Thursday, April 26, 2007

ಮಲ್ಲೇಶ್ವರದ ಮೈದಾನದ ಮೆಟ್ಟಿಲಲ್ಲಿ ಕುಳಿತು …

ನನ್ನ ಪಾಲಿಗೆ ಮಲ್ಲೇಶ್ವರದ ಮೈದಾನ ಒಂದು ರೀತಿಯಲ್ಲಿ ಸಮಯವನ್ನು ಕೊಲ್ಲುವ ಸ್ಥಳ. ಮೈದಾನದಲ್ಲಿ ಕ್ರಿಕೆಟ್, ಬಾಸ್ಕೆಟ್ ಬಾಲ್ ಆಡುವವರನ್ನು ನೋಡಿಕೊಂಡು ನನ್ನದೇ ಚಿಂತನೆಯಲ್ಲಿ ಮುಳುಗಿರುತ್ತೇನೆ. ಅದಲ್ಲದೆ ನಾನು ನನ್ನ ಗೆಳೆಯರನ್ನು ಭೇಟಿಯಾಗುವ ಸ್ಥಳ ಕೂಡ ಮಲ್ಲೇಶ್ವರಂ ಮೈದಾನ. ಮೈದಾನದ ಅಕ್ಕಪಕ್ಕ ಕಲ್ಲಂಗಡಿ ಹಣ್ಣಿನ ಅಂಗಡಿ, ಪಾನಿ ಪುರಿ ಇವೆ. ಇತ್ತೀಚೆಗೆ ಮೈದಾನದಲ್ಲಿ ದೊಡ್ಡ ದೊಡ್ಡ ವಿದ್ಯುದ್ದೀಪಗಳನ್ನು ಅಳವಡಿಸಿರುವುದರಿಂದ ರಾತ್ರಿ 8 ಗಂಟೆಯವರೆಗೂ ಜನ ಇರುತ್ತಾರೆ. ಹಲವಾರು ಪ್ರಮುಖ ಕಾರ್ಯಕ್ರಮಗಳು ಸಹ ಈ ಮೈದಾನದಲ್ಲಿ ಜರುಗುತ್ತವೆ.

ಒಂದು ದಿನ ನಾನು ನನ್ನ ಗೆಳೆಯರ ಜೊತೆ ಇದೇ ಮೈದಾನದ ಮೆಟ್ಟಿಲಿನಲ್ಲಿ ಕುಳಿತು ಹಾಳು ಹರಟೆಯಲ್ಲಿ ತೊಡಗಿದ್ದೆ. ಆಗ ಅಲ್ಲೊಂದು ನನ್ನ ಯೋಚನೆಗೆ ಮೀರಿದ ಘಟನೆಯೊಂದು ನಡೆಯಿತು. ಒಬ್ಬಳು ಹುಡುಗಿ ವಯಸ್ಸು 25 ರ ಆಸು- ಪಾಸು ಇರಬಹುದು, ತಕ್ಷಣ ನನ್ನ ಪಕ್ಕ ಬಂದು ಕೈ ಕೊಡಿ ಅಂದಳು. ಅವಳು ಕೇಳುವ ತನಕ ನಾನು ಆ ಹುಡುಗಿಯ ಕಡೆ ಗಮನವನ್ನೇ ಹರಿಸಿರಲಿಲ್ಲ. ಅವಳ ಆ ಮಾತು ಕೇಳಿ ನನಗೆ ಆಶ್ಚರ್ಯ. ಇವಳಿಗೇನಾಗಿದೆ? ನನ್ನ ಕೈ ಕೇಳುತ್ತಾ ಇದ್ದಾಳಲ್ಲ ಅಂತ ನಾನು ನಂಬದಿರುವಂತೆ ಮೆತ್ತಗೆ ನನ್ನ ಕೈಯನ್ನು ಅಗಲಿಸಿ ಅವಳತ್ತ ಚಾಚಬೇಕು ಎನ್ನುವಷ್ಟ್ರರಲ್ಲಿ ಅವಳೇ ಅವಳ ಕೈಯನ್ನು ನನ್ನ ಕೈಗೆ ತಾಗಿಸಿದಳು. ಅದನ್ನು ನೋಡಿದ ನಾನು ಸ್ಥಂಭೀಭೂತನಾಗಿ ಹೋದೆ.

ಆ ಹುಡುಗಿಗೆ ತನ್ನ ಕೈ ಬೆರಳುಗಳ ಮೇಲೆ ಕಂಟ್ರೋಲ್ ಅನ್ನೋದೆ ಇರಲಿಲ್ಲ. ನಡೆಯಲು ಸರಿಯಾಗಿ ಆಗುತ್ತಿರಲಿಲ್ಲ. ಅವಳಿಗೆ ಅಲ್ಲಿರುವ ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಿತ್ತು. ಅದಕ್ಕಾಗಿ ನನ್ನ ಸಹಾಯವನ್ನು ಕೇಳಿದ್ದಳು. ನಾನು ಕೂಡಲೆ ನನ್ನ ಯೋಚನಾ ಸರಣಿಯನ್ನು ಕೊನೆಗೊಳಿಸಿ ಎದ್ದು ನಿಂತು ಕೈ ಹಿಡಿದು ಒಂದೊಂದೆ ಮೆಟ್ಟಿಲು ಮೇಲೆ ದಾಟಿಸಿದೆ. ಕೊನೆಯ ಮೆಟ್ಟಿಲನ್ನು ಅವಳು ನನ್ನ ಸಹಾಯವಿಲ್ಲದೆಯೆ ಹತ್ತಿದಳು. ಆಗ ಅವಳ ಛಲ ನನಗೆ ಇಷ್ಟವಾಯಿತು. ಎಲ್ಲಾ ಮೆಟ್ಟಿಲು ದಾಟಿಸಿ ಅವಳು ಹೊರಟು ಹೋದ ತಕ್ಷಣ ಮನಸ್ಸಿನಲ್ಲಿ ಏನೋ ನೋವು. ಅವಳ ಸಂಕಟ ಏನಿರಬಹುದು? ಎಂದು ತಿಳಿದುಕೊಳ್ಳುವ ತುಡಿತ. ಅವಳ ಹೆಸರನ್ನಾದರೂ ಕೇಳಬೇಕಿತ್ತು ನಾನು ಎನ್ನುವ ಅವ್ಯಕ್ತ ಬೇಸರ. ಅವಳಿಗೆ ಬೇರೆ ಏನಾದರೂ ಸಹಾಯ ಮಾಡುವ ಅವಕಾಶ ಇದ್ದಿದ್ದರೆ? ಅನ್ನುವ ಆಸೆ. ಕೊನೆಗೆ ಮೆಟ್ಟಿಲಾದರೂ ಹತ್ತಿಸಿ ಅವಳಿಗೆ ಆಸರೆಯಾದೆನಲ್ಲಾ ಎನ್ನುವ ಸಮಾಧಾನ.

ಮೆಟ್ಟಿಲಿಳಿದು ಬಂದು ಗೆಳೆಯರಿರುವಲ್ಲಿ ಬಂದು ಕುಳಿತು ಕೇಳಿದೆ. “ಅವಳಿಗೇನಾಗಿರಬಹುದು?” ಅಂತ. ಒಬ್ಬ ಗೆಳೆಯನಿಂದ ಉತ್ತರ ಬಂತು. “ ಅವಳು ಹೋಗಿ ಆಯ್ತು. ಈಗ ಯಾಕೆ ಚಿಂತೆ ಮಾಡ್ತಾ ಇದ್ದೀಯಾ? “ ಅಂತ. ಅವಳು ಹೋಗಿರಬಹುದು ಆದರೆ ಅವಳು ಬಿಟ್ಟು ಹೋದ ಆ ಕ್ಷಣದ ನೆನಪು ನನ್ನನ್ನು ಇಂದಿಗೂ ಕಾಡುತ್ತಲೇ ಇದೆ. ಇನ್ನೊಮ್ಮೆ ಸಿಕ್ಕಿದರೆ ಕೇಳುತ್ತೇನೇನೊ?


ಮಜಾ ಮಾಡಿ.
- ರವಿಪ್ರಸಾದ್ ಶರ್ಮಾ ಕೆ.

No comments: