Monday, May 14, 2007

ಯಾರಿಗೆ ಬೇಕು ಈ ಲೋಕ? ಪ್ರೀತಿಯೆ ಹೋದರೂ ಇರಬೇಕಾ?

ಇವತ್ತು ಬೆಳಗ್ಗೆ ಎಂದಿನಂತೆ ನನ್ನ ಹಾಸ್ಟೆಲಿನ ಸ್ನಾನದ ಕೋಣೆಗೆ ಹೋಗುತ್ತಿದ್ದಾಗ, ಒಂದು ಕಾಗದ ಸುಟ್ಟು ಬೂದಿಯಾಗಿರುವುದನ್ನು ನೋಡಿದೆ. ಕೂಡಲೆ ನನ್ನ ಡಿಟೆಕ್ಟಿವ್ ಮನಸ್ಸು ಯೋಚನೆಗೆ ಶುರುವಿಟ್ಟುಕೊಂಡಿತು. ಈ ಕೆಲಸ ಯಾರು ಮಾಡಿರಬಹುದು? ಸುಟ್ಟು ಹಾಕಿರಬೇಕಾದರೆ ಏನಾದರೂ ತುಂಬಾ ಅಮೂಲ್ಯವಾದ ಕಾಗದ ಪತ್ರವೇ ಇರಬೇಕು. ಮಾರ್ಕ್ಸ್ ಕಾರ್ಡ್ ಗೆ ಏನಾದರೂ ಈ ಗತಿ ಬಂತೆ ಎಂದು ಬಗ್ಗಿ ನೋಡಿದೆ. ಹಾಗೆ ನೋಡಿದಾಗ ಸುಟ್ಟು ಹೋಗಿದ್ದ ಬೂದಿಯ ಮೇಲೆ ಏನೋ ಒಂದು ಅಂದವಾದ ಡಿಸೈನ್ ಕಾಣಿಸಿತು. ಅದನ್ನು ನೋಡಿ ಮನಸ್ಸಿಗೆ ಸಮಾಧಾನ. ಅಬ್ಬ ! ಮಾರ್ಕ್ಸ್ ಕಾರ್ಡ್ ಅಲ್ಲ ಅಂತ. ಹಾಗೆ ಸ್ವಲ್ಪ ಕಾಗದದ ಚೂರು ಇರಬೇಕಲ್ಲ ಎಂದು ಸರಿಯಾಗಿ ನೋಡಿದೆ. ಒಂದು ಸಣ್ಣ ಚೀಟಿ ಸಿಕ್ಕಿತಲ್ಲ. ಏನೆಂದು ನೋಡಿದರೆ ಅದು ಮದುವೆ ಕಾಗದ.

ಪಾಪ !! ಯಾವುದೊ ಹುಡುಗನಿಗೆ ಅವನ ಹುಡುಗಿ ಕೈ ಕೊಟ್ಟಿರಬೇಕು ಅಥವಾ ಈತನೇ ಹೃದಯದಲ್ಲಿ ಇಟ್ಟುಕೊಂಡಿದ್ದನಾ? ಯಾರಿಗೆ ಗೊತ್ತು? ಅಂತೂ ಹುಡುಗನಿಗೆ ಲವ್ ಪ್ರಾಬ್ಲಮ್. ಒಂದು ಥರಾ “ಮುಂಗಾರು ಮಳೆ” ಕೇಸು. “ಹುಚ್ಚು ಪ್ರೀತಿಯನ್ನು ಮೆಚ್ಚಿಕೊಂಡನಲ್ಲ; ಕೈ ಕೊಟ್ಟ ಮೇಲೆ ಗೊತ್ತಾಯಿತಲ್ಲ J” ಅಂತ. ಏನೇ ಇರಲಿ, ನನಗೆ ಅವನ ಪೆದ್ದುತನಕ್ಕೆ ಒಂದು ಸಲ ಝಾಡಿಸಿ ಒದ್ದು ಬಿಡೋಣ ಅನ್ನಿಸಿತು. ಯಾಕೆಂದರೆ, ಕಾಗದವನ್ನು ಸುಟ್ಟು ಹಾಕಿದ ತಕ್ಷಣ ಅವನ ನೆನಪುಗಳು ಸುಟ್ಟು ಹೋಗಲು ಸಾಧ್ಯವೇ? ಹುಡುಗಿಯನ್ನು ಆ ಕ್ಷಣದಿಂದ ನೆನೆಯದಿರಲು ಸಾಧ್ಯವೇ? ಸಾಧ್ಯವಿದ್ದರೆ ಅದನ್ನು ಮಾಡಲಿ. ಅದು ಬಿಟ್ಟು ಯಾವುದೋ ಅವಳ ಮದುವೆ ಕಾಗದವನ್ನು ಸುಡುವುದು ಅಕ್ಷಮ್ಯ ಅಪರಾಧ. ಅದು ಕೂಡ ನನಗೆ ಅರ್ಧ ಹೆಸರು ಕಾಣಿಸುವ ಹಾಗೆ ಸುಟ್ಟಿದ್ದಾನೆ !. ಬಿಡಬೇಕೆ ಅವನನ್ನು? ಅದಲ್ಲದೆ ಅವನಿಗಿರುವ ಕೋಣೆಯಲ್ಲಿ ಸುಡುವುದನ್ನು ಬಿಟ್ಟು ಸ್ನಾನದ ಕೋಣೆಯ ಪಕ್ಕ ಸುಡುವುದರ ಮರ್ಮ ನನಗೆ ತಿಳಿಯದು. ಬಹುಶಃ ಅವನು ಸ್ನಾನ ಮಾಡುತ್ತಿರಬೇಕಾದರೆ ಆ ಹುಡುಗಿಯ ಮೊದಲ ಫೋನ್ ಕಾಲ್ ಬಂದಿತ್ತೇನೋ? J

ಈಗ ನಾನು ಈ ಹೃದಯವಂಚಿತ ಯಾರಿರಬಹುದು ಎಂಬ ಅರ್ಥವಿಲ್ಲದ ಯೋಚನೆಯಲ್ಲಿ ತೊಡಗಿದ್ದೇನೆ J. ಯಾಕೆಂದರೆ ನಾವಿರೋದೆ ಹಾಗೆ !!

1 comment:

Giri said...

Sharma...
Prasad sharma...
Ravi Prasad Sharma... (007)
:)

inmele ninna introduction hinge kodu ;)