ್ಗೆ ಜಾಗ್ರತೆ ವಹಿಸಿದರೆ ಒಳಿತು ಎನ್ನುವುದು ನನ್ನ ಭಾವನೆ. ನನ್ನ ಪತ್ನಿಗೆ ವಾಹನ ಬಿಡಲು ಕಲಿಸುವಾಗ ನಾನು "ಡಿವೈಡರ್" ಅಂತ ಜೋರಾಗಿ ಕಿರುಚುತ್ತಿದ್ದೆ. ಈಗಲೂ ಅವಳಿಗೆ ಡಿವೈಡರ್ ಹತ್ತಿರ ಹೋಗುವಾಗ ನನ್ನ ಮಾತು ನೆನಪು ಬರುತ್ತಿರುತ್ತದೆ ಎನ್ನುತ್ತಿರುತ್ತಾಳೆ :). ಹಾಗಾದರೂ ನೆನಪಿದೆಯಲ್ಲ! ಎನ್ನುವುದೇ ನನಗಿರುವ ನೆಮ್ಮದಿ.
ನಾನು ಅಪಘಾತಗಳ ಬಗ್ಗೆ ಬರೆದೆನೆಂದು ಕೆಲವರ ಮನ ನೊಂದಿರಬಹುದು. ಓದುವವರಿಗೆ ಎಚ್ಚರ ಮೂಡಿಸುವುದಷ್ಟೇ ನನ್ನ ಈ ಲೇಖನದ ಗುರಿ. ಓದುಗರಿಗೆ ವಾಹನ ತೆಗೆದುಕೊಳ್ಳದಂತೆ ಮಾಡಿ ಬೆಂಗಳೂರಿನ ಟ್ರಾಫಿಕ್ ಕಡಿಮೆ ಮಾಡುವ ಉದ್ದೇಶ ಕಂಡಿತಾ ನನ್ನಲ್ಲಿಲ್ಲ. ಹಾಗೆ ಹೇಳುವುದಾದರೆ, ನಾವು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುವಾಗಲೂ ಅಪಘಾತವಾಗಬಹುದು.
ಆದರೆ ಅದೇ ನಮಗೆ ರಸ್ತೆಗೇ ಇಳಿಯದಂತೆ ಮಾಡಬಾರದಲ್ಲವೇ?
ಹೀಗೆ ಹಗುರವಾಗಿ ಹೇಳುವುದಾದರೆ ಮತ್ತೊಂದು ಮಾತು ನೆನಪಿಗೆ ಬರುತ್ತಿದೆ. ನನ್ನ ಕೊಲೀಗ್ ಇದ್ದವಳು ಹೇಳುತ್ತಿದ್ದಳು: ಸಪೂರವಾಗಿ ಇರುವವರಿಗೆ ಅಪಘಾತವಾದಾಗ ಅವರಿಗೆ ಜಾಸ್ತಿ ನೋವಾಗುವುದಂತೆ. ಅದಕ್ಕೆ ನಾನು ಹೇಳಿದೆ, ಹಾಗಾದರೆ ದಪ್ಪ ಇರುವುವರಿಗೆ ಅಪಘಾತವಾದರೆ ರಸ್ತೆಗೆ ನೋವಾಗುತ್ತಾ? ಅಂತ. !!!