Friday, July 18, 2008

ಯಾರಿಗ್ಯಾರಿಹರೋ ಇಲ್ಲಿ?

“Good people do not need laws to tell them to act responsibly, while bad people will find a way around the laws.” – Plato.

ನಮ್ಮ ಜೀವನದಲ್ಲಿ ಕೆಲವು ಜನರಿರುತ್ತಾರೆ. ನೋಡಿದ್ದಕ್ಕೆ ಒಂದು ಕಾರಣ ಹಿಡಿದು ಹಿಂದೆ ಸರಿಯುತ್ತಿರುತ್ತಾರೆ. ಇನ್ನು ಕೆಲವರಿರುತ್ತಾರೆ ಅವರು ಸಮಾಜ ಕಲ್ಯಾಣಕ್ಕಾಗಿ ದುಡಿಯುವವರು. ಈ ಎರಡನೇ ಪಂಗಡದವರು ಎಂಥವರಿರುತ್ತಾರೆ ಎಂದರೆ, ಅವರಿಗೆ ನಮ್ಮ ಪರಿಚಯ ಬೇಕಾಗಿಲ್ಲ. ನಾವು ಯಾರು ಎನ್ನುವುದು ಕೂಡ ಬೇಕಾಗಿರುವುದಿಲ್ಲ. ಸಮಯಕ್ಕೆ ಸರಿಯಾಗಿ ಬಂದು ತಮ್ಮಿಂದ ಆಗಬೇಕಾದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ತಮ್ಮ ಜಾಗ ಖಾಲಿ ಮಾಡಿರುತ್ತಾರೆ. ಹಾಗೆ ಮಾಡುವುದರ ಮೂಲಕ ನಮ್ಮ ಯೋಚನಾ ಲಹರಿಯನ್ನೆ ಬದಲಿಸಿರುತ್ತಾರೆ. ಅಂಥವರನ್ನು ನೆನಪಿಸಿಕೊಳ್ಳುತ್ತಿರಬೇಕು, ಅವರು ಮಾಡಿದಂತಹ ಕೆಲಸವನ್ನು ನಾವು ಕೂಡಾ ಮಾಡುತ್ತಿರಬೇಕು. ಆಗಲೇ ನಾವು ನಮಗೆ ಸಹಾಯ ಮಾಡಿದವರಿಗೆ ಬಹುಶ: ಧನ್ಯವಾದ ಹೇಳುವುದಕ್ಕೆ ಅರ್ಹತೆಯಾದರೂ ಬರಬಹುದೇನೋ?

ನಾನು ಇತ್ತೀಚೆಗೆ ಒಂದು ರೀತಿಯ ಇಕ್ಕಟ್ಟಿಗೆ ಸಿಲುಕಿದ್ದೆ. ಅದೇನೆಂದರೆ, ವಿವಿಧ ಕಾರಣಗಳಿಂದಾಗಿ ನನ್ನ ಅಮ್ಮನಿಗೆ ಒಂದು ತಿಂಗಳ ಒಳಗಾಗಿ 8 ಬಾಟಲಿ ರಕ್ತ ಕೊಡಬೇಕಾಗಿತ್ತು. ಒಂದೆರಡು ಬಾಟಲಿಯಾದರೆ ರಕ್ತ ತೆಗೆದುಕೊಳ್ಳುವುದು ಕಷ್ಟವಲ್ಲ. ಅನಾಮತ್ತು 8 ಬಾಟಲಿ ರಕ್ತಕ್ಕೆ ನಾವೆಲ್ಲಿ ಹೋಗಬೇಕು?. ಅದಲ್ಲದೆ ಹೆಚ್ಚಿನ ಕಡೆ blood replacement ಮಾಡದೆ ಇದ್ದರೆ ರಕ್ತ ಕೊಡಲಾಗುವುದಿಲ್ಲ. ಕೆಲವು ಕಡೆ ಆ ಗ್ರೂಪ್ ನ ರಕ್ತ ಕೊಟ್ಟರೆ ಮಾತ್ರ ರಕ್ತ ಕೊಡುತ್ತಾರೆ. ನಾನು ಮಂಗಳೂರಿಗೆ ಹೋಗಿದ್ದಾಗ ಆಗಲೇ 6 ಬಾಟಲಿ ರಕ್ತ ಕೊಟ್ಟಾಗಿತ್ತು. ಒಂದು ದಿನ ಬೆಳಗ್ಗೆ ಆಸ್ಪತ್ರೆಯಿಂದ ನನಗೆ ಫೋನ್ ಬಂತು. ಆರ್ಜೆಂಟಾಗಿ ರಕ್ತ ಬೇಕು ಅಂತ. ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ blood replacement ಮಾಡಿದರೆ ಮಾತ್ರ ರಕ್ತ. ಆಗ ನಾನು ನನ್ನ ಅಣ್ಣನಿಗೆ ಫೋನಾಯಿಸಿದೆ. ಆದರೆ ನನಗೆ ಒಂದು ಬಾಟಲಿ ರಕ್ತಕ್ಕೆ ರಕ್ತ ದಾನದ ಚೀಟಿಯಿತ್ತು. ಒಂದು ಚೀಟಿಯಿದ್ದರೆ ೪೦೦ ರೂ. ಕೊಟ್ಟರೆ ಇನ್ನೊಂದು ಬಾಟಲಿ ರಕ್ತ ಕೊಡುತ್ತಾರೆ. ಆದರೆ ಆಮೇಲೆ ಬಂದು ಯಾರಾದರೂ ರಕ್ತ ಕೊಡಬೇಕು. ಆ ಬಗ್ಗೆ ಮಾತನಾಡುತ್ತಿದ್ದೆ. ಆಗ ನೋಡಿ ನಡೆಯಿತೊಂದು ಅಚ್ಚರಿಯ ಘಟನೆ. ನನ್ನ ಪಕ್ಕ ಒಬ್ಬಾತ ಬಂದು ರಕ್ತದಾನ ಮಾಡುತ್ತಿದ್ದೇನೆ ಮಾಲತಿ ಶರ್ಮಾ, ಒಮೆಗಾ ಹಾಸ್ಪಿಟಲ್ ಅಂದು ಬಿಟ್ಟ. ನನ್ನ ಅಣ್ಣ ನನಗೆ ಹೇಳಿದ್ದ ಒಬ್ಬನಿಗೆ ಹೇಳುತ್ತೇನೆ ಅವನು ಜನ ಕಳುಹಿಸಬಹುದು ಅಂತ. ಆದರೆ ಆ ಜನ ನಿಜವಾಗಿಯೂ ಬರಬಹುದು ಎಂದು ನಾನು ಊಹಿಸಿರಲಿಲ್ಲ. ನಮ್ಮ ಪರಿಚಯ ಇರುವವರೇ ನಮಗೆ ರಕ್ತ ಕೇಳಿದಾಗ ನೂರೆಂಟು ಕಾರಣ ಹೇಳಿ ತಪ್ಪಿಸಿಕೊಂಡಿದ್ದರು. ಹೀಗಿರುವಾಗ ಒಬ್ಬಾತ ಯಾರ ಪರಿಚಯವೂ ಇಲ್ಲದೆ ರಕ್ತ ಕೊಡುವುದು ಎಂದರೆ ಅಚ್ಚರಿಯಾಗದೆ ಇದ್ದೀತೆ?. ಯಾಕೋ ಅವನು ಅದರ ಅರ್ಜಿ ತುಂಬುತ್ತಿರುವಾಗ ಮಾತನಾಡಿಸಲೇಬೇಕು ಅನಿಸಿತು. ಸೀದಾ ಆತನ ಹತ್ತಿರ ಹೋಗಿ ಕೇಳಿದೆ ನಿಮ್ಮ ಹೆಸರೇನು? ಅಂತ. ಆತ ತನ್ನ ಹೆಸರು ಹೇಳಿದ. ಅದಕ್ಕೆ ಹೇಳಿದೆ, ನೀವು ರಕ್ತ ಕೊಡುತ್ತಿರುವ ಮಾಲತಿ ಶರ್ಮಾ ನನ್ನ ಅಮ್ಮ ಅಂತ. “ನಿಮ್ಮಿಂದ ದೊಡ್ಡ ಉಪಕಾರವಾಯಿತು. ನಿಮಗೆ ದೊಡ್ಡ ಧನ್ಯವಾದ” ಅಂದೆ. ನನಗೆ ಬೇಕಿದ್ದರೆ ೪೦೦ ರೂ ಕೊಟ್ಟರೆ ೨ನೇ ಬಾಟಲಿ ರಕ್ತ ಆ ಕೂಡಲೇ ಸಿಗುತ್ತಿತ್ತು. ಆದರೆ ಆ ವ್ಯಕ್ತಿ ಮೆರೆದ ಮನುಷ್ಯತ್ವ ನನ್ನ ಮನಸ್ಸಿಗೆ ತಾಕಿತ್ತು. ಮೊದಲನೆ ಬಾಟಲ್ ರಕ್ತ ಒಮೆಗಾ ಆಸ್ಪತ್ರೆಗೆ ಕೊಟ್ಟು ಎರಡನೇ ಬಾಟಲ್ ಅನ್ನು ಆತ ರಕ್ತದಾನ ಮಾಡಿದ ಮೇಲೆ ತೆಗೆದುಕೊಂಡು ಹೋಗಲು ನಿರ್ಧರಿಸಿದೆ. ನಾನು ಮೊದಲ ಬಾಟಲ್ ಕೊಟ್ಟು ಬರುವಷ್ಟರಲ್ಲಿ ಆತ ತನ್ನ ಕೆಲಸ ಮುಗಿಸಿ ಹೊರಟು ಹೋಗಿ ಆಗಿತ್ತು. ಆತ ನನಗೆ ಮತ್ತೆ ಸಿಗುತ್ತಾನಾ?... ಗೊತ್ತಿಲ್ಲ.

ಇನ್ನೊಂದು ಘಟನೆ ತುಂಬ ವಿಚಿತ್ರವಾದದ್ದು. ನಮ್ಮಲ್ಲೇ ಇರುವ ಸರಿಯೋ ತಪ್ಪೋ ಎಂಬ ಮನೋಭಾವನೆಗೆ ಸಂಬಂಧಪಟ್ಟಿರುವಂತಹುದು. ಆ ಘಟನೆ ನಡೆದದ್ದು ನನ್ನ ಅಮ್ಮ ಮರಣ ಹೊಂದಿದ ದಿನ. ನಮಗೆ ಆಪದ್ಬಾಂಧವ ಅಂತ ಇರುವವರು ನನ್ನ ಅಕ್ಕ(ದೊಡ್ಡಮ್ಮನ ಮಗಳು)ನ ಗಂಡ ಗಣೇಶ್ ಹೆಬ್ಬಾರ್ ಅಂತ. ಮರಣ ಹೊಂದಿದ ಕೂಡಲೇ ಎಲ್ಲ ಕಾರ್ಯಗಳನ್ನು ನಿರ್ವಹಿಸಿ ಹೆಣ ಹೊರಲು ಕೂಡ ನೆರವಾದರು. ನಮ್ಮ ಕಡೆ ಒಂದು ಅಲಿಖಿತ ನಂಬಿಕೆಯಿದೆ. ಅಪ್ಪ ಮತ್ತು ಅಮ್ಮ ಇದ್ದವರು ಹೆಣವನ್ನು ಮುಟ್ಟುವಂತಿಲ್ಲ ಎಂದು. ಆದರೆ ಇವರು ಆ ನಂಬಿಕೆಯನ್ನೇ ಬದಿಗಿಟ್ಟು ನಮಗೆ ಸಹಾಯ ಮಾಡಿದ್ದರು. ನಾನು ಮನೆಗೆ ಬಂದಾಗ ನನ್ನ ಅಕ್ಕ ನನ್ನಲ್ಲಿ ಹೇಳಿದಳು. ಈ ನನ್ನ ಭಾವ ಹೆಣ ಎತ್ತುತ್ತಿರುವಾಗ ಅವರ ಹೆಂಡತಿಯಲ್ಲಿ ಅನೇಕರು, “ನಿನ್ನ ಗಂಡನಲ್ಲಿ ಹೆಣ ಮುಟ್ಟಬೇಡ ಹೇಳು” ಎಂದು ಹೇಳುತ್ತಿದ್ದರಂತೆ. ಅದಕ್ಕೆ ಅವಳು, “ನನಗೆ ಅವರು ಮಾಡುತ್ತಿರುವ ಕೆಲಸದಲ್ಲಿ ತಪ್ಪು ಕಾಣಿಸುತ್ತಿಲ್ಲ. ಮಾಡಲಿ ಬಿಡಿ” ಅಂತ ಬಾಯಿ ಮುಚ್ಚಿಸಿದಳಂತೆ. ದಂಪತಿಗಳೆಂದರೆ ಹಾಗೆ ಇರಬೇಕು ಅಲ್ಲವೆ? ಒಬ್ಬರು ಮಾಡಿದ ಕೆಲಸವನ್ನು ಸರಿ ಇದೆ ಅನಿಸಿದಾಗ ಇನ್ನೊಬ್ಬರು ಸಮರ್ಥಿಸಬೇಕು. ಅದರ ಮರುದಿನ ಭಾವ ನನ್ನಲ್ಲಿ ಹೇಳುತ್ತಿದ್ದರು, “ಯಾರೋ ಹೆಣ ಮುಟ್ಟಬಾರದು ಹೇಳುತ್ತಿದ್ದರಂತೆ. ನಾನು ಪಿಯುಸಿ ಮಾಡುತ್ತಿರುವಾಗ ಒಬ್ಬರನ್ನು ತೊಡೆಯಲ್ಲಿ ಕೂರಿಸಿಕೊಂಡು ಬೆಂಗಳೂರಿನಿಂದ ಶಿವಮೊಗ್ಗ ತನಕ ಬಂದಿದ್ದೆ” ಅಂತ. ಹೌದು! ಯಾವುದೇ ಕೆಲಸ ಮಾಡುವುದಕ್ಕೂ ಯಾರು ಏನು ಹೇಳುತ್ತಾರೆ ಎಂದು ಲೆಕ್ಕಿಸದೆ ಕೆಲಸ ಮಾಡಬೇಕೆಂದರೆ, ಅದಕ್ಕೆ ಧೈರ್ಯ ಮುಖ್ಯ. ಕಾರ್ಯಕ್ರಮವೆಲ್ಲ ಮುಗಿದ ನಂತರ ಉಳಿದ ಹಿರಿಯರಿಗೆ ನಮಸ್ಕರಿಸುತ್ತಿರುವಾಗ ಈ ನನ್ನ ಅಕ್ಕ, ಭಾವನವರನ್ನು ಕೂಡ ಕರೆದು ನಮಸ್ಕಾರ ಮಾಡಿದೆ. ಆಗ ಆ ಮಹಾತಾಯಿಯ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ತಮ್ಮ ಕೆಲಸವನ್ನು ಗುರುತಿಸಿದರಲ್ಲ ಎನ್ನುವ ಸಮಾಧಾನ ಅದರಲ್ಲಿ ಇತ್ತೇನೋ?... ಗೊತ್ತಿಲ್ಲ.

ಹೀಗೆ ಕೆಲವರು ತಮ್ಮ ಪುಟ್ಟ ಕೆಲಸಗಳಿಂದ ನಮ್ಮಲ್ಲಿ ಅಳಿಸಲಾಗದ ಹೆಜ್ಜೆಗಳನ್ನು ಬಿಟ್ಟು ಹೋಗಿರುತ್ತಾರೆ. ನನಗೆ ಈ ಮೇಲಿನ ಘಟನೆಗಳು ಮನಸ್ಸಿಗೆ ತಾಕಿದ್ದು ಯಾಕೆಂದರೆ, ಇವೆರಡೂ ಘಟನೆಗಳು ಹಣವನ್ನು ಮೀರಿದಂಥವು. ನಾವು ಹೇಳುತ್ತಿರುತ್ತೇವೆ, ನಾನು ನನ್ನಿಂದಾದಷ್ಟು ಮಾಡಿದೆ ಎಂದು. ಅದರ ಬದಲು ನಾವು ಏನು ಅಗತ್ಯವಿದೆ ಎನ್ನುವುದನ್ನು ಅರಿತು ಕೆಲಸ ಮಾಡುವುದು ಜಾಣತನ. ಇಲ್ಲೊಂದು ವಿನ್ ಸ್ಟಲ್ ಚರ್ಚಿಲ್ ಅವರ ಮಾತಿದೆ. "It is no use saying, 'We are doing our best.' You have got to succeed in doing what is necessary" ಅಂತ. ನಾವು ಹಲವು ಸಲ ನಮ್ಮದೇ ಆದ ಚೌಕಟ್ಟಿನೊಳಗೆ ಯೋಚಿಸುತ್ತಿರುತ್ತೇವೆ. ಅದರಾಚೆ ನಮ್ಮ ಯೋಚನೆಗಳು ಸಾಗುವುದೇ ಇಲ್ಲ. “ಚಾಪೆ ಇದ್ದಷ್ಟೆ ಕಾಲು ಚಾಚು” ಎನ್ನುವುದು ಲೋಕರೂಢಿಯ ಮಾತು. ಆದರೆ ಕೆಲವರು ತನ್ನಿಂದ ಒಂದು ಸಹಾಯ ಆಗುವುದಾದರೆ ಚಾಪೆಯ ಹೊರಗೆ ಕಾಲು ಚಾಚಿದರೆ ಏನಾಗುತ್ತದೆ ನೋಡೋಣ ಎಂದು ಯೋಚಿಸುತ್ತಾರೆ. ಹಾಗಾಗಿಯೇ ಅಂಥವರು ಮನಸ್ಸಿಗೆ ಹತ್ತಿರವಾಗುತ್ತಾರೆ. ಹಲವು ಸಲ ನಾನು ಕೂಡ ಇಂತಹ ಹಣದಿಂದ ಕೊಳ್ಳಲಾರದಂತಹ ಕೆಲಸ ಮಾಡಬೇಕು ಅಂದುಕೊಳ್ಳುತ್ತೇನೆ. ಯಾವಾಗ ಮಾಡುತ್ತೇನೆ? ಎನ್ನುವುದು ಗೊತ್ತಿಲ್ಲ. ಆದರೆ ನನ್ನ ಅಂತಹ ಒಂದು ಪ್ರಯತ್ನ ಯಾವಾಗಲೂ ಜಾರಿಯಲ್ಲಿರುತ್ತದೆ.

3 comments:

Anonymous said...

Good One...
Yavatthu kuda evarantha janaranna, gatanegalanna mareyoke sadya illa..
thumba chennagide e bolg..

ಬಾನಾಡಿ said...

ಇಲ್ಲಿ ನೆನೆದ ಘಟನೆಗಳು ಅಮೂಲ್ಯವೂ ಆನನ್ಯವೂ ಆಗಿವೆ.
ಒಲವಿನಿಂದ
ಬಾನಾಡಿ

Anonymous said...

commendable bro...good piece of work...