“ಆ ಬೆಲ್ಟ್ ಅನ್ನು ತೆಗಿ, ಇನ್ನು ಮುಂದೆ ಅಮ್ಮನೆ ಆ ಬೆಲ್ಟ್ ಅನ್ನು ನಿನಗೆ ಹಾಕಬೇಕು” ಎಂದು ಕೋಪದಿಂದ ಹೇಳಿದೆ ಅವನಿಗೆ. ಅವನ ಆ ಪುಟ್ಟ ಕಣ್ಣುಗಳಲ್ಲಿ ಆಗ ನನಗೆ ಕಾಣಲು ಸಿಕ್ಕಿದ್ದು ಒಂದು ಸಣ್ಣನೆಯ ಭಯ. ತಾನು ಏನೋ ತಪ್ಪು ಮಾಡಿದ್ದೇನೆ ಎನ್ನುವ ಆತಂಕ. ಮಾವನಿಗೆ ಏನೋ ಕೋಪ ಬಂದಿದೆ ಎನ್ನುವ ಯೋಚನೆ, ಜೊತೆಗೆ ಬೆಲ್ಟ್ ಅನ್ನು ಹಾಕಿಯೇ ಬಿಡಬೇಕೆನ್ನುವ ಹಂಬಲ. ನನ್ನ ಮಾತನ್ನು ಕೇಳಿಯೂ ಕೂಡ ಆತ ತನ್ನ ಕೆಲಸವನ್ನು ಮುಂದುವರೆಸಿದ. ಹೌದು, ನಾನು ಹೇಳಲು ಹೊರಟಿರುವುದು ನನ್ನ ಅಕ್ಕನ ಮಗ “ಸಮರ್ಥ್” ಬಗ್ಗೆ.
ಈ ನನ್ನ ಅಳಿಯನ ತುಂಟತನ ಎಂತಹ ತಾಳ್ಮೆ ಇರುವವರಿಗೂ ಒಂದು ಸವಾಲು. ಅವನ ಜೊತೆಗೆ ಇದ್ದಾಗಲೆಲ್ಲ ನಾನು ನನಗೆ ಹೇಳಿಕೊಳ್ಳುತ್ತಿರುತ್ತೇನೆ, “ತಾಳ್ಮೆ, ತಾಳ್ಮೆ” ಎಂದು. ಆದರೆ ಏಕೋ ಗೊತ್ತಿಲ್ಲ, ಅವನ ತುಂಟತನ ನೋಡಿದಾಗ ನನ್ನ ತಾಳ್ಮೆಯೇ ಎಲ್ಲೋ ಅಡಗಿ ಕುಳಿತಿರುತ್ತದೆ. ನಾನು ಸಿಡುಕಿದ ತಕ್ಷಣ ನನಗೆ ನನ್ನ ಬಗ್ಗೆಯೇ ಒಂದು ನಗುವನ್ನು ಬರುವ ಹಾಗೆ ಮಾಡುತ್ತದೆ.
ಇತ್ತೀಚೆಗೆ ನಾನು ಅವನಿಗೊಂದು ಬೆಲ್ಟ್ ತೆಗೆಸಿಕೊಟ್ಟಿದ್ದೆ. ಅದು adjustable ಬೆಲ್ಟ್. ಹಿಂದೆ ಒಂದು ಬೆಲ್ಟ್ ಇತ್ತಂತೆ. ಅದು normal ಬೆಲ್ಟ್; ಅದನ್ನು ಹಾಕುವ ಉತ್ಸಾಹದಲ್ಲಿ ಎರಡೇ ದಿನದಲ್ಲಿ ಆ ಬೆಲ್ಟ್ ಅನ್ನು ತುಂಡು ಮಾಡಿ ಬಿಟ್ಟಿದ್ದನಂತೆ. ಆದರೆ ನನ್ನ ಅಕ್ಕನಿಗೆ ತನ್ನ ಮಗನಿಗೊಂದು ಬೆಲ್ಟ್ ಹಾಕಬೇಕೆನ್ನುವ ಆಸೆ. ಹಾಗಾಗಿ ನನ್ನಲ್ಲಿ ಅವನಿಗೊಂದು ಬೆಲ್ಟ್ ತೆಗೆಸಿಕೊಡಲು ಹೇಳಿದ್ದಳು. ನಾನು ಬೆಲ್ಟ್ ಕೊಡಿಸಿದ್ದೇ ತಡ, ಈ ಬೆಲ್ಟ್ ಅನ್ನು ಕೂಡ ತೆಗೆಯುವುದು ಹಾಕುವುದಕ್ಕೆ ಶುರುವಿಟ್ಟುಕೊಂಡನಲ್ಲ ಈ ಪುಣ್ಯಾತ್ಮ. ಇವನು ಯಾವಾಗ ಇದಕ್ಕೂ ಒಂದು ಒಂದು ಗತಿ ಕಾಣಿಸುತ್ತಾನೋ ಎನ್ನುವ ಆತಂಕ ನನಗೆ. ಒಂದೆರಡು ಸಲ ಹಾಕಿ ತೋರಿಸಿದೆ. ಸಮಾಧಾನ ಆಯಿತು ಅನಿಸುತ್ತದೆ, ಬದಿಗೆ ಇಟ್ಟ. ಇಟ್ಟು ಐದು ನಿಮಿಷ ಮುಗಿದಿಲ್ಲ, ಮತ್ತೆ ಅದೇ ಆಟ. ಈ ಸಲ ನನಗೆ ಎಲ್ಲಿತ್ತೋ ಕೋಪ? ರೇಗಿಯೇಬಿಟ್ಟೆ. ಆದರೂ ಅವನು ಬಿಡಲಿಲ್ಲ ನೋಡಿ. ನನಗೆ ಬೆನ್ನು ಹಾಕಿ ಬೆಲ್ಟ್ ಹಾಕಲು ಶುರು ಮಾಡಿದ. ರೇಗಿದ ಮೇಲೆ ನನಗೆ ಅನಿಸಿತು. ನನ್ನದೇನಿದ್ದರೂ ಪುಗಸಟ್ಟೆ ಕೋಪ, ಇಂಥವನಲ್ಲಿ ತೋರಿಸುವುದಕ್ಕೆ ಸರಿ. ಅದಕ್ಕೆ ಅವನೂ ಬೆಲೆ ಕೊಡುವುದಿಲ್ಲ ಅಂತ. ಆದರೆ ನನಗೆ ಅವನಲ್ಲಿ ತುಂಬಾ ಇಷ್ಟವಾಗಿದ್ದು ಏನೆಂದರೆ, ತಾನೇ ಕಲಿಯಬೇಕೆಂಬ ಛಲ. ಆ ಛಲ ಇರಬೇಕು ಮಕ್ಕಳಿಗೆ. ಅದನ್ನು ಮುರುಟಿ ಹಾಕುವ ಕೆಲಸ ನಾವು ಮಾಡಬಾರದು. ತಾನೇ ಬೆಲ್ಟ್ ಹಾಕಲು ಕಲಿಯಬೇಕೆಂಬ ಅವನ ಛಲ ಸರಿಯೇ. ಆದರೆ ನನಗೆ ಮುರಿದು ಹೋದರೆ ಎನ್ನುವ ಆತಂಕ. ಇತ್ತೀಚೆಗೆ ಎಸ್. ಎಮ್. ಎಸ್. ಮಾಡಲು ಪ್ರಾರಂಭಿಸಿದ್ದಾನೆ. ನನಗೆ ಅವನ ಉತ್ಸಾಹ ಕುಂಠಿತಗೊಳಿಸುವ ಮನಸ್ಸಿಲ್ಲ. ಹಾಗಾಗಿ ನನ್ನ ಹಣ ಪೋಲಾದರೂ ಎಸ್. ಎಮ್. ಎಸ್. ಮಾಡುತ್ತಿರುತ್ತೇನೆ.
ನನಗೆ ಮತ್ತು ಅವನಿಗೆ ತುಂಬಾ ಸಾಮ್ಯತೆ ಇದೆ. ಅವನು ಹುಟ್ಟಿರುವುದು ನನ್ನ ಜನ್ಮದಿನವಾದ ಜುಲೈ ಒಂದರಂದು. ನಾನು ಕೂಡ ಸಣ್ಣವನಿರುವಾಗ ತಲೆಹರಟೆ ಪ್ರಶ್ನೆಗಳನ್ನು ಕೇಳುತ್ತಿದ್ದೆ. ಈಗಲೂ ಕಡಿಮೆ ಆಗಿಲ್ಲ ಅಂತೀರಾ?. ಅವನು ಕೂಡ ತಲೆ ಬುಡ ಇಲ್ಲದ ಪ್ರಶ್ನೆಗಳನ್ನು ಕೇಳುತ್ತಿರುತ್ತಾನೆ. ನನಗೂ ಸಣ್ಣವನಿರುವಾಗ ನಾಣ್ಯಗಳನ್ನು ಕೂಡಿಡುವ ಅಭ್ಯಾಸವಿತ್ತು. ಇವನಿಗೂ ಆ ಅಭ್ಯಾಸವಿದೆ. ನನ್ನ ಅಕ್ಕನಲ್ಲಿ ಕೇಳಿದರೆ, ಇಂತಹ ಅನೇಕ ಹೋಲಿಕೆಗಳನ್ನು ಮಾಡುತ್ತಾ ಹೋಗುತ್ತಾಳೆ. “ನನಗೆ ನೀನೆ ನೆನಪಾಗುತ್ತಿರುತ್ತಿಯ ಇವನ ಚೇಷ್ಟೆ ನೋಡಿದಾಗ” ಎನ್ನುತ್ತಿರುತ್ತಾಳೆ. ಅವಳೇನಿದ್ದರೂ ಹಾಗೆ, ಎಲ್ಲವನ್ನು ರವಿಗೆ ಹೋಲಿಸಿದಾಗಲೇ ಅವಳ ಮನಸ್ಸಿಗೆ ಸಮಾಧಾನ.
ನಾನು ನನ್ನ ಅಳಿಯನ ಬಗ್ಗೆ ಹೇಳಲು ಹೊರಟಾಗ ಅವನು ತಂದಿಟ್ಟ ಅವಾಂತರದ ಬಗ್ಗೆ ಹೇಳಲೇಬೇಕು. ಒಂದು ದಿನ ನಾನು ನನ್ನ ಅಕ್ಕನ ಸಂಸಾರದ ಜೊತೆಗೆ ಒಂದು ಪೂಜೆಗೆ ಹೋಗಿದ್ದೆ. ಅಲ್ಲಿ ಪೂಜೆ ಮುಗಿದು ಎಲ್ಲರೂ ಊಟಕ್ಕೆ ಕುಳಿತಿದ್ದರು. ನಾನು ಎಂದಿನಂತೆ ಬಡಿಸುತ್ತಿದ್ದೆ. ಅದೇ ಸಮಯಕ್ಕೆ ಸರಿಯಾಗಿ ನನ್ನ ಅಳಿಯನಿಗೆ ನಂ 2 ಬಂದು ಬಿಟ್ಟಿದೆ. ನನ್ನ ಗೆಳೆಯರು ಯಾವಾಗಲೂ “ಅಳಿಯ” ಅಂದಾಗಲೆಲ್ಲ “ಮಾಮ .. ಮಾಮ … ಆಯ್ತು” ಅಂತ ಹೇಳುತ್ತಿರುತ್ತಾರೆ. ಸರಿಯಾಗಿ ಇವನಿಗೆ “ವಿಜಯದ ಸಂಕೇತ” ಬಂದೆ ಬಿಟ್ಟಿತಲ್ಲ ಎನ್ನುವ ಚಿಂತೆಯಾಯಿತು ನನಗೆ. ಸರಿ, ಎಂದು ಕರೆದುಕೊಂಡು ಹೋಗಿ ಎಲ್ಲ “clean” ಮಾಡಿ ಕರೆದುಕೊಂಡು ಬಂದೆ. ಅದನ್ನು ನೋಡಿದ ಕೆಲವು ಅಮ್ಮಂದಿರಿಗೆ ಒಳಗೊಳಗೇ ಏನೋ jealousy ಆಯಿತು ನೋಡಿ. ಇವನು ನಮ್ಮ ಸಹಾಯ ಕೇಳಲೆ ಇಲ್ಲವಲ್ಲ ಅಂತ ಇರಬೇಕು. ಅಥವಾ ಅವರ ಗಂಡಂದಿರು ಇಂತಹ ಘನ ಕಾರ್ಯವನ್ನು ಮಾಡಿಯೇ ಇಲ್ಲ ಅನಿಸುತ್ತದೆ. ನಾನು ಬಂದಾಗ ಕೇಳಿದರು “ಅದು ಹೇಗೊ clean ಮಾಡಿದೆ?” ಅಂತ. ಅವರಿಗೆ ಹೇಳಿದೆ, “ನೀವು ರಜನೀಕಾಂತ್ ಚಲನ ಚಿತ್ರ ನೋಡಿದ್ದೀರಾ? ಹೇಗೆ ಕೈ ತಿರುಗಿಸುತ್ತಾನೆ? ಅಂತ. ಅವನ ಸಿನೆಮಾ ಒಂದು ಸಲ ನೋಡಿದರೆ ಸಾಕು. ಈ ಕೆಲಸ ಸಲೀಸು“ ಎಂದೆ. ಉತ್ತರ ಕೇಳಿದ ಎಲ್ಲ ಅಮ್ಮಂದಿರು ಅಲ್ಲೇ ಸುಸ್ತಾಗಿ ಬಿಟ್ಟರಲ್ಲ. ಆಗ ಬಂತು ನೋಡಿ ಅಲ್ಲಿದ್ದ ಒಬ್ಬ ಅಕ್ಕನ ಪಿ.ಜೆ. “ ನಿನಗೆ ಕೈ ತೊಳೆಯಲು ಸೋಪ್ ಬೇಕಾಗಿಲ್ಲ ಅಲ್ವಾ?” ಅಂತ. ಅದನ್ನು ಕೇಳಿದ ನನಗೆ shock. ಯಾಕೆಂದರೆ ನಾನು ಚಿಕ್ಕಂದಿನಿಂದಲೂ ಒಂದು ರೀತಿಯಲ್ಲಿ ಮಡ್ ಸನ್. ಮನೆಗೆ ಬಂದು ೧೫ ನಿಮಿಷವಾದರೂ ಕಾಲು ತೊಳೆಯದೆ ಓಡಾಡಿಕೊಂಡಿರುತ್ತೇನೆ. ಅಮ್ಮನಿಂದ ಬೈಸಿಕೊಂಡಾಗಲೇ ಜ್ನಾನ ಕಾಲಿನ ಕಡೆಗೆ ಹೊರಳುವುದು. ಹಾಗಾಗಿ ನನ್ನ ಹಣೆಬರಹವೇನಾದರೂ ಇವಳಿಗೆ ಗೊತ್ತಾಯಿತೆ? ಎಂಬ ಆತಂಕದಿಂದ ಅವಳನ್ನು ಕೇಳಿದೆ. “ಯಾಕೆ ಹೇಳಿದೆ ನೀನು ಅಂತ ಗೊತ್ತಾಗಲಿಲ್ಲ” ಅಂತ. ಅದಕ್ಕೆ ಅವಳಿಂದ ಬಂದ ಉತ್ತರ “ ನೀನು ಸೋಪ್ಟ್ ವೇರ್ ಇಂಜಿನಿಯರ್ ಅಲ್ವಾ?” ಅಂತ. ಅದನ್ನು ಕೇಳಿದ ನಾನು ಅಲ್ಲೇ ಸುಸ್ತಾಗಿ ಬಿಟ್ಟೆ.
ಇಂತಹ ಕೋಟಿ ತಂಟೆ, ಅವಾಂತರಗಳನ್ನು ತಂದಿಡುವ ಅಳಿಯನೊಬ್ಬ ನನಗಿದ್ದಾನೆ ಎಂದು ಹೇಳುವುದರಲ್ಲಿ ನನಗೊಂದು ಸಂತೋಷವಿದೆ. ಇದನ್ನು ಓದಿದ ನಿಮಗೂ ಇಂತಹ ಪುಟ್ಟ ಮಗು ನಿಮಗೆ ತಂಟೆ ಮಾಡಿದ ನೆನಪು ಬಂದಿರಬಹುದು. ಅಂದ ಹಾಗೆ ನಿಮಗೂ “….. ಆಯ್ತು” ಎನ್ನುವ ಇಂಪಾದ ಧ್ವನಿ ಕೇಳುವ ಸೌಭಾಗ್ಯ ಬರಲಿ. ಆ ಇಂಪಾದ ಧ್ವನಿ ಕೇಳಿ ನಿಮ್ಮ ಕೈ ತಂಪಾಗಲಿ. ಒಂದು ವೇಳೆ ಈಗಾಗಲೆ ಈ ಧ್ವನಿ ಕೇಳಿದ್ದರೆ, ನಿಮಗೆ Congrats !!!. ನೀವು ನಮ್ಮದೇ route ನಲ್ಲಿ ಇದ್ದೀರ ಬಿಡಿ.
Subscribe to:
Post Comments (Atom)
2 comments:
Hey.. Good One...
Keep Washing your Hands daily !!!!
Hay Ravi, nice article.
Post a Comment