Wednesday, July 11, 2007

ಬಾಳ ಪಯಣದ ಸಿಂಹಾವಲೋಕನ…

“Being unwanted, unloved, uncared for, forgotten by everybody, I think that is a much greater hunger, a much greater poverty than the person who has nothing to eat.” -- Mother Teresa.

ನಾನು ಏಕಾಂಗಿಯಾಗಿ ಬೆಂಗಳೂರಿಗೆ ಬಂದಿಳಿದಾಗ ನನ್ನ ಕೆಲವು ಬೆರಳೆಣಿಕೆಯ ಗೆಳೆಯರು ಬಿಟ್ಟರೆ ಬೇರೆ ಯಾರೂ ನನಗೆ ಗೊತ್ತಿರಲಿಲ್ಲ. ಯಾರ ಸಹಾಯವೂ ಇಲ್ಲದೆ ಬೆಂಗಳೂರಿಗೆ ಬಂದು ಒಂದು ರೂಮ್ ಮಾಡಿಕೊಂಡಿದ್ದೆ. ಗೆಳೆಯರೆಲ್ಲ ವೀಕೆಂಡ್ ನಲ್ಲಿ ೨ ಗಂಟೆ ಸಿಗುತ್ತಾರೆ, ಹೋಗುತ್ತಾರೆ. ಆದರೆ ಆಗ ನನಗೆ ಒಂಥರ ವಿಚಿತ್ರ ಯೋಚನೆಗಳು. ಒಂದು ರೀತಿ ನೋಡಿದರೆ ನನಗೆ ಎಲ್ಲರೂ ಇದ್ದಾರೆ; ಇನ್ನೊಂದಡೆ ನೋಡಿದರೆ ನನಗೆ ಬೇಕಾದವರು ಯಾರೂ ಇಲ್ಲ. ಹಾಸ್ಟೆಲಿನ ಗೆಳೆಯರ ಸಾಲನ್ನೆ ಮರೆತು, ಒಂದು ರೀತಿಯಲ್ಲಿ ಒಂಟಿ ಜೀವಿಯಾಗಿ ಬದುಕಬೇಕಾದ ಕಾಲ ಬಂದಿತ್ತು. ಆಗ ನನಗೆ ಹೊಳೆದಿದ್ದೆ ಹೊಸ ಹೊಸ ಯೋಚನೆಗಳು. ಈ ಹೊಸ ಯೋಚನೆಗಳು ನನ್ನ ಜೀವನದ ಸಂತೋಷಕ್ಕೆ ದಾರಿ ಆಗಬಹುದು ಎಂದು ನಾನು ಆರಂಭಿಸಿದ ಕ್ಷಣದಲ್ಲಿ ಯೋಚಿಸಿರಲಿಲ್ಲ. ನನಗೆ ಕೆಲವು ವಿಷಯಗಳನ್ನು ನಿಮ್ಮಲ್ಲೂ ಹಂಚಿಕೊಳ್ಳೋಣ ಅನಿಸಿತು. ಕೆಲವು ತುಣುಕುಗಳು ಇಲ್ಲಿವೆ.

ನಾನು ಮಲ್ಲೇಶ್ವರದ ಒಂದು ಹಣ್ಣಿನ ವ್ಯಾಪಾರ ಮಾಡುವ ಹೆಣ್ಣಿಗೆ ಹಣ್ಣು ಖರೀದಿಸುವ ಖಾಯಂ ಗಿರಾಕಿ. ಮೊದ ಮೊದಲು ನಾನು ಹಣ್ಣು ನೋಡಿ “ಬೆಲೆ ಎಷ್ಟು?” ಎಂದು ಕೇಳುತ್ತಿದ್ದೆ. ಅವಳು “೩೦ ರುಪಾಯಿ ಸರ್” ಎಂದು ಹೇಳುತ್ತಿದ್ದಳು. ಒಂದು ದಿನ ನನ್ನ ಪಕ್ಕ ಬಂದವನು “ಅಕ್ಕ ಎಷ್ಟು ಇದಕ್ಕೆ?” ಎಂದ. ಆಗ ನನಗೆ ಅನಿಸಿತು, ನಾವು ಯಾಕೆ ಬರೀ ನಮ್ಮ ಸಂಬಂಧಿಕರಿಗೆ ಮಾತ್ರ ಅಕ್ಕ, ಅಣ್ಣ ಎಂದು ಕರೆಯುತ್ತೇವೆ? ಬೇರೆಯವರಿಗೆ ಯಾಕೆ ಕರೆಯುವುದಿಲ್ಲ? ಎಂದು. ನಾನು ದಕ್ಷಿಣ ಕನ್ನಡದವನಾದ್ದರಿಂದ ಇಂಥ ಪದಗಳ ಬಳಕೆ ತುಂಬಾ ಕಡಿಮೆ. ಆ ದಿನ ಪ್ರಥಮ ಬಾರಿಗೆ ನಾನು ನನ್ನ ಜಾತಿ ಬಿಟ್ಟು ಯೋಚನೆ ಮಾಡಿದ್ದೆ. ಆವತ್ತು ನನಗೆ ಬೆಳೆಯಬೇಕೆಂದರೆ ಜಾತಿ ಮತ್ತು ಭಾಷೆ ಮೀರಿ ಬೆಳೆಯಬೇಕು ಅನಿಸಿತ್ತು.

ಮತ್ತೊಮ್ಮೆ ಅಲ್ಲಿ ಹೋದಾಗ “ ಅಕ್ಕ ಇದರ ಬೆಲೆ ಎಷ್ಟು?” ಎಂದು ಕೇಳಲು ಹೊರಟೆ. ಆದರೆ ಅವತ್ತು ಬಾಯಿಯಿಂದ “ಅಕ್ಕ” ಎನ್ನುವ ಪದ ಹೊರಗೆ ಬರಲೇ ಇಲ್ಲ. ಮೊದಲನೆ ಸಲ ನನಗೆ ಸಂಬಂಧಿಕರಲ್ಲದವರನ್ನು ನಮ್ಮವರ ಥರ ನೋಡುವುದು ಎಷ್ಟು ಕಷ್ಟ ಎನ್ನುವುದು ಅರಿವಾಗಿತ್ತು. ಕೆಲವು ದಿನಗಳ ನಂತರ ನನಗೆ ಕರೆಯುವುದು ರೂಢಿಯಾಯಿತು. ಈಗ ನಾನು ತುಂಬಾ ವ್ಯತ್ಯಾಸವನ್ನು ಕಂಡು ಹಿಡಿದಿದ್ದೇನೆ. ಸರ್ ಅಂತ ಕರೆಯುತ್ತಿದ್ದವಳು ಈಗ ಅಣ್ಣ ಎನ್ನುತ್ತಾಳೆ. ೩೦ ರುಪಾಯಿ ಅಂತ ಹೇಳಿ ನಿಮಗೆ ೨೫ ಎನ್ನುತ್ತಾಳೆ. ನನಗೆ ಇನ್ನೊಂದು ತುಂಬಾ ಇಷ್ಟವಾದ ವಿಷಯ ಎಂದರೆ ಕೆಲವು ಸಲ “ನೀವು ಚೆನ್ನಾಗಿರ್ಬೇಕಣ್ಣ” ಎನ್ನುತ್ತಾಳೆ.

ಕೆಲವು ದಿನಗಳ ಹಿಂದೆ ಮಲ್ಲೇಶ್ವರ ಮೈದಾನದ ಮೂಲೆಯೊಂದರಲ್ಲಿ ಕುಳಿತಿದ್ದಾಗ ಒಬ್ಬ ಮಹಿಳೆ ಬಂದು, “ಮಗಾ, ನಿನಗೆ ಒಳ್ಳೆಯದಾಗತ್ತೆ, ಒಂದು ರುಪಾಯಿ ಕೊಡು ಮಗಾ” ಎಂದಳು. ನಾನು ಹೆಚ್ಚಾಗಿ ಯಾರಿಗೂ ಭಿಕ್ಷೆ ನೀಡುವುದಿಲ್ಲ. ನನಗೆ ಬೇಡುವವರ ಅಸಹಾಯಕತೆ ಇಷ್ಟವಾಗುವುದಿಲ್ಲ. ಆದರೆ ನಾನು ಇವಳಿಗೆ ಯೋಚಿಸಿ ಒಂದು ರೂಪಾಯಿಯನ್ನು ನೀಡಿದ್ದೆ. ನಾನು ಯಾಕೆ ಕೊಟ್ಟೆ? ಅಂತ ನಿಮಗೆ ಅನಿಸಬಹುದು. ನನಗೆ ಅವಳ ಮಾತು ಇಷ್ಟವಾಗಿತ್ತು. ನೀವು ಗುರುತಿಸಿದ್ದೀರಾ ಎನ್ನುವುದು ನನಗೆ ಗೊತ್ತಿಲ್ಲ. ಆದರೆ “ನಿನಗೆ ಒಳ್ಳೆಯದಾಗಲಿ”, “ನೀನು ಚೆನ್ನಾಗಿರಬೇಕು” ಎಂದು ನನಗೆ ಹೇಳಿದವರನ್ನು ನಾನು ಲೆಕ್ಕ ಹಾಕಬಲ್ಲೆ. ಈ ಜಗತ್ತಿನಲ್ಲಿ ಹೆಚ್ಚಿನವರಿಗೆ ಕಾಲು ಎಳೆಯುವುದರ ಬಗ್ಗೆ ಮಾತ್ರ ಚಿಂತೆ, ಒಳ್ಳೆ ಮಾತುಗಳನ್ನು ಆಡಲು ಸಹ ಸಮಯವಿರುವುದಿಲ್ಲ. ಅಂಥವರ ಮಧ್ಯೆ ಇರುವ ನನ್ನಂಥವರಿಗೆ ಒಂದು ಒಳ್ಳೆಯ ಮಾತು ಕೇಳಿದಾಗ ಮನಸ್ಸಿನ ಮೂಲೆಯಲ್ಲೊಂದು ಸಂತೋಷ.

ನಾನು ಒಂದು ಇಂಗ್ಲಿಷ್ ಲೆಕ್ಚರ್ ನ pdf document ಓದಿದ್ದೆ. ಅದರಲ್ಲಿ ಯಾವತ್ತೂ ನಾವು ನಮ್ಮ ಸುತ್ತ ಮುತ್ತ ಇರುವವರನ್ನು ನಮ್ಮ ಸಂಬಂಧಿಕರ ಥರ ನೋಡಿಕೊಂಡರೆ, ಅವರಿಂದ ನಮ್ಮ ಕಡೆ ಒಂದು ಗೌರವ ಇರುತ್ತದೆ ಎಂದು ಬರೆದಿತ್ತು. ನನಗೆ ಒಂದು experiment ಮಾಡಿಯೆ ಬಿಡೋಣ ಅನಿಸಿತು. ಅವತ್ತಿನಿಂದ ನಮ್ಮ ವಾಹನ ಚಾಲಕನ ಹೆಸರು ಕರೆಯುವುದನ್ನು ಬಿಟ್ಟು “ಅಣ್ಣ” ಎಂದು ಕರೆಯಲು ಪ್ರಾರಂಭಿಸಿದೆ. ಇವತ್ತು ನಾನು ನನ್ನ ಕಂಪೆನಿಯ ವಾಹನ ಚಾಲಕನಲ್ಲಿ ಒಂದು ವ್ಯತ್ಯಾಸವನ್ನು ಗಮನಿಸಿದ್ದೇನೆ. ಹಾಗೆ ನನಗೆ ಒಂದು ಅಭ್ಯಾಸವಿದೆ. ನನ್ನ ಗೆಳೆಯರ ಅಮ್ಮಂದಿರನ್ನು “ಆಂಟಿ” ಎಂದು ಕರೆಯುವ ಬದಲು “ಅಮ್ಮ” ಎಂದೆ ಕರೆಯುತ್ತೇನೆ. ನಾನು ಹಾಗೆ ಕರೆದ ಮೇಲೆ ಆ ಅಮ್ಮಂದಿರು ನನ್ನನ್ನು ನೆನಪು ಇಟ್ಟುಕೊಂಡಿರುವುದನ್ನು ಗಮನಿಸಿದ್ದೇನೆ.

ಒಂದು ಕಾಲದಲ್ಲಿ ನಾನು ಶಂಕರ್ ನಾಗ್ ನ “ ಅನಾಥ ಮಗುವಾದೆ ..ನಾನು” ಎನ್ನುವ ಹಾಡನ್ನು ಗುನುಗುತ್ತಾ ಕೂತಿದ್ದೆ. ಆದರೆ ನನಗೆ ಅನಿಸಿದ್ದು, ನಿಜವಾಗಿ ಇಲ್ಲಿ ಹೆಚ್ಚಿನವರು ಅನಾಥರಲ್ಲ. ಅನಾಥರನ್ನಾಗಿ ಮಾಡುವುದು ನಮ್ಮ ಆಲೋಚನೆ ಎನ್ನುವುದನ್ನು ಮನಗಂಡಿದ್ದೇನೆ. ಎಷ್ಟೋ ಮಂದಿ ಜೀವನ ಬೋರು ಕಣೊ! ಎಂದು ಹೇಳಿಕೊಂಡು ಕುಡಿತ, ಸಿಗರೇಟು ಸೇದುವುದನ್ನು ನೋಡಿದ್ದೇನೆ. ಅವರಿಗೆ ಬದುಕಿನ ಸಣ್ಣ ಪುಟ್ಟ ಸಂತೋಷಗಳ ಅರಿವಿರುವುದಿಲ್ಲ. ತಮ್ಮ ನಾಳೆಯ ಬದುಕೆಂಬ ಮಹಲನ್ನು ಕಟ್ಟಬೇಕೆಂಬ ಆಸೆಯಿರುವುದಿಲ್ಲ. ನನಗೆ ಇವತ್ತು ತುಂಬ ಜನ ಕಷ್ಟ ಸುಖ ಕೇಳುವವರಿದ್ದಾರೆ; ಹೇಳುವವರಿದ್ದಾರೆ. ನಮ್ಮ ಜೀವನ ಇರುವುದು ಇಂತಹ ಸುಂದರವಾದ ಸಂಬಂಧಗಳಲ್ಲೆ ಅಲ್ಲವೆ? ನಿಮಗೇನನಿಸುತ್ತದೆ? “ನಿಮಗೆ ಒಳ್ಳೆಯದಾಗಲಿ”.

ಮಜಾ ಮಾಡಿ .!

8 comments:

Pradeep CS said...

Boss tumba chennagi ide nimma article.
Jeevandalli istu bega writer agtira anta ankondirallilla.
Neevu baavanegala keduko barahagararagiddiri.

Mundenu eetara bartairi.

Anonymous said...

ಸೂಪರ್ ಬಾಸ್ :)

Jagadeesha said...

It is Super duper re ...Too Good

Amaranath V.B said...

ನಿಮ್ಮ ಭಾವಲಹರಿ ಸೊಗಸಾಗಿದೆ...ಅಡ್ಡಗೋಡೆಯ ಮೇಲೆ ದೀಪ ಇಟ್ಟಹಾಗೆ ಮಾತಾಡೋ ಈ ಕಾಲದಲ್ಲಿ ವ್ಯಕ್ತಿಗಳಿಗೆ,ಸಂಬಂಧಗಳಿಗೆ ಬೆಲೇನೆ ಇಲ್ಲದ ಹಾಗಾಗಿದೆ. ದೊಡ್ಡ-ದೊಡ್ಡ ಸಂತೋಷಗಳ ಬೆನ್ನಹತ್ತಿ ಕೈಗೆಟುಕುತ್ತಿರುವ ಸಂತೋಷವನ್ನ ನೋಡದ ಕುರುಡರಾಗಿದ್ದೀವಿ... "ಅನಾಥರನ್ನಾಗಿ ಮಾಡುವುದು ನಮ್ಮ ಆಲೋಚನೆ ಎನ್ನುವುದು" ಸತ್ಯ...ಆದ್ರೂ... ಪ್ರತಿಯೊಬ್ಬರ ಹೃದಯದ ಒಂದು ಮೂಲೆಯಲ್ಲಿ "ನನ್ನವರು ಅಂತ ಒಬ್ಬರು ಇದ್ದರೆ ಸಾಕು" ಅನ್ನೋದು ಕೊರೆದಿರುತ್ತೆ...

Vijendra ( ವಿಜೇಂದ್ರ ರಾವ್ ) said...

ರವಿ, ನಿಮ್ಮ ಎಲ್ಲಾ ಬರಹಗಳಲ್ಲಿ ಅತ್ಯುತಮವಾದದ್ದು. ತುಂಬಾ ಚೆನ್ನಾಗಿದೆ. ಇನ್ನೂ ಸ್ವಲ್ಪ ವಿಸ್ತಾರವಾಗಿದ್ರೆ ಚೆನ್ನಾಗಿರ್ತಿತ್ತು.

Anonymous said...

namaste .... tumba chennagide ...

nimma lekhanagalu mathstu mudi barali ....

all the best

Parisarapremi said...

ನಿಜ.. ಬದುಕು ಸುಂದರವಾಗಿದೆ.. ಅದರ ಸೌಂದರ್ಯವನ್ನು ನಾವು ತೆರೆದ ಕಣ್ಣುಗಳಿಂದ, ತೆರೆದ ಮನದಿಂದ ನೋಡಿ ಅನುಭವಿಸಬೇಕು.. :-)

Rama Mohana Saradka said...

Very Interesting Article RP. What ever you have written is true as per my stratergy is considred.