Wednesday, July 16, 2008

ಜಿಂಕೆ ಮರೀನಾ?...

ಒಂದು ದಿನ ನಾನು ಸುಮಾರು 8 ಗಂಟೆ ರಾತ್ರಿಗೆ ನನ್ನ ಆಫೀಸಿನಲ್ಲಿ ಕೆಲಸ ಮಾಡುತ್ತಾ ಕುಳಿತಿದ್ದೆ. ನನ್ನ ಅಕ್ಕ ಪಕ್ಕ ಕೆಲವು ಕನ್ನಡಿಗರಿದ್ದರೂ ಕನ್ನಡಿಗರಲ್ಲದವರ ಸಂಖ್ಯೆ ಅಲ್ಲಿ ಜಾಸ್ತಿ ಇತ್ತು. ಆಗ ನೋಡಿ ಬಂತು ಒಂದು ಕಂಪ್ಯೂಟರಿನಿಂದ ಈ ಹಾಡು. ಅಲ್ಲಿ ಇದ್ದದ್ದೇ ಕಡಿಮೆ ಜನ. ಅಲ್ಲಿದ್ದ ಎಲ್ಲರೂ ಹಾಡಿಗೆ ಹೆಜ್ಜೆ ಹಾಕಲು ಶುರು ಮಾಡಿದರು. ಅಷ್ಟೇ ಅಲ್ಲದೆ, ಅಲ್ಲಿಯೇ ನಿಂತುಕೊಂಡು ನೋಡುತ್ತಿದ್ದ ಕನ್ನಡ ಹುಡುಗಿಗೆ ಕೇಳಿದರು, ನಿನಗೆ ಡ್ಯಾನ್ಸ್ ಮಾಡಬೇಕು ಅನ್ನಿಸುವುದಿಲ್ವಾ? ಈ ಹಾಡು ಕೇಳಿದಾಗ ಅಂತ. ಹೌದು! ಈಗ ಎಲ್ಲ ಕಡೆ ಜಿಂಕೆ ಮರಿದ್ದೇ ಸದ್ದು. ಒಂದು ರೀತಿಯಲ್ಲಿ ಜಿಂಕೆ ಮರೀನಾ ಹಾಡು ಬರೀ ಕನ್ನಡಿಗರನ್ನು ಮಾತ್ರವಲ್ಲ; ಕನ್ನಡದಲ್ಲಿ ಆಸಕ್ತಿ ಇರುವವರನ್ನು ಸಹ ಕನ್ನಡಕ್ಕೆ ಇನ್ನಷ್ಟು ಹತ್ತಿರ ತಂದಿದೆ.

ಇಷ್ಟೇ ಆಗಿದ್ದರೆ ನಾನು ಸುಮ್ಮನೆ ಈ ಲೇಖನ ಬರೆಯುತ್ತಿರಲಿಲ್ಲ. ಅದೊಂದು ಕಾಲವಿತ್ತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡಿಗರಲ್ಲದವರನ್ನು ಬಿಡಿ, ನಮ್ಮ ಕನ್ನಡಿಗರೆ ಕನ್ನಡ ಮಾತನಾಡುವುದು ಯಾರ ಕಿವಿಗೂ ಬೀಳುತ್ತಿರಲಿಲ್ಲ. ಅದೊಂದು ಯಾವ ರೀತಿಯ ಕೀಳರಿಮೆಯೋ ನನಗೆ ಗೊತ್ತಿಲ್ಲ. ಆಗ ಇದ್ದ ರೇಡಿಯೋ ಸಿಟಿ ಕೂಡ ಎಂಥಹ ದರ್ಪ ತೋರುತ್ತಿತ್ತು ಎಂದರೆ ಕನ್ನಡ ಹಾಡು ಹಾಕುವುದ ಬದಿಯಲ್ಲಿರಲಿ, ಕೆಲವು ಶೋಗಳಲ್ಲಿ ಕನ್ನಡ ಮಾತನಾಡಿದರೆ ಸಾಕು ಸಂಪರ್ಕ ತಪ್ಪಿ ಹೋಗುತ್ತಿತ್ತು. ಆಗ ಹುಟ್ಟಿಕೊಂಡಿದ್ದೆ ಸಣ್ಣ ಸಣ್ಣ ಕನ್ನಡ ಸಂಘಟನೆಗಳು. ಹೀಗೆ ಕೆಲವರು ತಮ್ಮ ತಮ್ಮ ಕಂಪೆನಿಗಳಲ್ಲಿ ಕನ್ನಡ ಮಾತನಾಡಲು ಶುರುವಿಟ್ಟರು. ರೇಡಿಯೋ ಮಿರ್ಚಿಯಲ್ಲಿ ಮೊದಲ ಸಲ 24 ಗಂಟೆ ಕನ್ನಡ ಎಂಬ ಸುದ್ದಿ ಹೊರಬಿದ್ದಾಗ ಎಲ್ಲ ಕನ್ನಡ ಅಭಿಮಾನಿಗಳಲ್ಲಿ ರೇಡಿಯೋ ಮಿರ್ಚಿಯನ್ನು ಗೆಲ್ಲಿಸುವುದಕ್ಕಿಂತ ಕನ್ನಡಕ್ಕೆ ಅವಮಾನ ಎಸಗಿದ ರೇಡಿಯೋ ಸಿಟಿಯನ್ನು ಸೋಲಿಸಬೇಕೆಂಬ ಜಿದ್ದು ಹುಟ್ಟಿತ್ತು. ಆ ಕಾಲದಲ್ಲಿ ರೇಡಿಯೋ ಮಿರ್ಚಿಯನ್ನು ಬೆಂಬಲಿಸಿ ಎನ್ನುವ ಇ-ಮೇಲ್ ಗಳು ಹರಿದಾಡಿದ್ದವು. ಇಂದು ರೇಡಿಯೋದಲ್ಲಿ ಎಲ್ಲಿ ನೋಡಿದರಲ್ಲಿ ಕನ್ನಡಮಯ. ಅದರ ಅರ್ಥ ಇಷ್ಟೆ. ಒಳ್ಳೆಯ ಸಂಗೀತವಿದ್ದರೆ ಕೇಳುವವರು ಯಾವತ್ತೂ ಇರುತ್ತಾರೆ. ಮಾತ್ರವಲ್ಲ ಒಳ್ಳೆಯ ಸಂಗೀತವನ್ನು ಬೆಂಬಲಿಸುತ್ತಾರೆ ಕೂಡ.

ಈ ಥರದ ಹಾಡುಗಳು ಯಾವ ಸಮಯದಲ್ಲೂ ಕುಳಿತು ಗುನುಗುವ ಹಾಡುಗಳಲ್ಲ. ಕೆಲವು ಸಮಯದಲ್ಲಿ ಕುಳಿತು ಕೇಳುವಂಥವು. ಆದ್ದರಿಂದ ಆಗಾಗ ಆಯಾಯ ಕಾಲಕ್ಕೆ ತಕ್ಕಂತೆ ಇಂಥಹ ಹಾಡುಗಳು ಬಂದರೆ, ಮನಸ್ಸಿಗೂ ಒಂದು ಖುಷಿಯನ್ನು ಕೊಡುತ್ತದೆ ಮಾತ್ರವಲ್ಲ, ಸರ್ವ ಭಾಷಿಕರನ್ನು ಕೂಡ ಕನ್ನಡದತ್ತ ಸೆಳೆಯುತ್ತದೆ
.

No comments: